ಮನೆಯಿಂದಲೇ ಲಿಂಗ ತಾರತಮ್ಯದ ವಿರುದ್ಧ ಪ್ರತಿಭಟಿಸಿ

ದಾವಣಗೆರೆ :

        ಲಿಂಗತಾರತಮ್ಯದ ವಿರುದ್ಧ ಮನೆಯಿಂದಲೇ ಪ್ರತಿಭಟಿಸಿದಾಗ ಮಾತ್ರ ಅಸಮಾನತೆ ಎಂಬ ಪಿಡುಗು ತೊಲಗಲು ಸಾಧ್ಯ ಎಂದು ಸಿರಿಗೆರೆ ಎಂ.ಬಿ.ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ .ಟಿ.ನೀಲಾಂಬಿಕೆ ಅಭಿಪ್ರಾಯಪಟ್ಟರು.

       ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ‘ಸ್ತ್ರೀ ಅಸ್ಮಿತೆ ಮತ್ತು ವಚನಕ್ರಾಂತಿ’ ಕುರಿತು ಏರ್ಪಡಿಸಿದ್ದ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ನಮ್ಮ, ನಮ್ಮ ಮನೆಗಳಲ್ಲಿಯೇ ಗಂಡು-ಹೆಣ್ಣು ನಡುವಿನ ತಾರತಮ್ಯ ನಡೆಯುತ್ತಿರುತ್ತದೆ. ಈ ತಾರತಮ್ಯವನ್ನು ಮನೆಯಲ್ಲಿಯೇ ಪ್ರತಿಭಟಿಸದಿದ್ದ, ಈ ಹೊತ್ತಿನಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಲಿಂಗ ತಾರತಮ್ಯ ನಿರ್ಮೂಲನೆ ಮಾಡುತ್ತೇವೆ ಎನ್ನುತ್ತೇವೆ. ಇದು ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ ಅವರು, ಗಂಡು-ಹೆಣ್ಣು ನಡುವಿನ ತಾರತಮ್ಯ ನಿವಾರಣೆಗೆ ಮನೆಯಿಂದಲೇ ಪ್ರತಿಭಟನೆ ನಡೆಸಿದಾಗ ಮಾತ್ರ ಅಸಮಾನತೆ ಎನ್ನುವ ಪಿಡುಗು ದೂರವಾಗಲಿದೆ ಎಂದರು.

       ಜಾತಿ ಹಾಗೂ ಸೂತಕಗಳೆಂಬ ಪೆಡಂಭೂತಗಳು ಮಹಿಳೆಯರನ್ನು ಬೆಂಬಿಡದೇ ಕಾಡುತ್ತಿವೆ. ಜನನ ಹಾಗೂ ಮರಣ ದೈವದತ್ತವಾಗಿ ಬರಲಿದ್ದು, ಅದಕ್ಕೆ ಯಾವುದೇ ಸೂತಕ ಅಂಟಿಸಬೇಕಿಲ್ಲ. 12ನೇ ಶತಮಾನದಲ್ಲಿಯೇ ಬಸವಾದಿ ಶಿವಶರಣರು ಗಂಡು-ಹೆಣ್ಣು ತಾರತಮ್ಯ ನಿವಾರಣೆಗೆ ಶ್ರಮಿಸಿದ್ದರು. ಅಂದಿನ ಕಾಲದಲ್ಲಿಯೇ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಮಹಾನ್ ಶರಣರು ಗಂಡು, ಹೆಣ್ಣು ಇಬ್ಬರು ಒಂದೇ ಎನ್ನುವ ಅಭಿಪ್ರಾಯವನ್ನು ವಚನಗಳ ಮೂಲಕ ಜಗತ್ತಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಇದನ್ನು ಮನುಷ್ಯರು ಅರ್ಥ ಮಾಡಿಕೊಂಡು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

      ಬೇಡದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಅವುಗಳನ್ನು ಬದಿಗೊತ್ತಿದರೆ ಮಾತ್ರ ಗಂಡು ಮತ್ತು ಹೆಣ್ಣು ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿ, ಪ್ರಸ್ತುತ ಪತಿ-ಪತ್ನಿ ಇಬ್ಬರು ಸಣ್ಣ-ಸಣ್ಣ ವಿಚಾರಗಳಿಗೂ ಜಗಳ ಆಡುವ ಕಲುಷಿತ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ. ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಬಹಳಷ್ಟು ಗಂಡ-ಹೆಂಡ್ತಿ ವಿವಾಹ ವಿಚ್ಛೇದನಕ್ಕೆ ಹೋಗುವ ಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಗಂಡು-ಹೆಣ್ಣು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕಾದರೆ, ಯಾವ ಗ್ರಂಥಗಳನ್ನು ಓದಬೇಕಾಗಿಲ್ಲ. ಇಬ್ಬರಲ್ಲಿಯೂ ಸಹನೆ, ಹೊಂದಾಣಿಕೆಯ ಮನೋಭಾವ ಇರಬೇಕಷ್ಟೇ. ಪುರುಷ ಮತ್ತು ಮಹಿಳೆ ನಡುವೆ ಸಾಮರಸ್ಯ ಜೀವನ ಕಂಡುಕೊಳ್ಳಬೇಕಾದರೆ ಒಬ್ಬರನ್ನು ಒಬ್ಬರು ಅರಿತುಕೊಂಡು ಜೋಡಿ ಎತ್ತಿನಂತೆ ಸಂಸಾರದ ನೋಗವನ್ನು ಹೊತ್ತು ಮುನ್ನಡೆಯಬೇಕು. ಆಗ ಸುಖ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

      ಬಸವಾದಿ ಶರಣರು ವಚನಗಳ ಮೂಲಕ ನೀಡಿರುವ ವಿಚಾರಧಾರೆ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಿದರೆ, ದಾಂಪತ್ಯ ಜೀವನ ಅನ್ಯೋನತೆಯಿಂದ ಕೂಡಿರುತ್ತದೆ ಎಂದರು.‘ಲಿಂಗ ಸಮಾನತೆ ಮತ್ತು ಸೂತಕಗಳನ್ನು ಸುಳ್ಳು ಮಾಡಿದ ವಚನಕ್ರಾಂತಿ’ ಕುರಿತು ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತ ಎಚ್.ದೊಡ್ಡಗೌಡರ್, ‘ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ಶರಣಕ್ರಾಂತಿ’ ಕುರಿತು ಅರುಣಕುಮಾರಿ ಬಿರಾದರ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಾತ ರವೀಂದ್ರ, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ಸುಧಾ ದಿಬ್ದಳ್ಳಿ, ಸಾಹಿತಿ ಎಸ್.ಟಿ.ಶಾಂತಗಂಗಾಧರ್, ಕಾವ್ಯಶ್ರೀಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap