237 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಕ್ರಮ:ಸಚಿವ ಈಶ್ವರಪ್ಪ

ಬಳ್ಳಾರಿ

    ಇಲ್ಲಿನ ಜಿಲ್ಲಾಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಪಂ ಸ್ವಚ್ಛಭಾರತ ಮಿಶನ್ ಯೋಜನೆ ಅಡಿ ಜಿಲ್ಲೆಯ 80 ಗ್ರಾಪಂಗಳಿಗೆ ಘನತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

    ಬಳಿಕ ಮಾತನಾಡಿ, ಘನತ್ಯಾಜ್ಯ ಸಂಗ್ರಹಣಾ ಮತ್ತು ವಿಲೇವಾರಿಯಲ್ಲಿ ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಪ್ರಥಮಸ್ಥಾನದಲ್ಲಿರುವುದು ಅತ್ಯಂತ ಸಂತಸ ತಂದಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲರು ಅಭಿನಂದನಾರ್ಹರು ಎಂದರು.ಬಳ್ಳಾರಿ ಜಿಲ್ಲೆಯ ಒಟ್ಟು 237 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಕುರಿತು ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಕ್ರಮವಹಿಸಲಾಗಿದೆ, ಈಗಾಗಲೇ 146 ಗ್ರಾಮ ಪಂಚಾಯತಿಗಳಲ್ಲಿ ಸ್ಥಳವನ್ನು ಗುರುತಿಸಿ ವಿಸ್ತ್ರತ ಯೋಜನಾ ವರದಿ ತಯಾರಿಸಲು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ತರಬೇತಿ ನೀಡಲಾಗಿದೆ.

    ಪ್ರಸ್ತುತ 100 ಗ್ರಾಮ ಪಂಚಾಯತಿಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ 98 ಗ್ರಾಮ ಪಂಚಾಯತಿಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದ್ದು, ಅವುಗಳಲ್ಲಿ ಮೊದಲನೇ ಹಂತದಲ್ಲಿ ಅನುಮೋದನೆ ಪಡೆದ 16 ಗ್ರಾಮ ಪಂಚಾಯತಿಗೆ ವಾಹನಗಳನ್ನು ಖರೀದಿಸಲಾಗಿದ್ದು,ಎರಡನೇ ಹಂತದಲ್ಲಿ 80 ಗ್ರಾಮ ಪಂಚಾಯತಿಗಳಿಗೆ ವಾಹನಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ವಿತರಿಸಲಾಗುತ್ತಿದೆ ಎಂದರು.

    ಶೌಚಾಲಯ,ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಿದಂತೆ ರಾಜ್ಯದಲ್ಲಿರುವ 6021 ಗ್ರಾಪಂಗಳಲ್ಲಿಯೂ ಸೋಲಾರ್ ವಿದ್ಯುತ್‍ದೀಪ ಅಳವಡಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ. ಮನೆಮನೆ ನೀರು ಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಯತ್ನ ನಡೆಸಲಾಗುತ್ತಿದ್ದು,ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಮುಗಿದ ಕಡೆ ಇದೇ ವರ್ಷದಿಂದ ಕೆಲಸ ಆರಂಭಿಸಲಾಗುತ್ತಿದೆ ಎಂದರು.

    ಶಾಸಕ ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಪ್ರದೇಶದಂತೆ ಪ್ರತಿಹಳ್ಳಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅನುಸರಿಸಲಾಗಿರುವ ಈ ಕ್ರಮ ಅತ್ಯಂತ ಶ್ಲಾಘನೀಯವಾದುದಾಗಿದೆ ಎಂದರು. ನಮ್ಮ ನಡೆ-ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಡಗೂಡಿ ಹಳ್ಳಿಕಡೆ ಸಾಗುವ ಹಾಗೂ ನೈರ್ಮಲ್ಯ,ಆರೋಗ್ಯ,ಕುಂದುಕೊರತೆ ಸೇರಿದಂತೆ ಇನ್ನೀತರ ದೂರು-ದುಮ್ಮಾನಗಳನ್ನು ಆಲಿಸಿ ಪರಿಹರಿಸಲಾಗುವುದು. ತಾವೇ ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು.

    ಆಯುಷ್ಮಾನ್ ಭಾರತ್-ಆರೋಗ್ಯ ಕಾರ್ಡ್ ನೋಂದಣಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಬಳ್ಳಾರಿ ಪಡೆದಿದ್ದು,ಇದಕ್ಕೆ ಕಾರಣಿಕರ್ತರಾದವರಲ್ಲಿ ಐವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ,ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸಿಇಒ ನಿತೀಶ್, ಜಿಪಂ ಸದಸ್ಯರಾದ ಅಲ್ಲಂಪ್ರಶಾಂತ, ಮಾನಯ್ಯ,ಸೌಭಾಗ್ಯ,ಜಿಪಂ ಉಪಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link