ಸಿಬಿಐ ದಾಳಿ ಹಿನ್ನಲೆ: ಡಿಕೆಶಿ ಭೇಟಿಯಾದ ಜಿಟಿಡಿ

ಬೆಂಗಳೂರು

    ಸಿಬಿಐ ದಾಳಿ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿದರು.ಭೇಟಿ ಬಳಿಕ ಜಿ.ಟಿ.ದೇವೇಗೌಡ ಮಾತನಾಡಿ,ಡಿಕೆಗೆ ಸಂಬಂಧಿಸಿದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದ್ದು,
ಪದೇಪದೇ ಈ ರೀತಿಯ ದಾಳಿಯಿಂದ ಶಿವಕುಮಾರ್ ಬಹಳ ನೊಂದಿದ್ದಾರೆ.

      ಶಿವಕುಮಾರ್ ಹಾಗೂ ನಾನು ಬಹಳ ವರ್ಷದ ಸ್ನೇಹಿತರು. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ರೈಡ್ ನಡೆದಿತ್ತು.ಐಟಿ ದಾಳಿ ನಡೆಸಿ ಶಿವಕುಮಾರ್ ಅವರನ್ನು ಬಂಧಿಸಿದ್ದರು.ಎಸ್ ಎಂ ಕೃಷ್ಣಾ ಕಾಂಗ್ರೆಸ್ ಸಂಪುಟದಲ್ಲಿ ಶಿವಕುಮಾರ್ ನನ್ನನ್ನು ಮಹಾಮಂಡಲದ ಅಧ್ಯಕ್ಷರನ್ನಾಗಿ ಮಾಡಿದ್ದರು. ಯಾವುದೇ ಸರ್ಕಾರ ಇರಲಿ ಯೋಚನೆ ಮಾಡಬೇಕು, ಚುನಾವಣೆ ಘೋಷಣೆಯಾದ ಬಳಿಕ ಈ ರೀತಿ ದಾಳಿಮಾಡಿಸುರಿವುದು ಸರಿ ಅಲ್ಲ.ಡಿಕೆ ಪತ್ನಿ ನಮ್ಮ ಮೈಸೂರಿನವರು.ಅವರ ಕುಟುಂಬದವರಿಗೆ ಎಲ್ಲರಿಗೂ ಧೈರ್ಯ ತುಂಬಿದ್ದೇನೆ.ಇದು ರಾಜಕೀಯ ಪ್ರೇರಣೆ ದಾಳಿ ಎಂದು ಜನರು ಭಾವಿಸಿದ್ದಾರೆ ಎಂದರು.

     ಜೆಡಿಎಸ್ ಪಕ್ಷದಿಂದ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೀರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ,ಕೊರೊನಾದಿಂದಾಗಿ ಹೆಚ್ಚು ಓಡಾಡುವ ಹಾಗಿಲ್ಲ.ಎಲ್ಲವೂ ನಿಮಗೆ ಗೊತ್ತಿದೆ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾವುಗಳು ಸಚಿವರಾಗಿದ್ದೆವು.ಮೈತ್ರಿ ಸರ್ಕಾರ 5 ವರ್ಷಗಳು ಇರಬೇಕೆಂದು ಕೆಲಸ ಮಾಡಿದೆವು.ಈಗ ನಾನು ಬರೀ ಜೆಡಿಎಸ್ ಶಾಸಕ ಮಾತ್ರ ಎಂದು ಮಾರ್ಮಿಕವಾಗಿ ನುಡಿದರು.

     ಬಹಳ ವರ್ಷಗಳಿಂದ ಸ್ನೇಹಿತರಾಗಿರುವ ನಾನು ಮತ್ತು ಡಿ.ಕೆ.ಶಿಬಕುಮಾರ್, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿ, ಮುಂಬೈಗೂ ಸಹ ಹೋಗಿದ್ದೆವು.ನಾನು ಉಪಮುಖ್ಯಮಂತ್ರಿಯಾಗೋದಾಗಿದ್ದರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು.ಮೊದಲೇ ನನಗೆ ಬಿಜೆಪಿಯಿಂದ ಆಫರ್ ಬಂದಿತ್ತು.

    ಆದರೆ ನಾವು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡೆವು.ಐದು ವರ್ಷ ಅವರೇ ಇರಬೇಕೆಂದು ಬಯಸಿದ್ದೆವು.ಅವರನ್ನು ನಾವೇ ಮುಖ್ಯಮಂತ್ರಿ ಮಾಡಿ ನಾವೇ ಅವರನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸಿದ್ದೆವು ಎನ್ನುವುದೆಲ್ಲ ಸುಳ್ಳು ಎಂದರು.ಸದ್ಯ ಬಿಜೆಪಿ ಆಡಳಿತದಲ್ಲಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮುಂದಿನ ಚುನಾವಣೆಯಲ್ಲಿ ನನ್ನ
ಸ್ಪರ್ಧೆ ನಿರ್ಧಾರ ಮಾಡುತ್ತಾರೆ.

     ಚುನಾವಣೆ ಬರಲು ಇನ್ನೂ ಎರಡೂವರೆ ವರ್ಷ ಇದೆ.ಅಲ್ಲಿಯವರೆಗೆ ನೋಡೋಣ ಎಂದರು. ಡಿ.ಕೆ ಶಿವಕುಮಾರ್ ಮಾತನಾಡಿ, ಜಿ.ಟಿ. ದೇವೇಗೌಡ ನನ್ನ ಸ್ನೇಹಿತ.ರಾಜಕಾರಣವೇ ಬೇರೆ ಸ್ನೇಹವೇ ಬೇರೆ ಎಂದರು. ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಲು ಇಚ್ಛಿಸದ ಶಿವಕುಮಾರ್, ಗುರು ಶಿಷ್ಯರ ನಡುವೆ ನಡೆದ ಸಂಭಾಷಣೆ ಹೇಳುವುದಿಲ್ಲ.ಇಂತಹ ಕಷ್ಟಕಾಲದಲ್ಲಿ ಎಲ್ಲರೂ ಬಂದು ಕೈ ಹಿಡಿಯುತ್ತಿರುವುದೇ ನನಗೆ ಸಂತೋಷ ಎಂದರು.ಇಂದು ಸಂಜೆ ಒಳಗೆ ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಿ,ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದೆಂದು ಡಿಕೆಶಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ