ಬಳ್ಳಾರಿ
ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಗಣಿ ನಾಡು ಬಳ್ಳಾರಿ ಜಿಲ್ಲೆಯಾದ್ಯಂತ ವಾಡಿಕೆಯ ಮುಂಗಾರು ಹಂಗಾಮಿನ ಮಳೆ ಸುರಿಯದ ಕಾರಣ ಈವರೆಗೂ ಬಿತ್ತನೆ ಕಾರ್ಯ ಮಾತ್ರ ಚಿಗುರೊಡೆದಿಲ್ಲ.
ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿ ನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳಾಂತ್ಯಕ್ಕೆ ನಿರೀಕ್ಷಿತ ಪ್ರಮಾಣದ ಮಳೆಯು ಸುರಿದಿಲ್ಲ. ಹಾಗಾಗಿ, ಬಿತ್ತನೆ ಕಾರ್ಯದ ಚಟುವಟಿಕೆಯೇ ಇನ್ನೂ ಶುರುವಾಗಿಲ್ಲ. ಕಳೆದ ಬಾರಿ ವಾಡಿಕೆ ಮಳೆ ಸುರಿಯದಿದ್ದರೂ ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು.
ಹೀಗಾಗಿ, ಬಿತ್ತನೆ ಕಾರ್ಯ ಚಟುವಟಿಕೆ ಚಿಗುರೊಡೆದಿತ್ತು. ಈ ಬಾರಿ ಜಲಾಶಯದಲ್ಲಿ ನೀರೂ ಇಲ್ಲ. ಬಿತ್ತನೆ ಕಾರ್ಯವೂ ಶುರುವಾಗಿಲ್ಲ. ಇದರಿಂದ ಸಣ್ಣ, ಅತೀ ಸಣ್ಣ ರೈತರು ಈವರೆಗೂ ಬಿತ್ತನೆ ಬೀಜ ಖರೀದಿಗೂ ಮುಂದಾಗಿಲ್ಲ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿ ಜಾಸ್ತಿಯಾಗಿದ್ದು, ವರುಣನ ಬರುವಿಕೆಗೆ ರೈತರು ಆಕಾಶದತ್ತ ಮುಖ ಮಾಡಿ ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ.
ಗಣಿ ನಾಡಿನಲ್ಲಿ ಕೈ ಕೊಟ್ಟ ಮುಂಗಾರು ಕಂಗಾಲಾದ ರೈತರು:
ಒಂದು ಅಥವಾ ಎರಡು ಮೂರು ಎಕರೆ ಭೂಮಿ ಯನ್ನು ಹೊಂದಿರುವ ರೈತಾಪಿ ವರ್ಗವು ಭೂಮಿಯನ್ನು ಹದ ಮಾಡಿಕೊಂಡು ಕಳೆ ತೆಗೆದು ಹಸನು ಮಾಡಿಕೊಂಡಿದ್ದಾರೆ. ಅಲ್ಲದೇ, ಹೊಲಗಳ ಬದುವಿನಂಚಿನಲ್ಲಿರುವ ಸಣ್ಣ ಸಣ್ಣ ಕಾಲುವೆಗಳ ಶುಚಿತ್ವ ಕಾರ್ಯಕ್ಕೆ ಮುಂದಾಗಿದ್ದಾರೆ. ಜೂನ್ ಮೊದಲ ವಾರದಲ್ಲಿ ಈ ಮುಂಗಾರು ಹಂಗಾಮಿನ ಮಳೆ ಆರಂಭವಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಜೋರಾದ ಮಳೆ ಮಾತ್ರ ಈವರೆಗೂ ಸುರಿದಿಲ್ಲ. ಇದರಿಂದ ಗಣಿ ನಾಡಿನ ರೈತಾಪಿ ವರ್ಗ ತೀವ್ರ ಕಂಗಾಲಾಗಿದೆ.