ಶಿರಾ
ವಿಕಲಚೇತನರು ಎಂದಿಗೂ ಅಸಹಾಯಕರಾಗಬಾರದು. ಅವರಲ್ಲಿ ಬದುಕಬೇಕೆಂಬ ಛಲವಿರಬೇಕಲ್ಲದೆ ಅವರು ಸ್ವಾವಲಬಿಗಳಾಗಿ ಬದುಕಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿ.ಪಂ. ಶ್ರೀಮತಿ ಲತಾ ರವಿಕುಮಾರ್ ತಿಳಿಸಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ಜಿ.ಪಂ. ಅಭಿವೃದ್ಧಿ ಅನುದಾನದಡಿಯಲ್ಲಿನ ಸೌಲಭ್ಯಗಳನ್ನು ಸುಮಾರು 57 ಮಂದಿ ವಿಕಲಚೇತನರಿಗೆ ವಿತರಿಸಿ ಅವರು ಮಾತನಾಡಿದರು.
ಸರ್ಕಾರವು ವಿಕಲಚೇತನರಿಗೆ ಹತ್ತು ಹಲವು ಯೋಜನೆಗಳಡಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದ್ದು ಅಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಯಬೇಕು. ಇಲಾಖೆಗಳು ಕೂಡ ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿ.ಪಂ. ಸದಸ್ಯ ಜೈಪ್ರಕಾಶ್ ಮಾತನಾಡಿ, ವಿಕಲಚೇತನರು ಬದುಕುವ ಚೈತನ್ಯ ಕಳೆದುಕೊಳ್ಳಬಾರದು. ಆದಾಯೋತ್ಪನ್ನದ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಎಂದರು.
ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳಲ್ಲಿ ಶಕ್ತಿ ಇದೆ. ಈ ಯೋಜನೆಗಳು ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದು, ಯೋಜನೆಯ ಅನುದಾನ ಪೋಲಾಗದಂತೆ ಫಲಾನುಭವಿಗಳು ಜಾಗ್ರತೆ ವಹಿಸಬೇಕು ಎಂದರು.ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಜಿ.ಪಂ. ಸದಸ್ಯರಾದ ಬೊಮ್ಮಣ್ಣ, ರಾಮಕೃಷ್ಣ, ಸಿಡಿಪಿಓ ಬಸವರಾಜು, ಸುರೇಕಾ ಠಾಕೆ, ಚೌಡಪ್ಪ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ