ಹೊಸಪೇಟೆ:
ಸುಪ್ರೀಂಕೋರ್ಟು ತೀರ್ಪು ಅನರ್ಹ ಶಾಸಕರ ಪರ ಬಂದ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಸಿಗಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ದೂರ ಉಳಿಯಲು ನಿರ್ಧರಿಸಿದ್ದಾರೆ.
ಗವಿಯಪ್ಪ ವಿಜಯನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಪ್ರಬಲ ಆಂಕಾಕ್ಷಿಯಾಗಿದ್ದರು. ತೀರ್ಪು ವಿರುದ್ದ ಬಂದರೆ ತಮಗೆ ಅವಕಾಶ ಸಿಗಬಹುದು ಎಂದುಕೊಂಡಿದ್ದರು. ಆದರೆ ಯಾವಾಗ ಸುಪ್ರೀಂಕೋರ್ಟ್ ತೀರ್ಪು ಅನರ್ಹ ಶಾಸಕ ಆನಂದಸಿಂಗ್ ಪರ ಬಂತೋ ಆಗಲೇ ಚುನಾವಣೆಗೇ ನಿಲ್ಲಬಾರದು ಎಂಬ ನಿರ್ಧಾರಕ್ಕೆ ಬಂದು ಉಪ ಚುನಾವಣೆಯ ನಂತರ ಮುಂದಿನ ನಡೆಯ ಬಗ್ಗೆ ತಿಳಿಸುವೆ ಎಂದಿದ್ದಾರೆ.
ತಮಗೆ ಕೊಟ್ಟಿದ್ದ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸದೇ, ಸ್ಪರ್ಧೆಯೂ ಮಾಡದೇ ಪಕ್ಷದಲ್ಲಿ ಮುಂದುವರೆಯಬೇಕೋ ? ಅಥವಾ ಬೇಡವೋ ? ಎಂಬುದನ್ನು ಡಿ.5ರ ನಂತರ ತಿಳಿಸುವುದಾಗಿ ಹೇಳಿದ್ದಾರೆ.ಸಿಎಂ ಯಡಿಯೂರಪ್ಪ ಕಳೆದ ಅ.9ರಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಗವಿಯಪ್ಪಗೆ ಕೊಟ್ಟು, ಭಿನ್ನಮತ ಶಮನ ಮಾಡಬಹುದು ಅಂದುಕೊಂಡಿದ್ದರು. ಆದರೆ ಗವಿಯಪ್ಪ ನಿಗಮ ಮಂಡಳಿ ಒಪ್ಪದೇ, ಟಿಕೆಟ್ ತಮಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಗವಿಯಪ್ಪ, ಸುಪ್ರೀಂ ತೀರ್ಪಿನಿಂದ ತಮಗೆ ಟಿಕೆಟ್ ಸಿಗಲ್ಲ ಅಂತ ಖಾತ್ರಿಯಾಗುತ್ತಿದ್ದಂತೆ ಉಪ ಚುನಾವಣೆಯಲ್ಲಿ ದೂರ ಉಳಿಯಲು ನಿರ್ಧರಿಸಿದ್ದಾರೆ.
ಕಳೆದ 2018ರ ವಿಧಾನ ಸಭಾ ಚುನಾವಣೆಯಲ್ಲಿ ಆನಂದಸಿಂಗ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಂತೆ, ಇತ್ತ ಗವಿಯಪ್ಪ ಬಿಜೆಪಿಗೆ ಸೇರುವ ಮೂಲಕ ಚುನಾವಣೆಯಲ್ಲಿ ಆನಂದಸಿಂಗ್ ವಿರುದ್ಧ ತೊಡೆ ತಟ್ಟಿದ್ದರು. ಚುನಾವಣೆಯಲ್ಲಿ ಆನಂದಸಿಂಗ್ ವಿರುದ್ಧ ಕಡಿಮೆ ಮತಗಳ ಅಂತರದಲ್ಲಿ ಪರಾಜಯಗೊಂಡಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆನಂದಸಿಂಗ್ ಮರಳಿ ಬಿಜೆಪಿ ಕಡೆ ವಾಲಿದ್ದಾರೆ. ಆದರೆ, ಗವಿಯಪ್ಪ ಮಾತ್ರ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿ ಇರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.ಆದರೆ ಇಂದು ಬೆಂಗಳೂರಿನಲ್ಲಿ ಆನಂದಸಿಂಗ್ ಅಧಿಕೃತವಾಗಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ