ತುಮಕೂರು
ಅತಿ ಹೆಚ್ಚಿನ ಖರ್ಚಿನಿಂದ ಕೂಡಿರುವ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನ್‍ಗಳು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ರಸ್ನ ಡಯೋಗ್ನೋಸ್ಟಿಕ್ ಸೆಂಟರ್‍ನ ಬ್ಯುಸಿನೆಸ್ ಮ್ಯಾನೇಜರ್ ಧನಂಜಯ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‍ಐ ಸ್ಕ್ಯಾನಿಂಗ್ ಆರಂಭಗೊಂಡು ಸುಮಾರು ಒಂದೂವರೆ ವರ್ಷಗಳು ಕಳೆದಿದ್ದು, ಇಲ್ಲಿಯವರೆಗೆ ಒಟ್ಟು 10 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಸೌಲಭ್ಯ ದೊರೆತಿದೆ. ಪ್ರತಿನಿತ್ಯ 25 ರಿಂದ 30 ಮಂದಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಕ್ರಸ್ನ ಡಯೋಗ್ನೋಸ್ಟಿಕ್ ಸೆಂಟರ್ ಪೂನಾ ಮೂಲದ ಸಂಸ್ಥೆಯಾಗಿದ್ದು, 15 ರಾಜ್ಯಗಳಲ್ಲಿ 700 ಕೇಂದ್ರಗಳಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಕರ್ನಾಟಕದ 14 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‍ಐ ಹಾಗೂ ಸಿಟಿ ಸ್ಕ್ಯಾನ್ ಸೆಂಟರ್‍ಗಳು ಕೆಲಸ ಮಾಡುತ್ತಿವೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 10 ವರ್ಷದ ವರೆಗೆ ಅನುಮತಿ ಪಡೆದಿದ್ದು ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‍ಗೆ 3000 ರೂಪಾಯಿ ಹಾಗೂ ಎಂಆರ್‍ಐ ಸ್ಕ್ಯಾನಿಂಗ್‍ಗೆ 8000ರ ವರೆಗೆ ಖರ್ಚಾಗುತ್ತದೆ. ಆದರೆ ಇಲ್ಲಿ ಸರ್ಕಾರಿ ವೈದ್ಯರು ಬರೆದುಕೊಟ್ಟಲ್ಲಿ ಉಚಿತವಾಗಿ ಈ ಸ್ಕ್ಯಾನಿಂಗ್ ಮಾಡಲಾಗುವುದು ಎಂದರು.
ಸರ್ಕಾರಿ ವೈದ್ಯರು ಬರೆದುಕೊಟ್ಟ ಚೀಟಿಗೆ ಉಚಿತವಾಗಿ ಮಾಡಲಾಗುತ್ತಿದ್ದು, ಇದರ ವೆಚ್ಚ ಸರ್ಕಾರ ಭರಿಸುತ್ತದೆ. ಖಾಸಗಿ ವೈದ್ಯರು ಬರೆದುಕೊಟ್ಟಲ್ಲಿ ಸರ್ಕಾರದ ಬಲೆ ಪ್ರಕಾರ ಕೇವಲ 3000 ರೂಪಾಯಿಗಳಿಗೆ ಎಂಆರ್‍ಐ ಸ್ಕ್ಯಾನಿಂಗ್ ಮಾಡಿಕೊಡಲಾಗುತ್ತದೆ. ಇದರ ರಿಪೋರ್ಟ್ ಕೂಡ ಕೇವಲ 6 ಗಂಟೆಯೊಳಗಾಗಿ ನೀಡಲಾಗುತ್ತದೆ. ಕೆಲವೊಂದು ಪ್ರಕರಣಗಳಿಗೆ ಕಡಿಮೆ ಅವಧಿಯಲ್ಲಿ ನೀಡಲಾಗುತ್ತದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಇಂತಹ ಸೌಲಭ್ಯ ಅಳವಡಿಕೆ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ಬೇಕಾಗಿದೆ. ಸಾಕಷ್ಟು ಮಂದಿ ಇಂತಹ ಸ್ಕ್ಯಾನಿಂಗ್‍ಗಳಿಗೆ ಬೇರೆ ಜಿಲ್ಲೆಗಳಿಗೆ ಅಥವಾ ಬೆಂಗಳೂರು ಮಹಾನಗರಕ್ಕೆ ತೆರಳಿ ಅಲ್ಲಿ ಹೆಚ್ಚಿನ ಮೊತ್ತ ಖರ್ಚು ಮಾಡಿಕೊಳ್ಳುತ್ತಾರೆ. ಅಲ್ಲಿರುವ ಸೌಲಬ್ಯವೇ ಇಲ್ಲಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ.
ಈ ಸೌಲಭ್ಯ ದಿನದ 24 ಗಂಟೆಯೂ ಇರುತ್ತದೆ. ಇಲ್ಲಿ ಕೇಂದ್ರದ ಸಿಬ್ಬಂದಿಯೇ ಮೂರು ಶಿಪ್ಟ್‍ಗಳಲ್ಲಿ ಕೆಲಸ ಮಾಡುತ್ತಾರೆ. ಯಾವುದೇ ತೊಂದರೆಗಳಿರುವುದಿಲ್ಲ. ಇದಕ್ಕಾಗಿ ಯಾರು ಹಣ ಕೇಳುವುದಿಲ್ಲ. ಕೇಳಿದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾಭರತ್, ನೀಲೇಶ್‍ಪಾಟಕ್, ಯೋಗೀಶ್, ಸರ್ವೋದಯ್, ಆದರ್ಶ್, ಸಲಿಂಮಾಲಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
