ಹೊಸಪೇಟೆ :
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಜನ ತೊಂದರೆ ಅನುಭವಿಸುವುದನ್ನು ಗಂಭಿರವಾಗಿ ಪರಿಗಣಿಸಿರುವ ಟ್ರಾಫಿಕ್ ಪೊಲೀಸರು ಭಾನುವಾರ ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದರು.
ಈ ವೇಳೆ ಟ್ರಾಫಿಕ್ ಪಿಐ ಅಯ್ಯನಗೌಡ ಪಾಟೀಲ ಮಾತನಾಡಿ, ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳು ಜನ ಹಾಗು ವಾಹನ ದಟ್ಟಣೆಯಿಂದ ಕೂಡಿರುತ್ತವೆ. ಅದರ ಮಧ್ಯೆ ಈ ತಳ್ಳುಬಂಡಿಯ ಬೀದಿ ವ್ಯಾಪಾರಿಗಳು ರಸ್ತೆ ಅತಿಕ್ರಮಣ ಮಾಡಿ ಇನ್ನಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ಇದರಿಂದ ಅಪಘಾತಗಳಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕಳೆದ 3 ದಿನಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿದ ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುತ್ತಿದೆ. ಹೋಟೆಲ್, ಲಾಡ್ಜ್, ಅಂಗಡಿ ಮಾಲೀಕರಿಗೂ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿದೆ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಹಾಕಿದ ಜಲ್ಲಿ, ಇಟ್ಟಿಗಿ, ಮರಳು, ಕಬ್ಬಿಣದ ರಾಡುಗಳ ಮಾಲೀಕರಿಗೂ ನೋಟೀಸ್ ನೀಡಲಾಗಿದೆ ಎಂದರು.
ಬೀದಿ ವ್ಯಾಪಾರಿಗಳಿಂದ ಪ್ರತಿಭಟನೆ :
ನಗರಸಭೆ ಹಾಗು ಟ್ರಾಫೀಕ್ ಪೊಲೀಸರು ನಗರದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಸಣ್ಣಪುಟ್ಟ ವ್ಯಾಪಾರಿಗಳು ದಿಡೀರನೆ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜೆಡಿಎಸ್ ಮುಖಂಡ ದೀಪಕಸಿಂಗ್ ಮಾತನಾಡಿ, ತಳ್ಳುಬಂಡಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಗುಬ್ಬಿಮೇಲೆ ಬ್ರಹ್ಮಾಸ್ತ್ರ ಹೂಡಿದಂತಾಗುತ್ತದೆ. ಕೂಡಲೇ ಅವರಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಚ್.ವಿಶ್ವನಾಥ ಹಾಗು ಪೌರಾಯುಕ್ತ ವಿ.ರಮೇಶ್, ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು. ಬಳಿಕ ನೀವು ವ್ಯಾಪಾರ ಮುಗಿದ ಮೇಲೆ ತಳ್ಳುಬಂಡಿಗಳನ್ನು ರಸ್ತೆಯಲ್ಲಿ ಬಿಡದೇ, ಮನೆಗೆ ಕೊಂಡೊಯ್ಯಬೇಕು ಎಂಬ ಷರತ್ತು ವಿಧಿಸಿದರು. ಇದಕ್ಕೆ ಒಪ್ಪಿದ ವ್ಯಾಪಾರಿಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಈ ಸಂಧರ್ಭದಲ್ಲಿ ಮುಖಂಡರಾದ ಭರತಕುಮಾರ್, ಕೆ.ಸಿ.ಕೇಶವ, ಪ್ರಶಾಂತನಾಯಕ, ಎಂ.ಡಿ.ರಫೀಕ್, ನಿಜಾಮ್, ಹೈದರ್, ಹಾಗು ಶಿವಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ