ಗುತ್ತಲ:
ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ, ಅಂತವರ ಪಾಲಿಗೆ ನೇತ್ರದಾನದ ಮೂಲಕ ಬೆಳಕು ನೀಡಿ ಅವರ ಭವಿಷ್ಯದ ನಿರ್ಮಾಣದ ಗುರಿಯಿಂದ ಪ್ರತಿಯೊಬ್ಬರು ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು ಎಂದು ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮಿಜಿ ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶ್ರೀ ಕಂಚಿ ಕಾಮಕೋಟೆ ಮೆಡಿಕಲ್ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣುಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಮಹತ್ವ ಹೊಂದಿದೆ, ಮನುಷ್ಯನ ಹುಟ್ಟು ಅನಿಶ್ಚಿತ ಆದರೆ ಸಾವು ಖಚಿತ ಸಾವಿನ ನಂತರ ಕಣ್ಣು ದಾನ ಮಾಡಿದರೆ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕ, ಅದರಂತೆ ಸಮಾಜದಲ್ಲಿನ ಅಂಧತ್ವ ದೋಷದ ನಿವಾರಣೆಗೆ ಸಮಾಜದ ಅನೇಕ ಸಂಘ ಸಂಸ್ಥೆಗಳು ನಿರಂತರವಾಗಿ ಶಿಬಿರಗಳ ಮೂಲಕ ಶ್ರಮ ವಹಿಸುತ್ತಿರುವದು ಪ್ರಶಂಸನಿಯ ಎಂದರು.
ಜಿ.ಪಂ ಮಾಜಿ ಸಧಸ್ಯ ಸಿ.ಬಿ ಕುರುವತ್ತಿಗೌಡ್ರ ಮಾತನಾಡಿ, ವಯಸ್ಸು ಹೆಚ್ಚಾದಂತೆ ಕಣ್ಣಿಗೆ ಪೊರೆ ಬರುವ ಮೂಲಕ ವೃದ್ಧರು ಮತ್ತೊಬ್ಬರಿಗೆ ಅವಲಂಬಿತರಾಗದೆ ತಮ್ಮ ದೈನಂದಿನ ಕೆಲಸಗಳನ್ನು ತಾವೆ ಮುಂದುವರೆಸಲು ಕಣ್ಣಿನ ಶಸ್ತ್ರ ಚಿಕಿತ್ಸೆ ಅವಶ್ಯ ,ಅದರಲ್ಲು ಸಂಘಟನೆಗಳು ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಅನುಕೂಲ ಮಾಡುತ್ತಿರುವದು ನೂರಾರು ಬಡ ಕುಟುಂಬಗಳಿಗೆ ಸಹಾಯ ಮಾಡಿದಂತಾಗಿದೆ, ಪ್ರತಿಯೊಬ್ಬರು ಇಂತಹ ಸದಾವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ನೇತ್ರ ಸಂಚಾರಿ ಘಟಕದ ಜೆ.ಎಂ ರಾಜಶೇಖರ ಮಾತನಾಡಿ, ಇಂದಿನ ಯುಗದಲ್ಲಿ ಕಣ್ಣಿನ ದೋಷದಿಂದ ಅನೇಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಸರ್ಕಾರ ಹಾಗೂ ಸಂಘಟನೆಗಳು ಅಂತವರಿಗೆ ಪರಿಹಾರ ನೀಡಲು ಶಿಬಿರಗಳನ್ನು ಏರ್ಪಡಿಸುತ್ತವೆ ಅವುಗಳಲ್ಲಿ ಭಾಗವಹಿಸಿ ಸೂಕ್ತವಾದ ಚಿಕಿತ್ಸೆ ಪಡೆಯುವ ಮೂಲಕ ಜಿಲ್ಲೆ ಹಾಗೂ ಭಾರತ ದೇಶವನ್ನು ಅಂಧ್ವತ್ವ ದೋಷ ಮುಕ್ತವನ್ನಾಗಿಸುವ ಪಣ ತೊಡಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನೇತ್ರಾಧಿಕಾರಿ ಡಾ. ರೇಖಾ ಬುಶೆಟ್ಟಿ, ಡಾ. ಗಂಗಾಧರ ಕುರುವತ್ತಿಗೌಡ್ರ, ಸುನೀಲ ಸವಣೂರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೊಟ್ರೇಶಪ್ಪ ಎಮ್ಮಿ, ಜಿಲ್ಲಾ ಸ್ವಾ.ಕರವೇ ಉಪಾಧ್ಯಕ್ಷ ಶೇಖಪ್ಪ ನಾಡರ, ರಾಜ್ಯ ಸಂಚಾಲಕ ಶಮಶುದ್ದೀನ್.ಕೆ, ಪಕ್ಕೀರಯ್ಯ ಕುಲಕರ್ಣಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.ಆರೋಗ್ಯ ಸಹಾಯಕರಾದ ಮಾಲತೇಶ ಪುಟ್ಟನಗೌಡ್ರ ಹಾಗೂ ಚಂದ್ರಶೇಖರ ಹಿತ್ತಲಮನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ