ಬೆಂಗಳೂರು
ಕೆನಡಾದಿಂದ ಅಮೆಜಾನ್ ಅನ್‌ಲೈನ್ ಮೂಲಕ ಹೈಡ್ರೊ ಗಾಂಜಾ (ಮರಿಜುವಾನ) ತರಿಸಿಕೊಂಡು ನಗರ ಪ್ರತಷ್ಠಿತ ಸ್ಕೂಲ್‌ಗಳ ವಿದ್ಯಾರ್ಥಿಗಳನ್ನು ಮಾದಕ ವ್ಯಸನಕ್ಕೆ ತಳ್ಳುತ್ತಿದ್ದ ಅಂತರರಾಷ್ಟ್ರೀಯ ಡ್ರಗ್ ಮಾಫಿಯಾವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು 1ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಕ್ಕಳ ಹಾಲಿನಪುಡಿ ಡಬ್ಬ, ವಿದೇಶಿ ಚಾಕೊಲೆಟ್‌ಗಳ ಮಧ್ಯೆ ಅಡಗಿಸಿಟ್ಟುಕೊಂಡು ಕೆನಡಾದಿಂದ ತರಿಸಿದ ಹೈಡ್ರೊ ಗಾಂಜಾವನ್ನು ಅಮೆಜಾನ್ ಕವರ್‌ಗಳಿಂದ ಪ್ಯಾಕ್ ಮಾಡಿ ಡಿಟಿಡಿಸಿ ಕೊರಿಯರ್ ಮೂಲಕ ಬೆಂಗಳೂರು ಸೇರಿದಂತೆ ಇತರ ಮಹಾ ನಗರಗಳಿಗೆ ಸಾಗಾಣೆ ಮಾಡುತ್ತಿದ್ದ ವ್ಯವಸ್ಥಿತ ಜಾಲ ಪತ್ತೆಯಾಗಿದೆ.
ಜಾಲದ ಪ್ರಮುಖನಾಗಿದ್ದ ಕೊಲ್ಕತ್ತ ಮೂಲದ ಬಿಸಿಎ ಪದವೀಧರ ಹತೀಫ್ ಸಲೀಂ (26) ಹಾಗೂ ಆತನ ಸಹಚರ ರೋಹಿತ್‌ದಾಸ್ (26)ನನ್ನು ಬಂಧಿಸಿ ಸ್ಕೋಡಾ ಕಾರು, ಕೆಟಿಎಂ ಡ್ಯೂಪ್ ಬೈಕ್, ತೂಕದ ಯಂತ್ರ, 1 ಲಕ್ಷ ನಗದು ಸೇರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ದಗುಂಟೆಪಾಳ್ಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ಆರೂವರೆ ತಿಂಗಳಿನಿಂದ ವಾಸಿಸುತ್ತಿದ್ದ ಹತೀಫ್ ಸಲೀಂ ವ್ಯವಸ್ಥಿತವಾಗಿ ಹೈಡ್ರೊ ಗಾಂಜಾವನ್ನು ಮಾರಾಟ ಮಾಡುವ ಜಾಲವನ್ನು ಮಾಡಿಕೊಂಡಿದ್ದು, ಪ್ರಾಥಮಿಕ ಹಂತದ ತನಿಖೆಯಷ್ಟೇ ಮುಗಿದಿದ್ದು, ಮುಂದಿನ ತನಿಖೆಯಲ್ಲಿ ಆತನ ವಿಸ್ತೃತ ಜಾಲವನ್ನು ಪತ್ತೆ ಹಚ್ಚಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಾರ್ಕ್‌ವೆಬ್ ಎಂಬ ವೆಬ್‌ಸೈಟ್ ಮೂಲಕ ಕೆನಡಾದಿಂದ ತರಿಸಿದ ಹೈಡ್ರೊ ಗಾಂಜಾವನ್ನು ವಿಕ್ಕರ್ ಮೀ ಆಪ್ ಮೂಲಕ ಆರೋಪಿಯು ಮಾರಾಟ ಮಾಡುತ್ತಿದ್ದ ಗಾಂಜಾ ಚಾಕೊಲೆಟ್ ಹಾಗೂ ಅಶೀಶ್ ಆಯಿಲ್ ಎಂಬ ಮಾದಕವಸ್ತುವಿರುವ ಇ-ಸಿಗರೇಟ್ ಟ್ಯೂಬ್‌ಗಳನ್ನು ತರಿಸಿಕೊಂಡು ಕೆನಡಾದಿಂದ ಜಾಲದಲ್ಲಿದ್ದ ಆರೋಪಿಯು ಸೂಚಿಸುವ ಗಿರಾಕಿಗಳಿಗೆ ಆತ ಹೇಳಿದಷ್ಟು ಮಾದಕವಸ್ತು ಗಳನ್ನು ಅಮೆಜಾನ್ ಕವರ್‌ಗಳಿಂದ ಪ್ಯಾಕ್ ಮಾಡಿ ಡಿಟಿಡಿಸಿ ಕೊರಿಯರ್ ಮೂಲಕ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಿಗೆ ಸಾಗಿಸುತ್ತಿದ್ದ.
ಆರೋಪಿಯು ಕಳುಹಿಸಿದ್ದ ಮಾದಕವಸ್ತುಗಳಲ್ಲಿ ಕಾಲು ಭಾಗವನ್ನು ತಾನೇ ಇಟ್ಟುಕೊಂಡು ನಗರದ ಗಿರಾಕಿಗಳಿಗೆ ಕೊರಿಯರ್ ಮೂಲಕ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದ. ಹೈಡ್ರೊಗಾಂಜಾ ಇರುವ ಚಾಕೊಲೆಟ್‌ನ್ನು ಪ್ರತಿಷ್ಠಿತ ಸ್ಕೂಲ್‌ಗಳ ಮಕ್ಕಳಿಗೆ 1 ರಿಂದ 2 ಸಾವಿರ ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿತ್ತು.
ಜ್ಞಾನ ಹೆಚ್ಚಳ
ಗಾಂಜಾ ಚಾಕೊಲೆಟ್‌ನ್ನು ಸೇವಿಸಿದರೆ ಮಕ್ಕಳಲ್ಲಿ ಜ್ಞಾನ ಹಾಗೂ ಬುದ್ಧಿಮತ್ತೆ ಹೆಚ್ಚಳವಾಗುತ್ತದೆ ಎಂದು ನಂಬಿಸಲಾಗುತ್ತಿತ್ತು. 8 ರಿಂದ 12 ವರ್ಷ ವಯಸ್ಸಿನ ಶ್ರೀಮಂತ ಕುಟುಂಬದ ಮಕ್ಕಳನ್ನು ಗುರಿಯಾಗಿಸಿಕೊಂಡು ಆರೆಂಜ್, ಸ್ಟ್ರಾಬೆರಿ, ಚಾಕೊಲೆಟ್ (ಸುವಾಸನೆಯುಳ್ಳ) ಫ್ಲೇವರ್‌ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಹೈಡ್ರೊ ಗಾಂಜಾವಿದ್ದ ದುಬಾರಿ ಚಾಕೊಲೆಟಿನ ಬಗ್ಗೆ ಅನುಮಾನಗೊಂಡ ಪೋಷಕರೊಬ್ಬರು ನೀಡಿದ ಮಾಹಿತಿಯಾಧರಿಸಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ಕೈಗೊಂಡಾಗ ಅಂತರರಾಷ್ಟ್ರೀಯ ಡ್ರಗ್ ಮಾಫಿಯಾ ಜಾಲ ಪತ್ತೆಯಾಯಿತು.
ಕೆನಡಾದಿಂದ ತರುತ್ತಿದ್ದ ಗಾಂಜಾವನ್ನು ಅಲ್ಲಿಂದಲೇ ತರಿಸಿಕೊಂಡ ಸಣ್ಣ ಡಬ್ಬದ ಯಂತ್ರದಲ್ಲಿ ಮೇಲೆ ಗಾಂಜಾಸೊಪ್ಪು ಹಾಕಿ ತಿರುಗಿಸಿ ಪುಡಿಮಾಡಿ ಅದನ್ನು ಸಿಗರೇಟ್‌ಗೆ ತುಂಬಿಸಿ ಮಾರಾಟ ಮಾಡುವುದಲ್ಲದೆ ಅಶಿಶ್ ಆಯಿಲ್‌ನ್ನು ಹುಕ್ಕಾ ಬಾರ್‌ಗಳಿಗೆ ಚಾಕೊಲೆಟ್ ಜೆಲ್ಲಿಗಳನ್ನು ಪಬ್, ಬಾರ್ ಆಂಡ್ ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂತು ಎಂದು ಭಾಸ್ಕರರಾವ್ ತಿಳಿಸಿದರು.
ಗಾಂಜಾ ಜೆಲ್ಲಿ
ಪ್ರಾರಂಭದಲ್ಲಿ ಮಾದಕ ವ್ಯಸನಿಗಳಾಗುವವರಿಗೆ ಮಾದಕ ಚಟವನ್ನು ಪ್ರಾರಂಭಿಸಲು ಗಾಂಜಾ ಫ್ಲೇವರ್‌ನ ಚಾಕೊಲೆಟ್ ಹಾಗೂ ಪೆಪ್ಪರ್‌ಮೆಂಟ್ (ಜೆಲ್ಲಿ)ಗಳನ್ನು ನೀಡಲಾಗುತ್ತಿತ್ತು. ಅವುಗಳನ್ನೂ ಸಹ ವಿದೇಶದಿಂದ ತರಿಸಿಕೊಂಡಿದ್ದು, 12 ಚಾಕೊಲೆಟ್ ಪ್ಯಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇ-ಸಿಗರೇಟ್‌ನಲ್ಲಿ ಉಪಯೋಗಿಸುವ ಅಶೀಶ್ ಆಯಿಲ್‌ನ್ನು ಒಳಗೊಂಡ ವೀಡ್ ಫ್ಲೇವರ್‌ನ 100 ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿಯೇವಿವಿಧ ರೀತಿಯ ಮಾದಕ ವಸ್ತುಗಳನ್ನು ತರಿಸಿಕೊಂಡು ತನ್ನ ಸಹಚರನ ಮೂಲಕ ಮಾರಾಟ ಮಾಡುತ್ತಿದ್ದ ಆರೋಪಿಯು ಗಾಂಜಾ ಎಲೆಗಳನ್ನು ಪುಡಿ ಮಾಡಲು ಚಿಕ್ಕ ಗಾಂಜಾ ಕ್ರಷರ್‌ಗಳನ್ನು ಇಟ್ಟುಕೊಂಡಿದ್ದ ಎಂದರು.
ಬಂಧಿತ ಆರೋಪಿ ಹಾಗೂ ಆತನ ಸಹಚರನಿಂದ ಸ್ಕೋಡಾ ಕಾರು, ಕೆಟಿಎಂ ಡ್ಯೂಪ್ ಬೈಕ್, ತೂಕದ ಯಂತ್ರ, 1 ಲಕ್ಷ ನಗದು ಸೇರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಅಮೇಜಾನ್ ವಿರುದ್ಧ ಕ್ರಮ
ಮಾದಕವಸ್ತುವನ್ನೊಳಗೊಂಡ ಹಾಲಿನಪುಡಿ ಡಬ್ಬ, ಚಾಕೊಲೆಟ್‌ಗಳನ್ನು ಸಾಗಾಣೆ ಮಾಡಿದ ಅಮೇಜಾನ್ ಕಂಪನಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ವಸ್ತುವನ್ನು ಪರಿಶೀಲಿಸುವ ಮೊದಲು ಅವುಗಳನ್ನು ಸಾಗಾಣೆ ಮಾಡುವುದು ಅಪರಾಧವಾಗಿದೆ ಎಂದು ಹೇಳಿದರು.
ಕಾರ್ಗೊದಲ್ಲಿ ನಿರ್ಲಕ್ಷ್ಯ
ಕೆನಡಾದಿಂದ ಹೈಡ್ರೊ ಗಾಂಜಾ ಪ್ಯಾಕೇಟ್‌ಗಳನ್ನು ಮಕ್ಕಳ ಹಾಲಿನ ಡಬ್ಬಗಳ ಮಧ್ಯೆ ಅಡಗಿಸಿಟ್ಟು ಕೊರಿಯರ್ ಮೂಲಕ ತರಿಸಿಕೊಳ್ಳಲಾಗುತ್ತಿದ್ದು, ಪ್ರತಿ ಡಬ್ಬದ ತೂಕ 2 ಕೆಜಿ 750 ಗ್ರಾಂ ಆಗಿದ್ದರೆ, ಅದರಲ್ಲಿನ ಪ್ರತಿ ಗ್ರಾಂ 3 ರಿಂದ 4 ಸಾವಿರ ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿತ್ತು. ಅಂತರರಾಷ್ಟ್ರೀಯವ ವಿಮಾನ ನಿಲ್ದಾಣಗಳಲ್ಲಿ ಕಾರ್ಗೊ ತಪಾಸಣೆಯನ್ನು ಕಣ್ತಪ್ಪಿಸಿ ಇವುಗಳನ್ನು ತರುತ್ತಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳ ವಿವರ ಕೇಳಲಾಗಿದ್ದು, ಮುಂದೆ ತಪಾಸಣೆಯಲ್ಲಿ ಎಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸೂಚನೆ ನೀಡಿದ್ದಾರೆ..
ಶ್ವಾನ ದಳ
ನಗರಕ್ಕೆ ವಿಮಾನ, ರೈಲ್ವೆ, ಬಸ್‌ಗಳಿಂದ ಮಾದಕ ವಸ್ತುಗಳನ್ನು ಸಾಗಾಣೆ ಮಾಡುವುದನ್ನು ಪತ್ತೆ ಹಚ್ಚಲು 50 ಶ್ವಾನವನ್ನೊಳಗೊಂಡ ಸುಸಜ್ಜಿತ ಶ್ವಾನದಳವನ್ನು ರಚಿಸಲಾಗುತ್ತಿದ್ದು, ಸದ್ಯದಲ್ಲೇ ದಳವು ಕಾರ್ಯಾಚರಣೆಗಿಳಿಯಲಿದ್ದು, ಇದರಿಂದ ಮಾದಕವಸ್ತು ಮಾರಾಟ ಜಾಲವನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಇದಲ್ಲದೆ ಮಾದಕ ವಸ್ತುಗಳ ತನಿಖೆಗಾಗಿಯೇ ಸಿಸಿಬಿಯಲ್ಲಿ ವಿಶೇಷ ತನಿಖಾ ದಳವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕುಲ್‌ದೀಪ್ ಕುಮಾರ್ ಜೈನ್ ಅವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
