ಚಳ್ಳಕೆರೆ
ಕ್ಷೇತ್ರದ 20 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಐದು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಶೇ.25ರಷ್ಟು ಕಡಿಮೆ ಬಿತ್ತನೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಿದ್ದು, ತಾಲ್ಲೂಕಿನ ಒಟ್ಟು 64500 ಹೆಕ್ಟೇರ್ ಪ್ರದೇಶದ ಸಂಪೂರ್ಣ ಬೆಳೆ ಒಣಗಿದ್ದು, ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರಕ್ಕೆ ವಿಶೇಷ ವರದಿ ಕಳುಹಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ತಾಲ್ಲೂಕಿನಾದ್ಯಂದ ಒಟ್ಟು 14757 ರೈತರು ಮಾತ್ರ ಪ್ರಸ್ತುತ ವರ್ಷ ಬೆಳೆ ವಿಮೆ ವ್ಯಾಪ್ತಿಗೆ ಅರ್ಜಿ ಸಲ್ಲಿಸಿದ್ದಾರೆಂದು ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಮಾಹಿತಿ ನೀಡಿದರು.
ಅವರು, ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತುತ ಸ್ಥಿತಿಯ ಬಗ್ಗೆ ಇಲಾಖೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಕೆ.ಕವಿತಾ ರಾಮಣ್ಣ ಅಧ್ಯಕ್ಷತೆಯಲ್ಲಿ ನಡೆದಿದ್ದು, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್ ಎಲ್ಲರನ್ನು ಸ್ವಾಗತಿಸಿದ ನಂತರ ಸಭೆ ಪ್ರಾರಂಭವಾಯಿತು.
ಕೃಷಿ ಇಲಾಖೆಯ ಮಾಹಿತಿಗೆ ಆಕ್ಷೇಪ ವ್ಯಕ್ತ ಪಡಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಜಿ.ವೀರೇಶ್, ಸಣ್ಣ ಸೂರಯ್ಯ, ನಾಗೇಂದ್ರ, ತಿಪ್ಪೇಸ್ವಾಮಿ, ಕಾಲುವೇಹಳ್ಳಿ ಶ್ರೀನಿವಾಸ್ ಮುಂತಾದವರು ಎಲ್ಲಿಯೂ ಮಳೆಯಾಗಿಲ್ಲ. ರೈತರು ಕಂಗಾಲಾಗಿದ್ಧಾರೆ ಕೃಷಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಸಮೀಕ್ಷೆ ನಡೆಸಿ ನಷ್ಟದ ಅಂದಾಜನ್ನು ಸರ್ಕಾರಕ್ಕೆ ತಿಳಿಸಬೇಕಿದೆ.
ಕಳೆದ ಮೂರು ವರ್ಷಗಳಿಂದ ಎಸ್ಸಿ ಮತ್ತು ಎಸ್ಟಿ ರೈತ ಸಮುದಾಯಕ್ಕೆ ನೀಡಿದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲವೆಂದು ಅಧಿಕಾರಿ ವಿರುದ್ದ ಹರಿಹಾಯ್ದರು. ಇದಕ್ಕೆ ಉತ್ತರವಿತ್ತ ಕೃಷಿ ಅಧಿಕಾರಿ ಕಳೆದ ಮೂರು ವರ್ಷಗಳಿಂದ ಎರಡೂ ಸಮುದಾಯಗಳಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ಮುಂದಿನ ಸಭೆಯಲ್ಲಿ ಮಂಡಿಸುವ ಭರವಸೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಾಧಿಕಾರಿ ಮಾಹಿತಿ ನೀಡಿ, ಪ್ರಸ್ತುತ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಯಂತ್ರಣದಲ್ಲಿದೆ. ಕೆಲವು ಗ್ರಾಮಗಳಲ್ಲಿ ಮಾತ್ರ ಪೈಪ್ ದುರಸ್ಥಿತಿ ಹಿನ್ನೆಲೆ ಸಕಾಲದಲ್ಲಿ ನೀರು ಕೊಡಲಾಗಿಲ್ಲ. ಕೊರತೆ ಇರುವ ಗ್ರಾಮಗಳ ಪಟ್ಟಿ ಮಾಡಿ ನೀರು ನೀಡುವ ಬಗ್ಗೆ ಕಾಯೋನ್ಮುಖವಾಗುವ ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಉಮಾಜನಾರ್ಧನ್, ರಂಜಿತಾ, ತಿಪ್ಪಮ್ಮ ಮುಂತಾದವರು ಮಾತನಾಡಿ, ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಒಟ್ಟು 103 ಶಿಕ್ಷಕರ ಹುದ್ದೆ ಖಾಲಿ ಇದ್ದು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ತಾಲ್ಲೂಕಿನಾದ್ಯಂತ ಪ್ರಾಥಮಿಕ, ಮಾದ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಣೆ ಮಾಡಲಾಗಿದೆ.
ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 8 ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ತಯಾರಿದ್ದು ಟೆಂಡರ್ ಪ್ರಕ್ರಿಯಲ್ಲಿದೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ಸಮರ್ಥರಾಯ, ಇ.ರಾಮರೆಡ್ಡಿ, ನಾಗೇಂದ್ರಪ್ಪ, ತಿಪ್ಪೇಸ್ವಾಮಿ ಮುಂತಾದವರು ಬುಡ್ನಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಹನುಮಂತಪ್ಪ ಎಂಬುವವರು ಶಾಲಾ ಕಾಂಪೌಂಡ್ ಬಂಡೆಗಳನ್ನು ಅನುಮತಿ ಇಲ್ಲದೆ ಮಾರಾಟ ಮಾಡಿ ಒಂದು ಲಕ್ಷ ಹಣವನ್ನು ಖಾಸಗಿ ಅವರಿಂದ ಪಡೆದಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಮಾಜ ಕಲ್ಯಾಣಾಧಿಕಾರಿ ಮಮತ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳ ವೇತನ ಮಾಹಿತಿ ಸಂಗ್ರಹವಾಗುತ್ತಿದ್ದು, ಅ.15ರ ತನಕ ದಿನಾಂಕ ವಿಸ್ತರಣೆಯಾಗಿದೆ, ನಂತರ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ ಎಂದರು. ಶಿಶು ಅಭಿವೃದ್ಧಿ ಅಧಿಕಾರಿ ಗಿರಿಜಾಂಬ ಮಾತನಾಡಿ, ಹಲವಾರು ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿದ್ದು ತುರ್ತು ರಿಪೇರಿಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಪಶುವೈದ್ಯಾಧಿಕಾರಿ ಡಾ.ಹನುಮಪ್ಪ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಬೆಸ್ಕಾಂ ಅಧಿಕಾರಿ ಶಿವಪ್ರಸಾದ್, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶಶಿಕುಮಾರ್ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ ಇನ್ನಿತರರು ಮಾತನಾಡಿ, ತಾಲ್ಲೂಕಿನ ಯಾವುದೇ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದರೂ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿ ವರ್ಗ ನೀವು ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಅದ್ದರಿಂದ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಅವರು ಒತ್ತಾಯಿಸಿದರು. ಅರಣ್ಯ ಇಲಾಖೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡುವಂತೆ ಅಧಿಕಾರಿ ಸುರೇಶ್‍ಗೆ ಸೂಚನೆ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ