ಹುಳಿಯಾರು
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ – ಹೊಸ ಓದು ವಿದ್ಯಾರ್ಥಿಗಳೊಂದಿಗೆ ಚರ್ಚೆ ಮತ್ತು ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಾಂಸ್ಕತಿಕ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ರೂಪುಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಗಾಂಧಿ ಕುರಿತು ತಮ್ಮ ಓದಿನ ಸಾರವನ್ನು ಹಂಚಿಕೊಂಡರು. ವಿದ್ಯಾರ್ಥಿ ಪದಾಧಿಕಾರಿಗಳು ವೇದಿಕೆಯನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಸಾಂಸ್ಕತಿಕ ಸಂಘದ ಅಧ್ಯಕ್ಷ ಎಚ್.ಬಿ. ಶ್ರೀನಿವಾಸ್ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರೊ.ಎಂ.ಜೆ.ಮೋಹನ್ ಕುಮಾರ್ ಅವರು ಮಾತನಾಡಿ ಡಾ. ನಟರಾಜ್ ಹುಳಿಯಾರ್ ಅವರ ಲೇಖನ ಮತ್ತೆ ಮತ್ತೆ ಹುಟ್ಟುವ ಗಾಂಧಿವಾದಿಗಳು ಎಂಬ ವಿಚಾರವನ್ನು ಕುರಿತು ಮಾತನಾಡಿದರು. ಗಾಂಧಿ ತತ್ವಗಳು ಇಂದು ಜಾಗತಿಕ ಮಟ್ಟದ ಶಾಂತಿಯುತ ಹೋರಾಟಗಳಲ್ಲಿ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ನೆಲ್ಸನ್ ಮಂಡೇಲ, ಮಾರ್ಚಿನ್ ಲೂಥರ್ ಕಿಂಗ್ ಜೂನಿಯರ್, ಆಂಗ್‍ಸಾನ್ ಸೂಕಿ ಮುಂತಾದವರ ಹೋರಾಟಗಳನ್ನು ಉದಾಹರಿಸಿದರು. ಹಾಗೆಯೇ ಗಾಂಧಿ ತತ್ವಗಳು ರೂಪುಗೊಂಡ ಬಗೆ ಇಂದು ಅವುಗಳನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾದ ಅಗತ್ಯತೆಯ ಬಗೆಯೂ ಮಾತನಾಡಿದರು.
ಪ್ರೊ.ವಲಿ.ಆರ್ ರವರು ಮತನಾಡುತ್ತಾ ಗಾಂಧಿ ಮತ್ತು ಬಾಂಬು ಈ ಶತಮಾನದ ಸೃಷ್ಟಿಸಿದ ಎರಡು ಅದ್ಬುತಗಳು ಎಂದು ಹೇಳಿದರು. ಗಾಂಧಿಯನ್ನು ಇಂದು ನಾವು ಗಾಂಧಿಯನ್ನೇ ಟೀಕಿಸಿ ಗಾಂಧಿ ಮಾರ್ಗದಲ್ಲೇ ನಡೆದು ಯಶಸ್ವಿಯಾದ ಲೋಹಿಯಾರಂತಹ ರಾಜಕಾರಣಿಗಳಲ್ಲಿ , ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂದು ಗೀತೆ ಬರೆದ ಈಶ್ವರ ಸಣಕಲ್ ರಂತಹ ಕವಿಗಳಲಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಅಹಿಂಸಾತ್ಮಕವಾಗಿ ಉಪವಾಸ ಕೂರುವ ಮಕ್ಕಳ ನಡತೆಗಳಲ್ಲಿ ನಾವು ಗಾಂಧಿಯನ್ನು ನೋಡಬಹುದು ಎಂದು ಅಭಿಪ್ರಾಯಪಟ್ಟರು.
ಪ್ರೊ. ಸುಷ್ಮಾ ಬಿರಾದಾರ್ ಅವರು ಇಂಡೋ- ಆಂಗ್ಲೋ ರೈಟರ್ ಮೇಲೆ ಗಾಂಧಿ ಚಿಂತನೆಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮುಲ್ಕರಾಜ್ ಆನಂದ್, ರಾಜಾರಾಮ್, ಆರ್.ಕೆ. ನಾರಾಯಣ್ ಮುಂತಾದವರ ಬರವಣಿಗೆಯನ್ನು ಉದಾಹರಿಸಿದರು.
ಪ್ರೊ. ಮಲ್ಲಿಕಾರ್ಜುನ್ ಮಾತನಾಡಿ ಸ್ವಾತಂತ್ರ್ಯಾ ನಂತರದಲ್ಲಿ ಗಾಂಧಿಯನ್ನು ಮಾಡಿಫೈಡ್ ರೂಪದಲ್ಲಿ ಅನ್ವಯಮಾಡಿಕೊಳ್ಳತ್ತಿರುವ ಕುರಿತು ಹೇಳಿದರು. ಗಾಂಧೀಜಿ ಎಂದರೆ ಪ್ರಯೋಗ. ಗಾಂಧಿ ಚಿಂತನೆ ಮಾಡದೆ ಯಾವ ಕ್ಷೇತ್ರವೂ ಇಲ್ಲ. ಗಾಂಧೀಜಿಯನ್ನು ನಾವು ಅವರ ಸರಳತೆಯ ಮೂಲಕ ಮೊದಲು ಗುರುತಿಸುತ್ತೇವೆ ಎಂದರು.
ಡಾ.ಲೋಕೇಶ್ ನಾಯ್ಕ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ಗಾಂಧಿ ಬಗ್ಗೆ ಕನಿಷ್ಠ ಜ್ಞಾನವನ್ನೂ ಪಡೆದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಯುವ ಜನಾಂಗ ಗಾಂಧಿ ತತ್ವವನ್ನು ಅಳವಡಿಸಿಕೊಳ್ಳಲು ಕರೆ ನೀಡಿದ ಅವರು, ಹಟ್ಟಿಗಳ ಉದ್ಧಾರವೇ ದೇಶದ ಉದ್ಧಾರ ಎಂದು ಗಾಂಧೀಜಿ ಹೇಳುತ್ತಿದ್ದ ಮಾತನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳು ತಮ್ಮ ಮನೆಯ ಅಭಿವೃದ್ಧಿಯೊಂದಿಗೆ ಹಳ್ಳಿಯ ಅಭಿವೃದ್ಧಿ ಸಾಧಿಸಬೇಕೆಂದು ಸಲಹೆ ನೀಡಿದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಉಪನ್ಯಾಸಕಿ ಲಾವಣ್ಯ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಆರ್.ಕಾವ್ಯ, ರೇಣುಕಾಮೂರ್ತಿ, ಕರಣ್ ಆರ್. ಮೂರ್ತಿ, ಎಚ್.ಬಿ.ಶ್ರೀನಿವಾಸ್ ಅವರು ಗಾಂಧೀಜಿ ಕುರಿತು ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








