310.18 ಎಕರೆ ಭೂ ಅಕ್ರಮದಲ್ಲಿ ಶಾಮೀಲಾದ ಸರ್ಕಾರಿ ಅಧಿಕಾರಿಗಳು

ಬೆಂಗಳೂರು:

      ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ ಭೂ ಕಬಳಿಕೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿ.ಎಂ.ಕಾವಲ್ ನಲ್ಲಿ 310 ಎಕರೆ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆಂದು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಆರೋಪಿಸಿದ್ದಾರೆ.

       ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ದಕ್ಷಿಣ ತಾಲೂಕು ಬಿ.ಎಂ.ಕಾವಲ್ ಗ್ರಾಮದಲ್ಲಿರುವ ಸರ್ವೆ ನಂ.137 ನಲ್ಲಿರುವ 310.18 ಎಕರೆ ಸರ್ಕಾರಿ ಜಮೀನಿಗೆ ಶ್ರೀಹರಿ ಖೋಡೆ ಕುಟುಂಬದವರು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ. ಈ ಅಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು,ಬೆಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಸ್.ರಂಗಪ್ಪ ಎಂಬವರು ಶಾಮೀಲಾಗಿದ್ದಾರೆ ಎಂಬುದು ದಾಖಲೆಗಳಲ್ಲಿ ಬಹಿರಂಗವಾಗಿದೆ ಎಂದು ರಾಮಸ್ವಾಮಿ ಆರೋಪಿಸಿದರು.

         ಬಿ.ಎಂ.ಕಾವಲ್ ಭೂ ಕಬಳಿಕೆ ಸಂಬಂಧ ತಾವು ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದು, ಈ ಕುರಿತ ತನಿಖೆ ನಡೆಯುತ್ತಿದೆ. ವಿಚಾರಣೆ ನಡೆಯುವಾಗ ಆತುರದಲ್ಲಿ ಈ ಭೂಮಿ ಖಾಸಗಿಯವರದ್ದು ಎಂದು ವಿಶೇಷ ಜಿಲ್ಲಾಧಿಕಾರಿ ವರದಿ ನೀಡಿರುವುದರಲ್ಲಿ ದುರುದ್ದೇಶವಿದೆ. ಇದೇ ಪ್ರಕರಣದಲ್ಲಿ 2003ರಲ್ಲಿ ವಿಶೇಷ ಡಿಸಿಗಳಾದ ಕೃಷ್ಣೇಗೌಡ ಹಾಗೂ 2005 ರಲ್ಲಿ ವಿಶೇಷ ಡಿಸಿ ರಾಮೇಗೌಡ ಅವರು ಇದು ಸರ್ಕಾರಿ ಜಾಗವೆಂದು ಆದೇಶ ಹೊರಡಿಸಿದ್ದರು ಎಂದು ರಾಮಸ್ವಾಮಿ ದಾಖಲೆ ಸಹಿತ ವಿವರಿಸಿದರು. .

        ಬಿ.ಎಂ.ಕಾವಲ್ ಜಮೀನು ಪ್ರಕರಣ ನಾಲ್ಕು ಬಾರಿ ಉಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿದೆ.ನಾಲ್ಕು ಪ್ರಕರಣಗಳಲ್ಲಿಯೂ ವಿಶೇಷ ಜಿಲ್ಲಾಧಿಕಾರಿಗಳು ಬಿ.ಎಂ.ಕಾವಲ್ ಜಮೀನು ಸರ್ಕಾರಿ ಜಾಗವಾಗಿದ್ದು, ನಕಲಿ ದಾಖಲೆ ಸೃಷ್ಟಿತ ಜಮೀನು ಎಂದು ಹೇಳಿದ್ದು, ಹೈಕೋರ್ಟ್ ವಿಶೇಷ ಡಿಸಿ ಆದೇಶವನ್ನು ಎತ್ತಿ ಹಿಡಿದಿದೆ. ಜೊತೆಗೆ ತಿರುಚಿದ ಹಾಗೂ ಬೋಗಸ್ ದಾಖಲೆ ಎಂಬುದು ನ್ಯಾಯಾಲಯದಲ್ಲಿ ರುಜುವಾತು ಆಗಿದೆ. ಜಮೀನು ಮಂಜೂರಾತಿಗೆ ಯಾವುದೇ ಅಧಿಕೃತ ದಾಖಲೆ ಸಿಕ್ಕಿಲ್ಲವೆಂಬುದನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದರು.

         ಇಷ್ಟೆಲ್ಲಾ ನಡೆದಿದ್ದರೂ ಮರುವಿಚಾರಣೆ ವೇಳೆ ವಿಶೇಷ ಜಿಲ್ಲಾಧಿಕಾರಿ ರಂಗಪ್ಪ ಅವರು, ಸ.ನಂ.137ರ ಜಮೀನು ಹಿಡುವಳಿ ಜಮೀನಾಗಿದ್ದು, ಸರ್ಕಾರಿ ಜಮೀನೆಂದು ಸಾಬೀತುಪಡಿಸಲು ಯಾವುದೇ ಪೂರಕ ದಾಖಲೆಗಳು ಲಭ್ಯವಾಗಿಲ್ಲವೆಂದು ಹೇಳಿದ್ದು, ಅಕ್ಟೋಬರ್ 2018 ರ ತನ್ನ ಆದೇಶದಲ್ಲಿ ಸರ್ವೆ ನಂ.137 ಜಮೀನು ಹಿಡುವಳಿ ಜಮೀನಾಗಿದ್ದು, ವಿಚಾರಣೆಯನ್ನು ನಡೆಸುವುದು ಈ ನ್ಯಾಯಾಲಯದ ವ್ಯಾಪ್ತಿಗೆ ಮೀರಿದ್ದಾಗಿದ್ದು ಪ್ರಕರಣ ವಿಚಾರಣೆಯನ್ನು ಕೈ ಬಿಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

          ಇಡೀ ಪ್ರಕರಣದ ಬಗ್ಗೆ ಮಾಧ್ಯಮಗಳಿಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ಕಂದಾಯ ಇಲಾಖೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ವಿಶೇಷ ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ ತಂದಿದೆ. ಜತೆಗೆ ಸರ್ಕಾರ, ವಿವಾದಿತ ಜಮೀನನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಎ.ಟಿ.ರಾಮಸ್ವಾಮಿ ತಿಳಿಸಿದರು.

         ಈ ಪ್ರಕರಣದಲ್ಲಿ ವಿಶೇಷ ಡಿಸಿ ರಂಗಪ್ಪ ಅಧಿಕಾರ ದುರಪಯೋಗ ಪಡಿಸಿಕೊಂಡಿದ್ದಾರೆ.ರಾಜ್ಯದ ಹಿತಾಸಕ್ತಿ ವಿರುದ್ಧವಾಗಿರುವ ಇಂತಹ ಹಲವಾರು ಅಧಿಕಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಸರ್ಕಾರ ಕೆಟ್ಟೆ ಹೆಸರು ತರುತ್ತಾರೆಂದು ಎ.ಟಿ.ರಾಮಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link