ತುಮಕೂರು
ಪುರಾತನ ಕಾಲದಿಂದ ಹಿಂದೂ ಪುರಾಣದಲ್ಲಿ ಅನುಸರಿಸುವ ಆಯುರ್ವೇದ ಚಿಕಿತ್ಸಾ ಪದ್ದತಿಯು ಪ್ರಾಥಮಿಕ ಚಿಕಿತ್ಸೆಗೆ ಉತ್ತಮವಾಗಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಹಾಗೂ 4ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಯೋಗ ಮತ್ತು ಆಯುರ್ವೇದ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆಗೆ ತರಬೇಕೆಂಬ ಆಶಯದೊಂದಿಗೆ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ.
ಅಲೋಪತಿ ಚಿಕಿತ್ಸಾ ಪದ್ದತಿಯಿಂದ ಆಗುವ ಅಡ್ಡಪರಿಣಾಮಗಳನ್ನು ಜನರು ಅರಿತು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಆಯುರ್ವೇದ ಪದ್ದತಿಯನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ದತಿಯನ್ನು ಭಾರತದಲ್ಲಿ ಅನಾದಿ ಕಾಲದಿಂದಲೂ ಅನುಸರಿಸುತ್ತಿದ್ದೇವೆ. ಬೇರೆ ದೇಶಗಳಲ್ಲಿಯೂ ಕೂಡ ಆಯುರ್ವೇದ ಪದ್ದತಿಯನ್ನು ಅನುಸರಿಸಲಾಗುತ್ತಿದೆ.
ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಇದರ ಬಗ್ಗೆ ಸಾರ್ವಜನಿಕರಿಗೆ ಪ್ರಚುರಪಡಿಸುವಲ್ಲಿ ವಿಫಲರಾಗುತ್ತಿದ್ದೇವೆ. ಇದೊಂದು ಉತ್ತಮ ಪದ್ದತಿಯಾಗಿದ್ದು, ಆಯುರ್ವೇದ ಅಭ್ಯಾಸ ಮಾಡುವವರು ಅದರ ಬಗ್ಗೆ ಅರಿವು ಮೂಡಿಸಿ ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ಸೂಚಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ|| ಸಂಜೀವಮೂರ್ತಿ ಮಾತನಾಡಿ, ಇಂದು ಆಯುರ್ವೇದ ಪ್ರವರ್ತಕ ಧನ್ವಂತರಿ ಅವರ ಜಯಂತಿಯ ಈ ದಿನವನ್ನು ಆಯುರ್ವೇದ ದಿನಾಚರಣೆಯಾಗಿ ಆಚರಿಸಲಾಗುವುದು. ಆಯುರ್ವೇದ ನಮ್ಮ ದೇಶದ ಚಿಕಿತ್ಸಾ ಪದ್ದತಿಯಾಗಿದೆ. ‘ದೀರ್ಘಾಯುಕ್ಕಾಗಿ ಆಯುರ್ವೇದ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಇತ್ತೀಚೆಗೆ ಅಕಾಲಿಕ ಮರಣ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಉತ್ತಮ ಆರೋಗ್ಯ ಇದ್ದು ದೀರ್ಘಾಯುಷಿಗಳಾಗಿರಬೇಕೆಂಬುದು ಈ ಘೋಷವಾಕ್ಯದ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಯುರ್ವೇದ ಜೀವನಶೈಲಿ ಕುರಿತ ಉಪನ್ಯಾಸವನ್ನು ನೀಡಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಮನೆಮದ್ದುಗಳಲ್ಲಿ ಬಳಸುವ ವಿವಿಧ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಯೋಗಪಟು ನಾಗರಾಜ ರಾವ್, ಡಾ|| ವೆಂಕಟೇಶ್‍ಮಯ್ಯ, ಸಂಯೋಜನಾಧಿಕಾರಿ ಡಾ|| ಪ್ರಭಾಕರ್, ಸಹಾಯಕ ಆಡಳಿತಾಧಿಕಾರಿ ಅಸ್ಲಾಂ ಬಾಷ, ಡಾ|| ಗುರುಪ್ರಸಾದ್, ಡಾ|| ಅತೀಕ್ ಅಹ್ಮದ್, ಡಾ|| ಪ್ರಸನ್ನ, ಆಯುಷ್ ಇಲಾಖೆಯ ಎಲ್ಲಾ ವೈದ್ಯಾಧಿಕಾರಿಗಳು, ಆಯುಷ್ ಕಚೇರಿಯ ಸಿಬ್ಭಂದಿ ವರ್ಗದವರು, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ