ಮಧುಗಿರಿ
ಮಣ್ಣು ಮುಕ್ಕ ಹಾವನ್ನು ಎರಡು ತಲೆ ಹಾವೆಂದು ಜನರಿಗೆ ನಂಬಿಸಿ ವಂಚನೆ ಎಸಗುತ್ತಿದ್ದ ಆರು ಆರೋಪಿಗಳನ್ನು ಎರಡು ಹಾವುಗಳನ್ನು ಮಾರಲು ಪ್ರಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿ.ಐ.ಡಿ. ಘಟಕದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಅವರಗಲ್ಲು ಗ್ರಾಮದ ನಿವಾಸಿಗಳಾದ ರವಿ (40), ಲೋಕೇಶ್ (42), ಮಹೇಶ್ (32), ಚೆನ್ನಮಲ್ಲನಹಳ್ಳಿ ರಾಕೇಶ್ (21), ಪಟ್ಟಣದ ದೊಡ್ಡಪೇಟೆ ನಿವಾಸಿ ರಾಜಣ್ಣ (44), ಹೊಸಕರೆ ಗ್ರಾಮದ ಶಿವರಾಜ್ ಕುಮಾರ್ (26) ಎಂಬುವವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಗೆಡ್ಡೆ ತಿಮ್ಮನಹಳ್ಳಿ ಬಳಿ, ಉಳಿದ ನಾಲ್ಕು ಜನರನ್ನು ಹರಿಹರರೊಪ್ಪ ಕ್ರಾಸ್ ಬಳಿ ಬಂಧಿಸಿದ್ದಾರೆ.
ಆರೋಪಿಗಳು ಎರಡು ತಲೆಯ ಹಾವುಗಳೆಂದು ನಂಬಿಸಿ ದುಬಾರಿ ಬೆಲೆಗೆ ಬೆಂಗಳೂರು ಸೇರಿದಂತೆ ಇತರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವರೆಂಬ ಖಚಿತ ಮಾಹಿತಿಯ ಮೇರೆಗೆ ಹಾವುಗಳನ್ನು ಕೊಳ್ಳುವ ಸೋಗಿನಲ್ಲಿ ತೆರಳಿದ ಅಧಿಕಾರಿಗಳು ತಾಲ್ಲೂಕಿನ ಹರಿಹರರೊಪ್ಪದ ಬಳಿ ಹಾಗೂ ಅವರಗಲ್ಲು ಸಮೀಪದಲ್ಲಿ ಎರಡು ಹಾವುಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಐಡಿ ಡಿ.ವೈ.ಎಸ್.ಪಿ. ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರವಿಕುಮಾರ್ ಹಾಗೂ ರಾಮಮೂರ್ತಿ ನೇತೃತ್ವದಲ್ಲಿ ಹೇಮಕುಮಾರ್, ಲೋಕೇಶ್, ಪರಮೇಶ್, ಮುತ್ತರಾಜು ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
