ತುಮಕೂರು
ದಿನೇ ದಿನೇ ಕೊರೋನಾ ವೈರಸ್ ಹರಡುವಿಕೆಯ ಭೀತಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಹಂತದ ಕ್ರಮಕ್ಕೆ ಮುಂದಾಗಿರುವ ತುಮಕೂರು ಮಹಾನಗರ ಪಾಲಿಕೆಯು ಇದೀಗ ಪಾಲಿಕೆ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಈ ಬಗ್ಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಗಿನಿಂದ ಪಾಲಿಕೆ ಕಚೇರಿಯಲ್ಲಿ ನಿರ್ಬಂಧ ಜಾರಿಗೆ ಬಂದಿದೆ. ಕಂದಾಯ ಶಾಖೆ, ಇಂಜಿನಿಯರಿಂಗ್ ಶಾಖೆಗಳ ಪ್ರವೇಶದಲ್ಲೇ ಶುಕ್ರವಾರ ಬೆಳಗ್ಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಯಿತು. ಮುಂದಿನ ಹಂತವಾಗಿ ಮೇಯರ್, ಉಪಮೇಯರ್, ಆಯುಕ್ತರ ಕೊಠಡಿಗಳುಳ್ಳ ಪಾಲಿಕೆಯ ಮುಖ್ಯ ಕಚೇರಿಗೆ ನಿರ್ಬಂಧವನ್ನು ವಿಸ್ತರಿಸಲಾಗುತ್ತಿದೆ. ಮುಖ್ಯಕಚೇರಿಯಲ್ಲಿ ಪೂರ್ವ ಮತ್ತು ಪಶ್ಚಿಮದಲ್ಲಿ ಪ್ರವೇಶ ದ್ವಾರಗಳಿವೆ. ಇವೆರಡರಲ್ಲಿ ಒಂದನ್ನು ಮಾತ್ರ ತೆರೆಯಲು ಉದ್ದೇಶಿಸಲಾಗಿದೆ. ಇಲ್ಲಿ ಪಾಲಿಕೆಯ ಸಿಬ್ಬಂದಿ ಹಾಜರಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವರು.
ಸಹಾಯವಾಣಿ ಬಳಸಿಕೊಳ್ಳಿ
ಸಾರ್ವಜನಿಕರಿಗೆ ಸಂಜೆ 4 ರಿಂದ 5-30 ರವರೆಗೆ ಮಾತ್ರ ಪಾಲಿಕೆ ಕಚೇರಿಯೊಳಗೆ ಆಗಮಿಸಲು ಅವಕಾಶ ನೀಡಲಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಪ್ರಸ್ತುತ ಆರೋಗ್ಯ ವಿಭಾಗ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗಗಳ ಕರ್ತವ್ಯ ನಿರ್ವಹಣೆಗೆ ಆದ್ಯತೆ ನೀಡಿದ್ದು, ಖಾತೆ ಬದಲಾವಣೆ ಮೊದಲಾದವುಗಳಿಗೆ ಈಗ ಪ್ರಾಮುಖ್ಯತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಚ್ಚತೆ, ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳಿದ್ದರೆ ಪಾಲಿಕೆಯ ಸಹಾಯವಾಣಿ (94498 72599)ಗೆ ತಿಳಿಸಬಹುದಾಗಿದೆ. ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಸಮಯಕ್ಕೆ ಪಾಲಿಕೆ ಕಚೇರಿಗೆ ಬರಬಹುದಾಗಿದೆ.
ಅನಾವಶ್ಯಕವಾಗಿ ಸಾರ್ವಜನಿಕರು ಕಚೇರಿಗೆ ಬರುವುದನ್ನು, ಗುಂಪುಗಳಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆಯ ಉಪಆಯುಕ್ತ (ಆಡಳಿತ) ಡಾ. ನಾಗೇಶ್‍ಕುಮಾರ್ ತಿಳಿಸಿದ್ದಾರೆ.
ಇಂಥವರಿಗೆ ನಿಷೇಧ
ಯಾವುದೇ ವ್ಯಕ್ತಿ ಕೆಮ್ಮು, ನೆಗಡಿ, ಜ್ವರ ಇತ್ಯಾದಿಗಳಿಂದ ಬಳಲುತ್ತಿದ್ದಲ್ಲಿ, ಅಂತಹವರಿಗೆ ಕಚೇರಿ ಪ್ರವೇಶವನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪಾಲಿಕೆ ಕಚೇರಿಗೆ ಸಾರ್ವಜನಿಕರು ತುರ್ತಾಗಿ ಬರಲೇ ಬೇಕಿದ್ದರೆ, ಮುಂಜಾಗ್ರತಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳನ್ನು ಬಳಸಬೇಕು. ತಮ್ಮ ಕೆಲಸ ಮುಗಿದ ತಕ್ಷಣವೇ ಕಚೇರಿಯಿಂದ ನಿರ್ಗಮಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಈಗಾಗಲೇ ಬೀದಿಬದಿಯ ವ್ಯಾಪಾರಗಳನ್ನು ಹಾಗೂ ಕೋಳಿ ಅಂಗಡಿಗಳನ್ನು ಕಟ್ಟುನಿಟ್ಟಾಗಿ ಸ್ಥಗಿತಗೊಳಿಸಲಾಗಿದೆ. ಮಾಂಸಾಹಾರಿ ಹೋಟೆಲ್‍ಗಳನ್ನು ಮುಚ್ಚಿಸುವ ಬಗೆಗೂ ಚಿಂತನೆ ನಡೆದಿದೆ ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.
ಆಯುಕ್ತರ ಕೊಠಡಿ ಮುಂದೆ ಕೈಕುಲುಕದಂತೆ ಸೂಚನಾಪತ್ರ
ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಆಯುಕ್ತ ಟಿ.ಭೂಬಾಲನ್ ಅವರ ಕೊಠಡಿಯ ಮುಂದೆ ಗೋಡೆಗೆ ಅಂಟಿಸಿರುವ ಸೂಚನಾ ಪತ್ರ ಎಲ್ಲರ ಗಮನ ಸೆಳೆಯುತ್ತಿದೆ. “ಕೋವಿಡ್-19 (ಕೊರೋನಾ ವೈರಾಣು-2019) ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಹಸ್ತಲಾಘವ ಮಾಡದಂತೆ ಕೋರಿದೆ” ಎಂದು ಈ ಸೂಚನಾ ಪತ್ರದಲ್ಲಿ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಅನೇಕ ಸಿಬ್ಬಂದಿ ಮಾಸ್ಕ್
ಮಹಾನಗರ ಪಾಲಿಕೆ ಕಚೇರಿಯಲ್ಲಿ ಈಗಾಗಲೇ ಹಲವು ಅಧಿಕಾರಿ-ನೌಕರರು ಮುನ್ನೆಚ್ಚರಿಕೆ ದೃಷ್ಟಿಯಿಂದ ಕಳೆದ ನಾಲ್ಕೈದು ದಿನಗಳಿಂದಲೇ ಮಾಸ್ಕ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಅಧಿಕಾರಿ-ಸಿಬ್ಬಂದಿಯವರು ಕಚೇರಿಯಲ್ಲಿ ಪರಿಚಿತರು ಎದುರಿಗೆ ಸಿಕ್ಕರೆ ಈ ಮೊದಲಿನಂತೆ ಕೈಕುಲುಕುತ್ತಿಲ್ಲ; ಬದಲಿಗೆ ಕೈಮುಗಿಯುತ್ತಿರುವುದು ಪಾಲಿಕೆ ಕಚೇರಿಯಲ್ಲಿನ ಹೊಸ ಬೆಳವಣಿಗೆಯಾಗಿದೆ.
ಪಾಲಿಕೆ ಕಚೇರಿಯಲ್ಲಿ ಜನದಟ್ಟಣಿಯೂ ಕ್ಷೀಣಿಸುತ್ತಿದೆ. ಈ ಮೊದಲು ಗಿಜಿಗಿಜಿ ಅನಿಸುತ್ತಿದ್ದ ಪಾಲಿಕೆ ಕಚೇರಿಯಲ್ಲಿ ಇದೀಗ ಕೊರೋನಾ ಪರಿಣಾಮದಿಂದ ಜನದಟ್ಟಣಿ ಅತ್ಯಂತ ಕಡಿಮೆಯಾಗುತ್ತಿದೆ. ಬರುತ್ತಿರುವ ಅನೇಕ ಸಾರ್ವಜನಿಕರೂ ಮಾಸ್ಕ್ ಧರಿಸಿಕೊಂಡಿರುತ್ತಾರೆ.
ಈ ಮೊದಲಿನಂತೆ ಪಾಲಿಕೆ ಸದಸ್ಯರ ಹಾಜರಿಯೂ ಪಾಲಿಕೆ ಕಚೇರಿಯಲ್ಲಿ ಅಷ್ಟು ಹೆಚ್ಚಾಗಿ ಕಾಣುತ್ತಿಲ್ಲ. ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮೇಯರ್ ಫರೀದಾಬೇಗಂ ಅವರು ಕರೆದಿದ್ದ ತುರ್ತುಸಭೆಗೂ ಕೆಲ ಸದಸ್ಯರು ಗೈರಾಗಿದ್ದರು.
‘ಜನತಾ ಕಫ್ರ್ಯೂ’ ಬಗ್ಗೆ ಕ್ರಮ
ಇವೆಲ್ಲ ಬೆಳವಣಿಗೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಭಾನುವಾರ (ಮಾರ್ಚ್ 22) “ಜನತಾ ಕಫ್ರ್ಯೂ” ಆಚರಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದು, ಈ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗೆಗೂ ಪಾಲಿಕೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ