ಬೆಂಗಳೂರು
ಕೈದಿಗಳಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಕೆಲ ಸಿಬ್ಬಂದಿಯ ಸಹಕಾರದಿಂದ ಗಾಂಜಾ ಪೂರೈಕೆಯಾಗಲಿದೆ ಎನ್ನುವ ಆರೋಪ ಬೆನ್ನಲ್ಲೇ ಖೈದಿಗಳಿಗೆ ಅಕ್ರಮವಾಗಿ ಗಾಂಜಾ ಪೂರೈಸಿ ತಲೆಮರೆಸಿಕೊಂಡಿದ್ದ ಕಾರಾಗೃಹದ ಪ್ರಥಮ ದರ್ಜೆ ಬೋಧಕನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರಪ್ಪನ ಅಗ್ರಹಾರ ವಸತಿ ನಿಲಯದ 5ನೇ ಬ್ಲಾಕ್‍ನ ಕುಮಾರಸ್ವಾಮಿ (32) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಬಂಧಿಸುವ ಮೂಲಕ ಸಜಾ ಬಂಧಿಗಳ ಹಣದ ಆಮಿಷಕ್ಕೆ ಒಳಗಾಗಿ ಕಾರಾಗೃಹದ ಕೆಲವು ಸಿಬ್ಬಂದಿಯ ಸಹಕಾರದಿಂದ ಗಾಂಜಾ ಪೂರೈಕೆಯಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ
ಬಂಧಿತ ಆರೋಪಿ ಕೇಂದ್ರ ಕಾರಾಗೃಹದಲ್ಲಿ ಪ್ರಥಮ ದರ್ಜೆ ಬೋಧಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಗಾಂಜಾ ಎಲ್ಲಿಂದ ತಂದು ಪೂರೈಕೆ ಮಾಡುತ್ತಿದ್ದ ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಆರೋಪಿಯು ಕಳೆದ ಆ. 21 ರಂದು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ತಪಾಸಣೆಗೊಳಗಾಗದೆ ಕರ್ತವ್ಯಕ್ಕೆ ಹಾಜರಾಗಿ ಕಂಪ್ಯೂಟರ್ ಸರ್ವರ್ ರೂಂನಲ್ಲಿ ಸಜಾಬಂಧಿ ಮಂಜುನಾಥ್‍ಗೆ 100 ಗ್ರಾಂ ತೂಕದ 4 ಪಾಕೆಟ್ ಗಾಂಜಾ ನೀಡಿದ್ದ.ಈ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕರು ನೀಡಿದ್ದ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಆಲಮಾದೇನ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಜೈಲಿನಲ್ಲಿ ಗಾಂಜಾ ಪೂರೈಕೆಯಾಗಿದ್ದರ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಆರೋಪಿಯು ಪೊಲೀಸರಿಗೆ ಸಿಗದೆ ಸೆಷೆನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡಿದ್ದರಿಂದ ಹೈಕೋರ್ಟ್‍ಗೆ ತಾನು ತಲೆಮರಸಿಕೊಂಡಿಲ್ಲವೆಂದು ತಪ್ಪು ಮಾಹಿತಿ ನೀಡಿ ಜಾಮೀನು ಪಡೆಯಲು ಪ್ರಯತ್ನಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸ್ ಇನ್ಸ್‍ಪೆಕ್ಟರ್ ಕಿಶೋರ್ ಕುಮಾರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ