ಮಕ್ಕಳನ್ನು ಮರಳಿ ಶಾಲೆಗೆ ಕರೆ ತನ್ನಿ

ಚಿತ್ರದುರ್ಗ:

         ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಪತ್ತೆ ಹಚ್ಚಿ ಮರಳಿ ಶಾಲೆಗೆ ಕರೆತರುವ ಹೊಣೆಗಾರಿಕೆ ಪೋಷಕರು ಹಾಗೂ ಶಿಕ್ಷಕರುಗಳ ಮೇಲಿದೆ ಎಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ರೇವಣಸಿದ್ದಪ್ಪ ಹೇಳಿದರು.

           ಇಂಗಳದಾಳ್ ಗ್ರಾ.ಪಂ.ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂಗಳದಾಳ್ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.

         ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಗ್ರಾಮೀಣ ಪ್ರದೇಶಗಳ ಬಡ ಮಕ್ಕಳು ಶಿಕ್ಷಣವಂತರಾಗಬೇಕೆನ್ನುವ ಉದ್ದೇಶದಿಂದ ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೆಲವೊಮ್ಮೆ ಪೋಷಕರು ಬಡತವನ್ನು ಕಾರಣವನ್ನಾಗಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದುಂಟು. ಮಕ್ಕಳು ತಮಗೆ ಅವಶ್ಯಕವಾದ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ಪೂರೈಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

          ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಮುಯಿನ್ ಅಸ್ಮಾ ಮಾತನಾಡಿ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕೆಲವು ಭೌತಿಕ ಕಾರಣಗಳಿವೆ. ಶುದ್ದವಾದ ಕುಡಿಯುವ ನೀರು, ಶೌಚಾಲಯ ಮಕ್ಕಳಿಗೆ ಅತ್ಯವಶ್ಯಕವಾಗಿ ಶಾಲೆಗಳಲ್ಲಿರಬೇಕು. ಅದಕ್ಕಾಗಿ ಗ್ರಾ.ಪಂ.ಯಿಂದ ಸಾಧ್ಯವಾದಷ್ಟು ಅನುಕೂಲ ಒದಗಿಸುತ್ತೇವೆ. ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಅದರಂತೆ ಮಕ್ಕಳು ಚಿಕ್ಕಂದಿನಿಂದಲೇ ಶೌಚಾಲಯವನ್ನು ಬಳಸುವುದನ್ನು ರೂಡಿಮಾಡಿಕೊಳ್ಳಬೇಕು ಎಂದರು.

           ಸಿ.ಆರ್.ಪಿ. ಕೆ.ರೇವಣ್ಣ ಮಾತನಾಡುತ್ತ ಈಗಾಗಲೆ ಆರು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಆ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಶಾಲೆಗೆ ಕರೆತರುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

            ಗ್ರಾ.ಪಂ.ಸದಸ್ಯ ಹೆಚ್.ನಾಗರಾಜ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಪ್ರಕಾಶ್, ಮುಖ್ಯ ಶಿಕ್ಷಕ ಅಂಜಿನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಂ.ಎಸ್.ಲತ, ಬಿಲ್ ಕಲೆಕ್ಟರ್ ಮಂಜಣ್ಣ, ಗ್ರಾ.ಪಂ.ಮಾಜಿ ಸದಸ್ಯ ರಾಘವೇಂದ್ರ, ಎಲ್ಲಾ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರುಗಳು, ಮುಖ್ಯ ಶಿಕ್ಷಕರುಗಳಾದ ನಿರ್ಮಲ, ಲಲಿತಮ್ಮ, ಚಂದ್ರಣ್ಣ, ಸುಧಾರಾಣಿ, ತಿಪ್ಪೇರುದ್ರಪ್ಪ, ಲಲಿತಮ್ಮ, ಶಿಕ್ಷಕರುಗಳಾದ ಅಪ್ಸನಾಭಾನು, ವಸಂತ, ಶಿಲ್ಪಶ್ರಿ, ಮಕ್ಕಳು ಹಾಗೂ ಪೋಷಕರು ಸಭೆಯಲ್ಲಿ ಹಾಜರಿದ್ದರು. ಏಳನೆ ತರಗತಿಯ ಬಾಲಕಿ ಕೆ.ಲಕ್ಷ್ಮಿದೇವಿ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap