ಹಗರಿಬೊಮ್ಮನಳ್ಳಿ
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಅತ್ಯಂತ ಅದ್ಧೂರಿಯಾದ ಸ್ವಾಗತ ಶುಕ್ರವಾರ ದೊರಕಿತು.
ಹಡಗಲಿ ಮುಖಾಂತರ ಹಗರಿಬೊಮ್ಮನಳ್ಳಿ ತಾಲೂಕು ಕೇಂದ್ರಕ್ಕೆ ಆಗಮಿಸಿದ ಸ್ತಬ್ಧಚಿತ್ರರಥಯಾತ್ರೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಅವರು ಸ್ವಾಗತ ಕೋರಿದರು. ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಮೌಲ್ಯಗಳು ಮತ್ತು ವಿಚಾರಧಾರೆಗಳು ನಾಡಿನಾದ್ಯಂತ ಪಸರಿಸಬೇಕು ಎಂಬ ಸದುದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗೆ ಚಾಲನೆ ನೀಡಿದೆ. ಅದರಲ್ಲಿ ಒಂದು ರಥಯಾತ್ರೆ ನಮ್ಮ ಪಟ್ಟಣಕ್ಕೆ ಆಗಮಿಸಿರುವುದು ನಮ್ಮ ಸುದೈವ ಎಂದರು.
ಈ ಸ್ತಬ್ಧಚಿತ್ರ ರಥಯಾತ್ರೆಯಲ್ಲಿ ಬರೆದ ಸಂದೇಶಗಳನ್ನು ತಾವೆಲ್ಲರು ನೋಡಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಮಹಾತ್ಮರು ದೇಶಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಅವರು ಮಾತನಾಡಿ, ಮಹಾತ್ಮರ ಮೌಲ್ಯಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅವರ ಮೌಲ್ಯಗಳನ್ನು ಮತ್ತೆ ನೆನಪಿಸುವ ಮತ್ತು ಅವುಗಳನ್ನು ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ವಾರ್ತಾ ಇಲಾಖೆಯು ಮಹಾತ್ಮಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆಯ ಈ ಹೊತ್ತಲ್ಲಿ ಸ್ತಬ್ಧಚಿತ್ರರಥಯಾತ್ರೆಯು ಹಮ್ಮಿಕೊಂಡಿರುವುದು ಅತ್ಯಂತ ಸ್ಯುತ್ಯಾರ್ಹ ಸಂಗತಿ ಎಂದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಪರಮೇಶ್ವರ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಎಸ್.ಪ್ರಭಾಕರ್‍ಶೆಟ್ಟರ್, ಸಿಡಿಪಿಒ ಚನ್ನಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಕಂದಾಯ, ತಾಪಂ, ಕೃಷಿ,ತೋಟಗಾರಿಕೆ,ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.ಸಾರ್ವಜನಿಕರು ಸ್ತಬ್ಧಚಿತ್ರರಥಯಾತ್ರೆಯನ್ನು ವೀಕ್ಷಿಸಿ ಸಂತಸ ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
