ಸರ್ವಾಧಿಕಾರಿ ನೀತಿ ವಿರುದ್ದ ಹೋರಾಟಕ್ಕೆ ಸಜ್ಜಾಗಿ

ಚಿತ್ರದುರ್ಗ:

     ಸರ್ವ ಧರ್ಮಿಯರ ದೇಶ ಭಾರತದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತರಲು ಹೊರಟಿರುವ ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಹೆಚ್.ಆಂಜನೇಯ ಕರೆ ನೀಡಿದರು.

    ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಅಲ್ಪಸಂಖ್ಯಾತರು ದಲಿತರು, ವಿವಿಧ ಸಂಘ ಸಂಸ್ಥೆಗಳವರು ಮಂಗಳವಾರ ಜಿಲ್ಲಾಧಿಕಾರಿ ವೃತ್ತದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಆರುವರೆ ವರ್ಷಗಳಲ್ಲಿ ದೇಶದ ಜನರ ಹಿತಕ್ಕಾಗಿ ಯಾವ ಒಳ್ಳೆಯ ಯೋಜನೆಯನ್ನು ಜಾರಿಗೆ ತರಲಿಲ್ಲ. ಇಷ್ಟು ಸಾಲದೆಂಬಂತೆ ಈಗ ಪೌರತ್ವ ಕಾಯಿದೆ ತಿದ್ದುಪಡಿ ಮೂಲಕ ದೇಶದ ಧರ್ಮ-ಜಾತಿಯ ವಿರುದ್ದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ದ ಪ್ರತಿಯೊಬ್ಬರು ಜಾಗೃತರಾಗಿ ಶಾಂತಿಯುತ ಹೋರಾಟ ಮಾಡಬೇಕಿದೆ ಎಂದರು.

    ರಾಷ್ಟ್ರಪಿತ ಮಹಾತ್ಮಗಾಂಧಿ ಸೇರಿದಂತೆ ಅನೇಕ ಮಹನೀಯರು ದೇಶದ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿ ಪ್ರಾಣ ತೆತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ನಂಬಿಸಿದ ಮೋದಿ ಇದುವರೆವಿಗೂ ಒಂದು ಕೋಟಿ ಯುವಕರಿಗೂ ಉದ್ಯೋಗ ನೀಡಿಲ್ಲ. ದೇಶದ ಜನರನ್ನು ಶೋಷಣೆ ಮಾಡುವುದೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

    ಕೇಂದ್ರ ಬಿ.ಜೆ.ಪಿ.ಸರ್ಕಾರ ಪೌರತ್ವ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕು. ಯಾವುದೇ ಧರ್ಮದ ಸ್ವಾತಂತ್ರಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಕಾಯಿದೆಯನ್ನು ಹಿಂದಕ್ಕೆ ಪಡೆಯುವತನ ಹೋರಾಟ ಮಾಡೋಣ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಮೋದಿ ವಿರುದ್ದ ಹೋರಾಟಕ್ಕೆ ನಿಮ್ಮ ಜೊತೆ ನಾವಿದ್ದೇವೆಂದು ಎಂದು ಮುಸ್ಲಿಂ ಜನಾಂಗಕ್ಕೆ ಧೈರ್ಯ ತುಂಬಿದರು.
ಎಲ್ಲಿಯೂ ಯಾರು ಹಿಂಸೆಗೆ ಇಳಿಯಬೇಡಿ. ಪ್ರಚೋಧನಕಾರಿ ಮಾತು ಬೇಡ. ಮುಸ್ಲಿಂರು ಹಿಂದುಗಳು ಒಂದೇ ತಾಯಿಯ ಮಕ್ಕಳಂತೆ ಭಾರತದಲ್ಲಿ ಬದುಕುತ್ತಿದ್ದೇವೆ. ಜನವಿರೋಧಿ ಶಾಸನಕ್ಕೆ ಉಗ್ರವಾದ ಪ್ರತಿಭಟನೆ ಇರಬೇಕೆಂದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಐದು ವರ್ಷಗಳ ಕಾಲ ಸುಳ್ಳು ಹೇಳುತ್ತ ಸುಳ್ಳುಗಳ ಸರದಾರ ಎಂದೆ ಖ್ಯಾತಿ ಪಡೆದಿರುವ ದೇಶದ ಪ್ರಧಾನಿ ನರೇಂದ್ರಮೋದಿ ಮೋಡಿ ಮಾತಿಗೆ ಯುವಕರು ಮೋಸ ಹೋಗಿದ್ದಾರೆ. ದೇಶದ ಅಭಿವೃದ್ದಿ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಮೋದಿ ಒಂದು ದಿನವೂ ಮಾತನಾಡಲಿಲ್ಲ. ಜಾತಿ-ಧರ್ಮಗಳನ್ನು ಕೆಣಕಿ ತಮಾಷೆ ನೋಡುವ ಜಾಯಮಾನದ ಮೋದಿ ಈಗ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲು ಹೊರಟಿರುವುದರ ವಿರುದ್ದ ಎಲ್ಲಾ ಜಾತಿಯವರು ಹೋರಾಟ ಮಾಡಬೇಕಿದೆ ಎಂದು ಹೇಳಿದರು.

   ಮೋದಿರವರ ಸುಳ್ಳಿನ ಭತ್ತಳಿಕೆ ಕಾಲಿಯಾಗಿದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮೋದಿಗೆ ಸೋಲಾಗಿದೆ. ಪೌರತ್ವ ಕಾಯಿದೆ ತಿದ್ದುಪಡಿ ಹಿಂದಕ್ಕೆ ಪಡೆಯುವತನಕ ಹೋರಾಟವಿರಬೇಕು ಎಂದು ಪ್ರತಿಭಟನಾಕಾರರನ್ನು ಎಚ್ಚರಿಸಿದರು.ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾಡನಾಡುತ್ತ ಬುದ್ದ, ಬಸವ, ಗಾಂಧಿ, ಏಸು, ಅಂಬೇಡ್ಕರ್, ಪೈಗಂಬರ್ ಇವರುಗಳೆಲ್ಲಾ ಶಾಂತಿ ಸಮಾನತೆ ಬಯಸಿದ್ದರು.

    ಸಂವಿಧಾನದ ಆಶಯಗಳನ್ನು ಗೌರವಿಸದ ಪ್ರಧಾನಿ ಮೋದಿ ಪೌರತ್ವ ಕಾಯಿದೆ ತಿದ್ದುಪಡಿ ತರಲು ಹೊರಟಿರುವುದರ ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಸ್ವಾತಂತ್ರ ಸಂಗ್ರಾಮ ರೀತಿಯಲ್ಲಿ ಚಳುವಳಿಯಾಗಬೇಕು ಎಂದು ಪ್ರತಿಭಟನಾಕಾರರನ್ನು ಜಾಗೃತಗೊಳಿಸಿದರು.

    ಸಂವಿಧಾನ ತಿದ್ದುಪಡಿಗಾಗಿ ನಮ್ಮ ಪಕ್ಷ ಅಧಿಕಾರಕ್ಕಾಗಿ ಬಂದಿರುವುದು ಎಂದು ಸಾಬೀತುಪಡಿಸಲು ಹೊರಟಿರುವ ಪ್ರಧಾನಿ ಮೋದಿ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಹಳ್ಳಿಹಳ್ಳಿಗಳಲ್ಲಿ ನಿರಂತರ ಹೋರಾಟ ನಡೆಯಬೇಕು ಎಂದರು.ದಾವಣಗೆರೆ ಎಂ.ಎಲ್.ಸಿ.ಅಬ್ದುಲ್ ಜಬ್ಬಾರ್ ಮಾತನಾಡಿ ಪ್ರಧಾನಿ ಮೋದಿ ಮತ್ತು ಅಮಿತ್‍ಷಾ ಇವರುಗಳು ಸೇರಿಕೊಂಡು ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲು ಹೊರಟಿರುವುದರ ವಿರುದ್ದ ಮೊದಲು ದೇಶದ ನಾಗರೀಕರು ಎಚ್ಚೆತ್ತುಕೊಂಡು ಉಗ್ರವಾದ ಹೋರಾಟ ಮಾಡಬೇಕಿದೆ.

   ಹಿಂದು-ಮುಸ್ಲಿಂರು ಸಹೋದರರಂತೆ ಇರುವುದು ಕೋಮುವಾದಿ ಬಿ.ಜೆ.ಪಿ.ಗೆ ಇಷ್ಟವಿಲ್ಲ. ಹಾಗಾಗಿ ದಿನಕ್ಕೊಂದು ಕಾನೂನು ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರಲು ಹೊರಟಿದೆ. ಇದರ ವಿರುದ್ದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಒಂದಾಗಬೇಕೆಂದರು.

   ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ.ಮಹೇಶ್ ಮಾತನಾಡುತ್ತ ಈ ದೇಶ ನಮ್ಮದು. ದಲಿತರು, ಶೋಷಿತರು, ಅಲ್ಪಸಂಖ್ಯಾತರು, ದಮನಿತರಿಗೆ ಸಮಾನವಾದ ಅವಕಾಶವನ್ನು ಸಂವಿಧಾನದಲ್ಲಿ ಅಂಬೇಡ್ಕರ್ ನೀಡಿದ್ದಾರೆ. ಮಾತು ಮಾತಿಗೂ ಸುಳ್ಳು ಹೇಳುವವರು ದೇಶ ಆಳಲು ಯೋಗ್ಯರಲ್ಲ. ಮೋದಿಯದು ಹಿಟ್ಲರ್ ಆಡಳಿತ. ಒಂದು ಸುಳ್ಳನ್ನು ನೂರು ಬಾರಿ ಹೇಳುವ ಮೂಲಕ ಸತ್ಯವನ್ನಾಗಿಸುತ್ತಿದ್ದಾರೆ. ಸುಳ್ಳಿನ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ.

    ಸಂವಿಧಾನವಿರುವತನಕ ಮನುವಾದಿಗಳು ನಮ್ಮನ್ನು ಏನು ಮಾಡಲು ಆಗವುದಿಲ್ಲ ಎಂದು ಎಚ್ಚರಿಸಿದರು.ಸಂವಿಧಾನ ನಿರ್ನಾಮ ಮಾಡಲು ಹೊರಟಿರುವ ಮನುವಾದಿಗಳಿಂದ ಶ್ರೇಷ್ಟವಾದ ಸಂವಿಧಾನವನ್ನು ಉಳಿಸಬೇಕಾಗಿದೆ. ಸಂವಿಧಾನದ ಆಶಯಕ್ಕೆ ವಿರೋಧವಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲು ಹೊರಟಿರುವ ಮನುವಾದಿಗಳಿಗೆ ಈ ದೇಶದ ಮೂಲ ನಿವಾಸಿಗಳು ಯಾರು ಎಂಬ ಸತ್ಯವನ್ನು ತಿಳಿಸಬೇಕಾಗಿರುವುದರಿಂದ ಹೋರಾಟ ಉಗ್ರವಾಗಬೇಕೆಂದರು.

    ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ ಭಾರತದ ದಿಕ್ಕನ್ನು ಬದಲಿಸಲು ಹೊರಟಿರುವ ಮೋದಿ ಹಾಗೂ ಅಮಿತ್‍ಷಾರಿಂದ ದೇಶದಲ್ಲಿ ಕೈಗಾರಿಕೆಗಳು ಮುಚ್ಚುತ್ತಿದ್ದು, ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಪಾಕಿಸ್ತಾನ, ಬಾಂಗ್ಲ, ಆಫ್ಘಾನಿಸ್ತಾನದಿಂದ ವಲಸೆ ಬಂದವರಿಗೆ ಪೌರತ್ವ ನೀಡಲಾಗುತ್ತಿದೆ. ಇದರಿಂದ ದೇಶದ ಮುಸಲ್ಮಾನರು ಭಯಪಡುವುದು ಬೇಡ ಎಂದು ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

   ನಮ್ಮದು ಪ್ರಜಾಪ್ರಭುತ್ವ ದೇಶ. ಎಲ್ಲಾ ಜಾತಿ, ಧರ್ಮಿಯರು ಒಂದಾಗಿ ಬದುಕುತ್ತಿದ್ದೇವೆ. ಮೊದಲು ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿ. ಹುಟ್ಟಿದ ದಾಖಲೆಗಳನ್ನು ಕೇಳುವುದು ಕಾನೂನು ಬಾಹಿರ. ಸ್ವಾತಂತ್ರ ಚಳುವಳಿ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ದ ಹೋರಾಟವಾಗಬೇಕು. ಕೋಮುವಾದಿ ಬಿ.ಜೆ.ಪಿ.ತನ್ನ ಎಲ್ಲಾ ಅನಾಚಾರಗಳನ್ನು ಮುಚ್ಚಿಕೊಳ್ಳಲು ಇಂತಹ ಕುತಂತ್ರಗಳನ್ನು ನಡೆಸುತ್ತಿದೆ ಎನ್ನುವುದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು.

   ದೇಶದ ಜನರನ್ನು ಕತ್ತಲಲ್ಲಿಡುವ ಕೆಲಸ ಮಾಡುತ್ತಿರುವ ಬಿ.ಜೆ.ಪಿ.ಯನ್ನು ದೇಶದಿಂದ ಕಿತ್ತೊಗೆಯಬೇಕು. ಇಲ್ಲದಿದ್ದರೆ ಬದುಕುವುದು ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರನ್ನು ಜಾಗೃತಗೊಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಅಹಮದ್ ಮಹಮದ್ ಪಾಷ, ಮಾಜಿ ಸದಸ್ಯ ಇಕ್ಬಾಲ್ ಹುಸೇನ್ ,ವಕ್ಚ್ ಬೋರ್ಡ್ ನಿರ್ದೇಶಕ ಡಾ.ಅನ್ವರ್ ಭಾಷ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಮಾಜಿ ಶಾಸಕ ಎ.ವಿ.ಉಮಾಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಫಾದರ್ ಎಂ.ಎಸ್.ರಾಜು, ಎಸ್.ಎಂ.ಎಸ್.ಟಿ.ಫಯಾಜ್, ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ ಗ್ರಾಮಾಂತರ ಅಧ್ಯಕ್ಷ ಆರ್.ಪ್ರಕಾಶ್, ಮುದಸಿರ್ ನವಾಜ್, ಮೆಹಬೂಬ್ ಖಾತೂನ್, ನ್ಯಾಯವಾದಿ ಶಿವುಯಾದವ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap