ತುಮಕೂರು:
ರೈತರಿಂದ ಹಣ್ಣು, ತರಕಾರಿ ಖರೀದಿ, ಅವುಗಳ ಸಂಸ್ಕರಣೆ, ಮೌಲ್ಯವರ್ಧನೆ ಹೆಸರಿನಲ್ಲಿ ಆರಂಭಗೊಂಡ ಫುಡ್‍ಪಾರ್ಕ್ ಈಗ ಪಕ್ಕಾ ರಿಯಲ್ ಎಸ್ಟೇಟ್ ವ್ಯವಹಾರದ ಕೇಂದ್ರವಾಗಿ ಮಾರ್ಪಟ್ಟಿದೆ. ಉದ್ದೇಶಿತ ಸಾಧನೆಗಾಗಿ 110 ಎಕರೆಯಲ್ಲಿ ಶೇ.25 ರಷ್ಟನ್ನೂ ಕೂಡಾ ಮೂಲ ಉದ್ದೇಶಕ್ಕೆ ಅಭಿವೃದ್ಧಿಪಡಿಸಿಲ್ಲ. ಸರಿ ಸುಮಾರು ಕಾಲು ಭಾಗದಷ್ಟು ವಿಸ್ತೀರ್ಣ ಬಳಕೆಯಾಗುತ್ತಿದ್ದರೂ ಅದೂ ಸಹ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುವ ಒಂದು ಒಳ ರಹದಾರಿಯೇ ಆಗಿದೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಫುಡ್‍ಪಾರ್ಕ್ ಹೆಸರಿನಲ್ಲಿ ಪಕ್ಕಾ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ.
ಅತ್ಯಂತ ಕಡಿಮೆ ಬೆಲೆಗೆ ರೈತರ ಜಮೀನು ಪಡೆದು ಅದೇ ಜಾಗದಲ್ಲಿ ಬಂಪರ್ ಲಾಟರಿ ಹೊಡೆಯಲು ಮಾಲೀಕರು ಯೋಚಿಸಿದಂತಿದೆ. ಅಂದರೆ, ಅಲ್ಲಿ ಉದ್ದಿಮೆ –ವವ್ಯವಹಾರ ಮಾಡುವವರನ್ನು ಆಕರ್ಷಿಸಿ ಜಾಗವನ್ನು ನೆಲಬಾಡಿಗೆಗೆ ಕೊಡುವ ಕರಾಮತ್ತು ನಡೆಯುತ್ತದೆ. ತಾನು ಉತ್ಪಾದಿಸುವ ವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಆಯಾಮಗಳನ್ನು ಒಳಗೊಂಡೇ ವ್ಯವಹಾರ ಖರೀದಿಗೆ ಮುಂದಾಗುತ್ತಾರೆ.
ಆಸಕ್ತಿಯುಳ್ಳವರು ಬಿಲ್ಡಿಂಗ್ ಕಟ್ಟಿಕೊಳ್ಳಲು ಮುಂದೆ ಬಂದರೆ, ಆರ್ಥಿಕವಾಗಿ ಅಶಕ್ತರಾಗಿದ್ದರೆ ತಾವೇ ಕಟ್ಟಡ ಕಟ್ಟಿಕೊಡಲು ನೆರವಾಗುತ್ತಾರೆ. ಒಂದು ಕಡೆ ನೆಲ ಬಾಡಿಗೆಗೆ ಜಾಗ ಕೊಟ್ಟು ವ್ಯವಹಾರ ನಡೆಸುತ್ತಾರೆ. ಬಿಲ್ಡಿಂಗ್ ನಿರ್ಮಿಸಿ ಅದರಿಂದಲೂ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಮುಂದುವರಿದ ಮಾತುಕತೆಯಾದರೆ ಸದರಿ ಜಮೀನನ್ನು ಮಾರಲು ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೀಗೆ ಜಮೀನಿಗೆ ಸಂಬಂಧಪಟ್ಟ ಒಳ ಒಪ್ಪಂದಗಳು ಅಲ್ಲಿ ನಡೆಯುತ್ತಿದ್ದು, ಎಕರೆಗಟ್ಟಲೆ ಜಮೀನು ಮುಂದೊಂದು ದಿನ ಹೇಳಹೆಸರಿಲ್ಲದೆ ಯಾರದ್ದೋ ಪಾಲಾಗಬಹುದು.
ರೈತರಿಗೆ ಅನುಕೂಲವಾಗಲಿ, ನಿರುದ್ಯೋಗಿಗಳಿಗೆ ಕೆಲಸ ಸಿಗಲಿ ಎಂಬ ಮಹದಾಸೆಯಿಂದ ಆರಂಭಿಸಿದ ಈ ಫುಡ್‍ಪಾರ್ಕ್‍ನ ಮುಖ್ಯ ಧ್ಯೇಯೋದ್ದೇಶಗಳನ್ನೇ ಮರೆತು ಜಮೀನು ವ್ಯವಹಾರಕ್ಕೆ ಇಳಿಯುತ್ತಾರೆಂದರೆ ಸರ್ಕಾರ ಈ ಖಾಸಗಿ ಸಂಸ್ಥೆಗೆ ಇಷ್ಟೆಲ್ಲ ಅನುಕೂಲ ಮಾಡಿಕೊಡಬೇಕಿತ್ತೇ? ಉದ್ದೇಶಗಳನ್ನೇ ಗಾಳಿಗೆ ತೂರಿ ಸ್ವಾರ್ಥ ಸಾಧನೆಗೆ ಮುಂದಾಗಿರುವ ಸಂಸ್ಥೆಯ ಈ ಜಮೀನನ್ನು ಸರ್ಕಾರ ಏಕೆ ಹಿಂಪಡೆಯಬಾರದು? ಖಾಸಗಿಯವರು ಮಾಡುವ ಕೆಲಸವನ್ನೇ ಕೆಐಎಡಿಬಿ ಮಾಡಬಹುದಿತ್ತಲ್ಲವೆ? ರೈತರಿಂದ ಜಮೀನು ಖರೀದಿಸಿ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿ ಯಾರೋ ಖಾಸಗಿ ವ್ಯವಹಾರಸ್ಥರಿಗೆ ಅನುಕೂಲ ಮಾಡಿಕೊಡಲು ಸರ್ಕಾರ
ಇಷ್ಟೆಲ್ಲಾ ಶ್ರಮ ವಹಿಸಬೇಕಿತ್ತೆ?
ಯಾವುದೇ ಯೋಜನೆ ಸಿದ್ಧವಾಗಿ ಕಾಮಗಾರಿ ಆರಂಭವಾಗುವ ಸಂದರ್ಭದಲ್ಲಿ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸುತ್ತದೆ. ಕೊನೆಯತನಕ ಆ ಷರತ್ತುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಫುಡ್‍ಪಾರ್ಕ್ ವಿಷಯದಲ್ಲಿಯೂ ಇಂತಹ ಷರತ್ತುಗಳು ಉಲ್ಲೇಖಗೊಂಡಿವೆ. ಆದರೆ ಬಳಕೆಯಾಗಿಲ್ಲ. ಖಾಸಗಿ ಕಂಪನಿ ಹಾಗೂ ಸರ್ಕಾರದ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಂಡಿರುವ ಈ ಯೋಜನೆಯಡಿ ಇಂತಿಷ್ಟು ವರ್ಷಗಳ ಕಾಲ ಲೀಸ್‍ಗೆಂದು ನಿಗದಿಪಡಿಸಲಾಗಿದೆ.
ಉದ್ದೇಶಿತ ಯೋಜನೆಗಲ್ಲದೆ, ಬೇರಾವುದಕ್ಕೂ ಬಳಕೆ ಮಾಡಬಾರದೆಂಬ ಷರತ್ತುಗಳೂ ವಿಧಿಸಲ್ಪಟ್ಟಿವೆ. ಸರ್ಕಾರದ ಬೇರೆಲ್ಲ ಯೋಜನೆಗಳಡಿಯಲ್ಲಿ ಹೀಗೆ ಷರತ್ತುಗಳನ್ನು ಉಲ್ಲಂಘಿಸಿದರೆ ಕೂಡಲೇ ಕ್ರಮ ಕೈಗೊಳ್ಳುವ ಅಧಿಕಾರ ಇರುವಾಗ ಫುಡ್‍ಪಾರ್ಕ್
ವಿಷಯದಲ್ಲಿ ಈ ಪರಿಯ ನಿರ್ಲಕ್ಷ್ಯವಾದರೂ ಏಕೆ?
ರೈತರಿಂದ ಖರೀದಿಸಲಾಗುತ್ತಿರುವ ಉತ್ಪನ್ನಗಳೂ ಸಹ ರೈತರ ಹಿತಾಸಕ್ತಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಅಲ್ಲ. ತಮ್ಮ ಕಂಪನಿಗಳ ಮಾಲ್‍ಗಳಿಗೆ ಬೇಕಾದ ಪದಾರ್ಥಗಳನ್ನಷ್ಟೇ ಬೇಡಿಕೆಗನುಗುಣವಾಗಿ ಖರೀದಿಸಲಾಗುತ್ತಿದೆ. ಉದಾ: ಗೋಧಿ ಹಿಟ್ಟಿನ ಯೂನಿಟ್ ಇಲ್ಲಿದೆ. ಈ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳಿಗೆ ಯಾರಾದರೂ ಒಮ್ಮೆ ಸುತ್ತಾಡಿಕೊಂಡು ಬಂದರೆ ಎಲ್ಲಿಯೂ ಗೋಧಿ ಬೆಳೆಯುವ ಪ್ರದೇಶಗಳಿಲ್ಲ. ಹಾಗಿದ್ದ ಮೇಲೆ ಇಲ್ಲಿ ಗೋಧಿ ಹಿಟ್ಟಿನ ಕೇಂದ್ರ ಅಳವಡಿಸಿದ್ದಾದರೂ ಏಕೆ? ಇಲ್ಲಿ ಉತ್ಪತ್ತಿಯಾಗುವ ವೇಫರ್, ಬಿಸ್ಕೆಟ್ ಇತ್ಯಾದಿಗಳು ಗೋಧಿ ಉತ್ಪನ್ನಗಳಿಂದಲೇ ತಯಾರಾಗುತ್ತವೆ. ಆಲೂಗಡ್ಡೆ ಚಿಪ್ಸ್, ಟೊಮೆಟೋ ಕೆಚಪ್ ಸಿದ್ಧಪಡಿಸುವ ಘಟಕಗಳೂ ಇಲ್ಲಿವೆ. ಈ ಭಾಗದಲ್ಲಿ ಎಷ್ಟು ಮಂದಿ ಆಲೂಗಡ್ಡೆ ಬೆಳೆಯುವವರಿದ್ದಾರೆ? ಅದೆಷ್ಟು ರೈತರಿಗೆ ಇದರಿಂದ ಅನುಕೂಲವಾಗುತ್ತದೆ?
ಮೇಲ್ಕಂಡ ಒಂದೆರಡು ಸಣ್ಣ ಉದಾಹರಣೆಗಳನ್ನೇ ಗಮನಿಸಿದರೆ ಸ್ಥಳೀಯ ರೈತರಿಗೆ ಅನುಕೂಲವಾಗುವ ಯಾವೊಂದು ಪ್ರಯೋಜನವೂ ಫುಡ್‍ಪಾರ್ಕ್‍ನಲ್ಲಿಲ್ಲ. ಸ್ಥಳೀಯ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವವರೂ ಅಲ್ಲಿಲ್ಲ. ತಮ್ಮ ಬೇಕುಬೇಡಗಳನ್ನು ಈಡೇರಿಸಿಕೊಳ್ಳಲು ಎಷ್ಟು ಬೇಕೋ ಅದೆಲ್ಲವನ್ನೂ ನೆರವೇರಿಸಿಕೊಳ್ಳುತ್ತಿದ್ದಾರೆ. ಹೀಗೆ ಎಲ್ಲಿಂದಲೋ ಬಂದು ತನ್ನ ಉದ್ದಿಮೆ ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಲ್ಲಿನ ರೈತರ ಜಮೀನೇ ಬೇಕಾಗಿತ್ತೆ? ಸ್ಥಳೀಯ ರೈತರು ಹಾಳಾದರೂ ಪರವಾಗಿಲ್ಲ, ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ, ಯಾರೋ ಎಲ್ಲಿಂದಲೋ ಬಂದ ಮಹಾನು ಭಾವರು ಉದ್ಧಾರವಾಗಿ ಹೋಗಲಿ ಬಿಡು ಎಂಬ ಧೋರಣೆ ಬಂದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ಅತ್ಯಂತ ಕನಿಷ್ಠ ಬೆಲೆಗೆ ಜಮೀನು ನೀಡಿದ ಹಲವು ರೈತರು ಇಂದು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತಮ್ಮ ಬದುಕಿಗೆ ಆಸರೆಯಾಗಿದ್ದ ಜಮೀನು ಕಳೆದುಕೊಂಡಿದ್ದು ಒಂದು ಸಂಕಟವಾದರೆ, ಮಕ್ಕಳಿಗೆ ಉದ್ಯೋಗ ದೊರಕದೇ ಹೋದದ್ದು ಮತ್ತೊಂದು ಸಂಕಟ. ಆದರೆ ಇದೇ ಜಮೀನು ಈಗ ಕೋಟಿ ಕೋಟಿ ರೂ ಬೆಲೆ ಬಾಳುವ ಮಟ್ಟಕ್ಕೆ ಬೆಳೆದಿದ್ದು, ಇದರ ಲಾಭವನ್ನು ಖಾಸಗಿ ವ್ಯಕ್ತಿ ಪಡೆಯುತ್ತಿದ್ದಾನೆ. ಜಮೀನು ಹಸ್ತಾಂತರಿಸುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಪಾಲಿಸಿಲ್ಲ. ಗೋಮಾಳ ಒತ್ತುವರಿ, ಸಂರಕ್ಷಣೆ ಇತ್ಯಾದಿ ಉಲ್ಲಂಘನೆಯಾಗಿರುವ ವ್ಯಾಪಕ ಆರೋಪಗಳು ಇವೆ. ಇದಾವುದನ್ನೂ ಸಂಬಂಧಪಟ್ಟವರು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಷರತ್ತುಗಳು ಉಲ್ಲಂಘನೆಯಾಗುತ್ತಿದ್ದರೂ ಕ್ರಮ ಕೈಗೊಳ್ಳಲು ಇರುವ ಅಡಚಣೆಗಳಾದರೂ ಏನು? ಯಾವುದಾವುದೋ ವಿಷಯಕ್ಕೆ ಬಾಯಿ ಬಡಿದುಕೊಳ್ಳುವ ರಾಜಕಾರಣಿಗಳು ಈ ವಿಷಯದಲ್ಲಿ ಅದು ಹೇಗೆ ಮತ್ತು ಏಕೆ ಮೌನವಾಗಿದ್ದಾರೋ ಅರ್ಥವಾಗುತ್ತಿಲ್ಲ.
ತುಮಕೂರಿನ ಘಟಕ ಸೇರಿದಂತೆ ದೇಶದ ಐದಾರು ಕಡೆಗಳಲ್ಲಿ ಸರ್ಕಾರಿ ಸಹಕಭಾಗಿತ್ವದೊಂದಿಗೆ ಫುಡ್‍ಪಾರ್ಕ್ ಘಟಕಗಳು ಆರಂಭಗೊಂಡಿವೆ. ಸರ್ಕಾರವೇ ಮುಂದೆ ನಿಂತು ಇವುಗಳಿಗೆಲ್ಲ ಅನುಕೂಲ ಕಲ್ಪಿಸಿದೆ. ಪ್ರಧಾನಿಯವರೇ ಉದ್ಘಾಟಿಸಿದ್ದಾರೆ. ಅಂದಮೇಲೆ ಇಂತಹ ಘಟಕಗಳ ಮೇಲೆ ನಿಗಾ ಇರಬೇಕಲ್ಲವೆ? ಪಕ್ಕಾ ವ್ಯಾಪಾರ ಮತ್ತು ವ್ಯವಹಾರದ ಯೋಜನೆಯಾಗಿಯೇ ಬೆಳೆಯುತ್ತಿರುವ ಇಂತಹ ಘಟಕಗಳ ಕಡೆಗೆ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ?
ಫುಡ್‍ಪಾರ್ಕ್‍ನ ಆಶಯಗಳು ಈಡೇರುತ್ತಿಲ್ಲ, ಅಲ್ಲಿನ ಜಮೀನನ್ನು ಮಾರಲು ಹೊರಟಿದ್ದಾರೆ, ರೈತರಿಗೆ ಟೋಪಿ ಹಾಕಲಾಗುತ್ತಿದೆ ಎಂದು ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಕೆಂಡಕಾರಿದ್ದರು. ಅಲ್ಲಲ್ಲಿ ನಡೆದ ಸಭೆ ಸಮಾರಂಭಗಳಲ್ಲಿ ಫುಡ್‍ಪಾರ್ಕ್ ವಿರುದ್ಧ ಹರಿಹಾಯ್ದಿದ್ದರು. ಆದರೂ ಈವರೆಗೆ ಫುಡ್ ಪಾರ್ಕ್‍ನಿಂದ ಒಂದು ಸ್ಪಷ್ಟನೆಯೂ ಹೊರಬಂದಿಲ್ಲ. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಯೇ ಹೀಗೆ ಆರೋಪಿಸುತ್ತಾರೆಂದರೆ, ಆ ಆರೋಪವನ್ನು ನಿರಾಕರಿಸುವ ಒಂದು ಹೇಳಿಕೆಯೂ ಬಂದಿಲ್ಲವೆಂದರೆ ಹೇಳಿಕೆಗಳು ಸತ್ಯ ಎಂದು ನಂಬಲೇಬೇಕಲ್ಲವೆ? ಸರ್ಕಾರದಿಂದ ಎಲ್ಲವನ್ನೂ ಪಡೆದು ತನ್ನ ಸ್ವಂತ ಇಚ್ಛಾಶಕ್ತಿಗನುಗುಣವಾಗಿ ಈ ಘಟಕವನ್ನು ಮಾರ್ಪಡಿಸಿಕೊಳ್ಳಲು ಮುಂದಾಗಿರುವಾಗ ಸರ್ಕಾರವನ್ನು ಪ್ರತಿನಿಧಿಸುವವರು ಮೌನವಾಗಿರುವುದು ಏತಕ್ಕಾಗಿ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ