ತಾಲೂಕ್ ಪಂಚಾಯತಿ ಸಾಮಾನ್ಯ ಸಭೆ

ಬ್ಯಾಡಗಿ:

          ತಾಲೂಕಿನಲ್ಲಿ ಎಮ್‍ಎಸ್‍ಐಎಲ್ ಪರವಾನಿಗೆಯ ಮೂಲಕ ಮದ್ಯ ಮಾರಾಟ ಅಂಗಡಿಗಳನ್ನು ಪ್ರಾರಂಭಿಸಿದರೇ ಮಾತ್ರ ಅಕ್ರಮ ಮಾರಾಟ ಮದ್ಯ ಮಾರಾಟ ತಡೆಯಲು ಸಾಧ್ಯ, ಇಲ್ಲದೇ ಹೋದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಇಲಾಖೆಯಿಂದಲೂ ಸಹ ಸಾಧ್ಯವಿಲ್ಲವೆಂದು ಅಬ್ಕಾರಿ ನಿರೀಕ್ಷಕಿ ಆಸ್ಫೀಯಾಭಾನು ತಾ.ಪಂ.ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಿಳಿಸುವ ಮೂಲಕ ತಾಲೂಕಿನಲ್ಲಿ ಅಕ್ರಮ ಮಾರಾಟಕ್ಕೆ ಪರೋಕ್ಷವಾಗಿ ಸಮರ್ಥನೆ ಮಾಡಿದ್ದಾರೆ.

          ಸ್ಥಳೀಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಬ್ಕಾರಿ ಇಲಾಖೆಯ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದರೂ ಸಹ ಅದನ್ನು ತಡೆಗಟ್ಟಲು ವಿಫಲರಾಗಿರುವ ಇಲಾಖೆಯ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ನೀವು ಇಲಾಖೆಯವರು ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಬೆಂಬಲ ನೀಡುತ್ತ ಜನರ ಸಮಸ್ಯೆಗಳಿಗೆ ನೇರ ಹೊಣೆಯಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಅವುಗಳನ್ನು ಹೆಚ್ಚಿಸಲು ಮುಂದಾಗಿದ್ದಿರೆಂದು ದೂರಿದರು.

         ಇದಕ್ಕೆ ಪ್ರತಿಕ್ರಿಯಿಸಿದ ಅಬ್ಕಾರಿ ಅಧಿಕಾರಿ ಮಲ್ಲೂರ ಹಾಗೂ ಬುಡುಪನಹಳ್ಳಿ ಗ್ರಾಮಗಳಲ್ಲಿ ಎಮ್‍ಎಸ್‍ಐಎಲ್‍ನಿಂದ ಅಂಗಡಿಗಳನ್ನು ಪ್ರಾರಂಭಿಸಲು ಪರವಾನಿಗೆ ದೊರೆತಿದ್ದರೂ ಸಹ ಅವುಗಳನ್ನು ಪ್ರಾರಂಭಿಸಿಲ್ಲ. ಬುಡುಪನಹಳ್ಳಿ ಗ್ರಾಮದಲ್ಲಿ ಸ್ವಾಭಿಮಾನಿ ರಕ್ಷಣಾ ವೇದಿಕೆಯ ಹೆಸರಲ್ಲಿ ಅಂಗಡಿ ಪ್ರಾರಂಭಿಸಲು ತಕರಾರು ಮಾಡಲಾಗಿದ್ದು, ಈ ಗ್ರಾಮದಲ್ಲಿಯೇ ಸುಮಾರು 15ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟ ಮಾಡುವ ಗೂಡಂಗಡಿಗಳಿವೆ. ಅವುಗಳನ್ನು ನಿಯಂತ್ರಿಸಲು ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

         ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ತಾ.ಪಂ.ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಕಾರ್ಯಾಲಯ ಕಟ್ಟಡಕ್ಕೆ ಮಂಜೂರಾಗಿರುವ 1.ಕೋಟಿ ರೂ.ಗಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾದಲ್ಲಿ ಒದಗಿಸುವುದಾಗಿ ತಿಳಿಸಿದರಲ್ಲದೇ ಸಧ್ಯಕ್ಕೆ ತಮ್ಮ ಅನುದಾನದಲ್ಲಿ ಯಾವುದೇ ಹಣ ನೀಡಲು ಸಾಧ್ಯವಿಲ್ಲವೆಂದು ಸಭೆಗೆ ತಿಳಿಸಿದರು.

        ನೆಲ್ಲಿಕೊಪ್ಪ, ಕುಮ್ಮೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸದೇ ರೈತರ ಜಮೀನುಗಳಲ್ಲಿ ಕಾಲುವೆಗಳನ್ನು ಬೇಕಾಬಿಟ್ಟಿಯಾಗಿ ತೋಡಿದ್ದು ನೀರು ಹರಿಸಲು ಬಾರದಂತಾಗಿವೆ. ಕಾಗದದಲ್ಲಿ ಸುಮ್ಮನೆ ಸುಳ್ಳು ಲೆಕ್ಕ ತೋರಿಸಿ ನೀರು ಹರಿಸಿರುವುದಾಗಿ ಕೋಟ್ಯಾಂತರ ರೂಗಳನ್ನು ನುಂಗಿ ಹಾಕುತ್ತಿರುವ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಗ್ರಾಮಗಳಲ್ಲಿ ಕೂಡಿ ಹಾಕುವುದು ಖಚಿತವೆಂದು ತಾಪಂ ಸದಸ್ಯರಾದ ಮಹೇಶಗೌಡ ಪಾಟೀಲ ಹಾಗೂ ಶಾಂತಣ್ಣ ದೊಡ್ಡಮನಿ ಅವರು ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

         ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಅಭಿಯಂತರ ಜಯಣ್ಣ, ಅನುದಾನದ ಕೊರತೆಯಿಂದ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಅನುದಾನ ಬಿಡುಗಡೆಯಾದ ಕೂಡಲೇ ಈ ಬಗ್ಗೆ ಕ್ರಮ ವಹಿಸುವುದಾಗಿ ಸಭೆಗೆ ತಿಳಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಎಲ್ಲ ಕೆರೆಗಳ ಸಮಗ್ರ ಸುಧಾರಣೆಗೆ ಇಲಾಖೆಯಿಂದ ಕ್ರಮ ಕೈಗೊಳ್ಳಿ, ಇಲ್ಲದೇ ಹೋದಲ್ಲಿ ನಿಮ್ಮ ಇಲಾಖೆಯಿಂದ ಎನ್‍ಓಸಿ ನೀಡಿದಲ್ಲಿ ನರೇಗಾ ಯೋಜನೆಯಡಿ ಗ್ರಾ.ಪಂನಿಂದ ಕೆರೆ ಸುಧಾರಣಾ ಕಾಮಗಾರಿ ಕೈಗೊಳ್ಳುವುದಾಗಿ ಇಲಾಖಾಧಿಕಾರಿಗೆ ಹೇಳಿದರು.

        ದುಮ್ಮಿಹಾಳ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರವೊಂದರ ಶಿಕ್ಷಕಿಯ ಹುದ್ದೆ ತೆರವಾಗಿ 8 ತಿಂಗಳು ಗತಿಸಿದರೂ ಈವರೆಗೂ ಭರ್ತಿಯಿಲ್ಲಾ, ಅದೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕಿ ಹುದ್ದೆಗೆ ಅರ್ಜಿ ಕರೆದಿರುವುದು ಯಾವ ಕಾರಣಕ್ಕೆ ಎಂದು ತಾ.ಪಂ.ಸದಸ್ಯ ಶಾಂತಪ್ಪ ದೊಡ್ಡಮನಿ ಶಿಶು ಅಭಿವೃದ್ದಿಯ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರಲ್ಲದೇ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿದರು.

         ಸಭೆಯಲ್ಲಿ ವಿವಿಧ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು. ಸಭೆಯಲಿ ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೆಗೌಡ್ರ, ಸದಸ್ಯರಾದ ಪ್ರಭುಗೌಡ್ರ ಪಾಟೀಲ, ಜಗದೀಶ ಪೂಜಾರ, ಶಶಿಕಲಾ ಹಲಗೇರಿ, ಸಾವಿತ್ರಮ್ಮ ಕೋಡದ, ಪಾರ್ವತೆಮ್ಮ ಮುದಕಮ್ಮನವರ, ಪೂರ್ಣಿಮಾ ಆನ್ವೇರಿ, ಗುಡ್ಡಪ್ಪ ಕೋಳೂರ, ಲಲಿತಾ ಲಮಾಣಿ, ಲಲಿತಾ ಪಾಟೀಲ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link