ಅದ್ಧೂರಿ ವಿವಾಹಗಳ ವಿರುದ್ಧ ಧ್ವನಿ ಎತ್ತಿದ್ದ ಜಿ.ಟಿ.ದೇವೇಗೌಡ

ಬೆಂಗಳೂರು

         ರಾಜ್ಯಾದ್ಯಂತ ನಡೆಯುತ್ತಿರುವ ಅದ್ಧೂರಿ ವಿವಾಹಗಳ ವಿರುದ್ಧ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಧ್ವನಿ ಎತ್ತಿದ್ದು ಇವುಗಳನ್ನು ತಡೆಯದಿದ್ದರೆ ಶ್ರೀಮಂತರನ್ನು ನೋಡಿ ರೈತರು ಮತ್ತಿತರರು ಇರುವ ಭೂಮಿ ಮಾರಿಕೊಂಡೋ,ಸಾಲ-ಪಾಲ ಮಾಡಿಕೊಂಡೋ ಬೀದಿ ಪಾಲಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

         ಇವತ್ತು ಶ್ರೀಮಂತರು ಮಾಡುವ ಅದ್ಧೂರಿ ವಿವಾಹಗಳನ್ನು ನೋಡಿ ಅದೇ ಸಾಮಾಜಿಕ ಪ್ರತಿಷ್ಟೆ ಎಂದುಕೊಂಡು ರೈತರನೇಕರು ತಮ್ಮ ಬಳಿ ಇರುವ ಭೂಮಿಯನ್ನು ಮಾರಿಕೊಂಡು ಅದ್ಧೂರಿ ವಿವಾಹಗಳ ಮೊರೆ ಹೋಗುತ್ತಿದ್ದಾರೆ.ಇತರರೂ ಇದೇ ರೀತಿ ಇರುವ ಆಸ್ತಿ ಮಾರಿಕೊಂಡು,ಸಾಲ,ಸೋಲ ಮಾಡಿಕೊಂಡು ಬೀದಿ ಪಾಲಾಗುತ್ತಿದ್ದಾರೆ ಎಂದರು.

          ಹೀಗಾಗಿ ಅದ್ಧೂರಿ ವಿವಾಹಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.ಆದರೆ ಆ ಸಂಬಂಧ ತೀರ್ಮಾನ ಕೈಗೊಳ್ಳಬೇಕು ಎಂದರೆ ಸರ್ಕಾರದಲ್ಲಿರುವವರೂ ನೈತಿಕವಾಗಿ ಬಲಿಷ್ಟರಾಗಿರಬೇಕಾಗುತ್ತದೆ.ಅವರು ತಮ್ಮ ಮನೆಗಳಲ್ಲಿ ಸರಳ ವಿವಾಹ ನಡೆಸಿ ಮಾದರಿಯಾಗಿದ್ದರೆ ಸರಿ,ಇಲ್ಲದಿದ್ದರೆ ಅವರಿಂದ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

          ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಅದ್ಧೂರಿ ವಿವಾಹಗಳ ಆಚರಣೆ ಸಮಾಜಕ್ಕೆ ಪಿಡುಗಿದ್ದಂತೆ.ದುಡ್ಡಿದ್ದವರನ್ನು ನೋಡಿ ಆಮಿಷಕ್ಕೊಳಗಾಗುವ ಬಡ,ಮಧ್ಯಮ ವರ್ಗದವರೂ ಅದನ್ನು ಅನುಸರಿಸಲು ಹೋಗುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

         ನಾನು ಹುಣಸೂರಿನ ಶಾಸಕನಾಗಿದ್ದಾಗ ನೂರಾ ಅರವತ್ಮೂರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯ ನಡೆಸಿದೆ.ಒಂದು ಸಲ ಸಾಮೂಹಿಕ ವಿವಾಹ ಕಾರ್ಯಾಚರಣೆಗೆ ವಧು-ವರರು ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಐದು ಜೋಡಿಗಳನ್ನು ಹುಡುಕಿ ನೋಂದಣಿ ಮಾಡಿಸಿದವರಿಗೆ ಉಚಿತವಾಗಿ ಒಂದು ಹಸು ನೀಡುವ ಕೆಲಸ ಮಾಡಿದೆ.

          ಅಷ್ಟೇ ಅಲ್ಲ,ನನ್ನ ಮಗ ಹಾಗೂ ಮಗಳನ್ನು ಕುಟುಂಬದವರ ವಿರೋಧದ ನಡುವೆಯೂ ತಿರುಪತಿಗೆ ಕರೆದುಕೊಂಡು ಹೋಗಿ ಕೆಲವೇ ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಸಿದೆ ಎಂದು ಅವರು ಪುನರುಚ್ಚರಿಸಿದರು.

           ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ವಿವಾಹಗಳನ್ನು ಮಾಡುವುದರಿಂದ ಒಬ್ಬರು ಮತ್ತೊಬ್ಬರಿಗೆ ಪ್ರೇರೇಪಣೆ ನೀಡಿದಂತಾಗುತ್ತದೆ.ಆ ಮೂಲಕ ಸಮಾಜಕ್ಕೆ ಹೊರೆಯಾದಂತಾಗುತ್ತದೆ ಎಂದು ಹೇಳಿದರು.

           ಈ ಹಿಂದೆ ಜನತಾ ಪರಿವಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದು ಜಿಲ್ಲಾ ಪರಿಷತ್ತು ಸೇರಿದಂತೆ ಮೂರು ಹಂತದ ಆಡಳಿತ ವಿಕೇಂದ್ರೀಕರಣ ಪದ್ಧತಿ ಅಸ್ತಿತ್ವದಲ್ಲೇ ಇದ್ದಿದ್ದರೆ ಶಾಸಕರು ಇವತ್ತು ಅನುಭವಿಸುತ್ತಿರುವ ಕಷ್ಟ ಕಡಿಮೆಯಾಗುತ್ತಿತ್ತು.

         ಯಾಕೆಂದರೆ ಸ್ಥಳೀಯ ಮಟ್ಟದಲ್ಲೇ ಅಧಿಕಾರ ಹಂಚಿಕೆಯಾಗಿದ್ದರಿಂದ ತಳ ಮಟ್ಟದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುವಂತಾಗಿತ್ತು.ಹೀಗಾಗಿ ಜನರು ತಮ್ಮ ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳ ಬಳಿ ಹೋಗುತ್ತಿದ್ದರು.ಇಂತಹ ಕೆಲಸಕ್ಕೆ ಇಂತವರು ಜವಾಬ್ದಾರಿ ಎಂದು ಗುರುತಿಸುತ್ತಿದ್ದರು.

        ಆದರೆ ಈಗ ಬೋರ್‍ವೆಲ್ ಕೊರೆಸುವುದರಿಂದ ಹಿಡಿದು,ಗಟಾರದಲ್ಲಿ ಬಿದ್ದ ಕಸ ಎತ್ತಿ ಹಾಕಿಸುವ ತನಕ ಪ್ರತಿಯೊಂದು ಕೆಲಸಕ್ಕೂ ಶಾಸಕರೇ ಜವಾಬ್ದಾರರಾಗುವಂತಾಗಿದೆ ಎಂದು ವಿಷಾದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap