ಹೊಸಪೇಟೆ :
ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಹಳೇ ಗ್ರಾ.ಪಂ.ಕಚೇರಿಯಲ್ಲಿ ಶನಿವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಜೀನೇಂದ್ರ ಸೇವಾ ಸಮಿತಿ, ಅಶ್ವಿನಿ ಕಣ್ಣಿನ ಆಸ್ಪತ್ರೆ ಹೊಸಪೇಟೆ ಜಂಟಿಯಾಗಿ ಆಯೋಜಿಸಿದ್ದ ಶಿಬಿರವನ್ನು ನೇತ್ರ ತಜ್ಞ ಡಾ.ಶ್ರೀನಿವಾಸ ದೇಶಪಾಂಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಾಪಿನಾಯಕನಹಳ್ಳಿ ಭಾಗವು ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಧೂಳಿನಿಂದಾಗಿ ಅಸ್ತಮಾ, ಕಣ್ಣಿನ ದೋಷ ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಜನರ ಅನುಕೂಲಕ್ಕಾಗಿ ಉಚಿತ ನೇತ್ರ ಶಿಬಿರ ನಡೆಸಲಾಗುತ್ತಿದೆ. ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಗ್ರಾಮದ ಮುಖಂಡ ಎನ್.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಗ್ರಾಮವು ಗಣಿಗಾರಿಕೆಯಿಂದಾಗಿ ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ. ಹೀಗಾಗಿ ನಾವು ನೇತ್ರ ತಜ್ಞ ಡಾ.ಶ್ರೀನಿವಾಸ ಅವರಿಗೆ ನೇತ್ರ ತಪಾಸಣಾ ಶಿಬಿರ ಮಾಡುವಂತೆ ಕೇಳಿಕೊಂಡಾಗ ಒಂದೇ ಮಾತಿಗೆ ಸ್ಪಂದಿಸಿ ಶಿಬಿರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಶಿಬಿರವು ಬೆಳಿಗ್ಗೆ 10ಗಂಟೆಯಿಂದ 2ಗಂಟೆಯ ವರೆಗೆ ನಡೆಯಿತು. ಸುಮಾರು 145 ಜನರು ತಪಾಸಣಾ ಮಾಡಿಸಿಕೊಂಡರು. ಅದರಲ್ಲಿ 55 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಇದೇ 13ರಂದು ಅಶ್ವಿನಿ ಆಸ್ಪತ್ರೆಗೆ ಬರುವಂತೆ ತಿಳಿಸಲಾಯಿತು.ಶಿಬಿರದಲ್ಲಿ ವಡ್ಡರಹಳ್ಳಿ, ಬೈಲುವದ್ದಿಗೇರಿ, ಕಾಕುಬಾಳು, ಗುಂಡ್ಲುವದ್ದಿಗೇರಿ, ಇಂಗಳಿಗೆ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
ಜೀನೇಂದ್ರ ಸೇವಾ ಸಮಿತಿ ಅಧ್ಯಕ್ಷೆ ಕುಶಾಲದೇವಿ, ತಿಲಕ್ ಮಂಜಾರಿ ಮೆಹತಾ, ಕಾಂಚನಾ ಭರತ್ ಕವಾಡ್, ಗ್ರಾ.ಪಂ.ಅಧ್ಯಕ್ಷೆ ರಾಧ ಚಂದ್ರಶೇಖರ, ಮುಖಂಡರಾದ ಮೇಟಿ ಪಂಪಣ್ಣ, ಕೆ.ತಿಪ್ಪೇಸ್ವಾಮಿ, ಮೇಟಿ ಶಂಕರ್, ಕೆ.ಅಂಕ್ಲೇಶ, ವಸಂತ, ಕೆ.ಎರ್ರಿಸ್ವಾಮಿ, ಟಿ.ವೀರೇಶ, ಸಣ್ಣ ಎರ್ರಿಸ್ವಾಮಿ ಸೇರಿದಂತೆ ಗ್ರಾಮಸ್ಥರು ಇದ್ದರು,