ರಾಣಿಬೆನ್ನೂರ:

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಪ್ರಾಂಗಣದಲ್ಲಿ ಬೆಳ್ಳುಳ್ಳಿ ದರ ರವಿವಾರ ಧಿಡೀರನೆ ಕುಸಿತಗೊಂಡಿದ್ದಕ್ಕೆ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪುಡಿ ಬೆಳ್ಳುಳ್ಳಿ ರೂ.500 ರಿಂದ 600, ಮಧ್ಯಮ 800 ರಿಂದ 1000, ದೊಡ್ಡದು 1200 ರಿಂದ 1800 ಹರಾಜು ಕೂಗಿದ್ದರು, ಅತೀ ಕಡಿಮೆಗೆ ಹರಾಜು ಕೂಗಿದ್ದರಿಂದ ರೈತರು ಪ್ರತಿಭಟನೆಗೆ ಮುಂದಾದರು. ಗದಗ, ಬಾಗಲಕೋಟಿ, ದಾವಣಗೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಇದಕ್ಕೂ ಹೆಚ್ಚಿನ ಮ್ರಮಾಣದಲ್ಲಿ ಹರಾಜ ಆಗಿದ್ದು, ಆದರೆ ಇಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಅತ್ಯಂತ ಕಡಿಮೆ ಬೆಲೆಗೆ ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಶಹರ ಠಾಣೆಯ ಪ್ರಭಾರಿ ಪಿಎಸ್‍ಐ ಶ್ರೀಶೈಲ ಚೌಗಲಾ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ರೈತರು ಮತ್ತು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ವ್ಯಾಪಾರಸ್ಥರು ಏಕಾಏಕಿ ಬೆಳ್ಳುಳ್ಳಿ ದರ ಕಡಿಮೆ ಕೂಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬರಗಾಲದಿಂದ ಜೀವನ ನಡೆಸುವುದು ದುಸ್ಥರವಾಗಿದೆ. ನೂರಾರು ಚೀಲ ಬೆಳ್ಳುಳ್ಳಿ ಬೆಳೆಯುವ ರೈತರು ನಾಲ್ಕೈದು ಚೀಲ ಬೆಳ್ಳುಳ್ಳಿ ಬೆಳೆದಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿದೆ. ವ್ಯಾಪಾರಸ್ಥರು, ಎಪಿಎಂಸಿ ಅಧಿಕಾರಿಗಳು ಎಲ್ಲಾ ಪೇಟೆಗಳ ದರ ಖಚಿತಪಡಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ ವಾರ ಈರುಳ್ಳಿ ಬೆಳೆ ಕೂಡ ದರ ಕುಸಿತಗೊಂಡಿತ್ತು. ರೈತರು ಪ್ರತಿಭಟನೆ ಮಾಡಿದ ಮೇಲೆ ವ್ಯಾಪಾರಸ್ಥರು ಮರು ಹರಾಜಿಗೆ ಒಪ್ಪಿಗೆ ನೀಡಿದರು. ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ರೈತರಿಗೆ ಇಂದು ಸರಿಯಾಗಿ ನ್ಯಾಯ ಒದಗಿಸದಿದ್ದರೆ ಹೆದ್ದಾರಿ ತಡೆ, ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರೈತ ಫಕ್ಕೀರಗೌಡ ರಾಮಲಿಂಗಣ್ಣನವರ ಮಾತನಾಡಿ, ರೈತರು ಕಳೆದ ಮೂರು ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗಾಲಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ವರ್ಷ ಕೂಡ ಮಳೆ ಬೆಳೆ ಇಲ್ಲದೇ ರೈತರಿಗೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ರಾಣಿಬೆನ್ನೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಅಲ್ಪಸ್ವಲ್ಪ ಮಳೆಗೆ ಬಂದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಇದರಿಂದ ರೈತರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ನೊಂದು ನುಡಿದರು.
ಎಪಿಎಂಸಿ ಅಧ್ಯಕ್ಷ ಶಿದ್ದಲಿಂಗಪ್ಪ ಕುಡಗೋಲ ಅವರು ರೈತರು ಮತ್ತು ವ್ಯಾಪಾರಸ್ಥರು ಹಾಗೂ ಖರೀದಿದಾರರನ್ನು ಕರೆಸಿ ಬೇರೆ ಬೇರೆ ಮಾರುಕಟ್ಟೆಗಳ ಬೆಳ್ಳುಳ್ಳಿ ದರವನ್ನು ಖಚಿತಪಡಿಸಿಕೊಂಡು ಪುಡಿ ಬೆಳ್ಳುಳ್ಳಿ ಮೊತ್ತ 600 ರಿಂದ 800, ಮಿಡಿಯಂ ಬೆಳ್ಳುಳ್ಳಿ ಮೊತ್ತ 1200 ರಿಂದ 1600 ಮತ್ತು ದೊಡ್ಡದು ಮೊತ್ತ 1800 ರಿಂದ 2200 ವರೆಗೆ ದರ ಹೆಚ್ಚಿಗೆ ಮಾಡಿದಾಗ ರೈತರು ಒಪ್ಪಿಗೆ ನೀಡಿ ಪ್ರತಿಭಟನೆಯನ್ನು ವಾಪಸ್ಸು ಪಡೆದರು. ನಂತರ ಎಲ್ಲ ವ್ಯಾಪಾರಸ್ಥರು ಮರು ಹರಾಜು ಮಾಡಿದರು.
ಎಪಿಎಂಸಿ ಸದಸ್ಯರಾದ ಜೆಟ್ಟೆಪ್ಪ ಕರೇಗೌಡ್ರ, ರಾಜೇಂದ್ರ ಬಸೆನಾಯಕ, ರಮೇಶ ನಾಯಕ ಹಾಗೂ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಸ್.ಗೌಡ್ರ, ಅಧೀಕ್ಷಕ ರಾಘವೇಂದ್ರ, ಎಂ.ಎನ್.ಬೆಣ್ಣಿ ಹಾಗೂ ರೈತ ಮುಖಂಡರಾದ ಶಂಕ್ರಪ್ಪ ಮೆಣಸಿನಹಾಳ, ಬಿ ನಾಗರಾಜ, ಸಿದ್ದಪ್ಪ ಭರಮಪ್ಪ ರಡ್ಡೇರ, ಬಸಪ್ಪ ಮುಸ್ಟೂರು, ಮಹೇಶಪ್ಪ ಶಿರಗೇರಿ, ದ್ಯಾಮಪ್ಪ ಗುಂಡಗತ್ತಿ, ಹನುಮಂತಪ್ಪ ತಳವಾರ, ಚನ್ನಬಸಪ್ಪ ಪಾರ್ವತಿ, ಶಿವಪ್ಪ ನಾಯಕ, ಫಕ್ಕೀರಪ್ಪ ಬಣಕಾರ, ಶಿವನಗೌಡ ಪಾಟೀಲ ಇದ್ದರು. 15 ಸಾವಿರ ಕ್ಕೂ ಹೆಚ್ಚು ಚೀಲ ಬೆಳ್ಳುಳ್ಳಿ ಚೀಲಗಳನ್ನು ರೈತರು ತಂದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
