ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ದೊರಕಿಸುವಲ್ಲಿ ಎಲ್ಲರೂ ಮುಂದಾಗಬೇಕು

ಶಿಗ್ಗಾವಿ ಃ

         ಜೀವನದಲ್ಲಿ ಶಿಕ್ಷಣ ಅತಿ ಅಮೂಲ್ಯವಾದುದು ದೇಶದಲ್ಲಿ ಮಹಿಳೆಯರು ಇಂದಿಗೂ ಶೇ.100 ರಷ್ಟು ಸಾಕ್ಷರರಾಗಿಲ್ಲ, ಶೇ.53.87 ರಷ್ಟು ಮಾತ್ರ ಸಾಕ್ಷರರಾಗಿದ್ದಾರೆ. ಹೆಣ್ಣು ಗಂಡು ಎಂಬ ಬೇದಭಾವ ಮಾಡದೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ದೊರಕಿಸುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯ ಕುಮಾರ ಕಣ್ಣೂರ ಸಲಹೆ ನೀಡಿದರು.

       ಪಟ್ಟಣದ ಬಸವೇಶ್ವರ ನಗರದ ಸ್ತ್ರೀ ಶಕ್ತಿ ಭವನದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಶಿಶು ಮತ್ತು ಮಹಿಳಾ ಅಭಿವೃದ್ದಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ, ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಮತ್ತು ಮಾನಸಿಕ ಆರೋಗ್ಯ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ಮೇಲೆ ಮಾನವ ಜನ್ಮ ಅತ್ಯಮೂಲ್ಯವಾದುದು ಎಲ್ಲರೂ ಸಕಾರಾತ್ಮಕ ಚಿಂತನೆಯೊಂದಿಗೆ ಸಹಬಾಳ್ವೆ ಮಾಡಬೇಕು, ಭ್ರೂಣ ಹತ್ಯೆ ಮಹಾಪಾಪ ಕಾನೂನು ಭಾಹಿರ, ಹೆಣ್ಣು ಗಂಡು ಎಂಬ ಬೇದ ಮಾಡದೆ ಎಲ್ಲರೂ ಸಮಾನತೆ ಭಾವ ಹೊಂದಬೇಕು. ಮಹಿಳೆಯರ, ಮಕ್ಕಳ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆ ರೂಪಿಸಿವೆ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಒಳ್ಳೆಯ ಶಿಕ್ಷಣ ಹೊಂದಬೇಕು ಎಂದರು.

       ಶಿಶು ಅಭಿವೃದ್ದಿ ಯೋಜನಾಧಿಕಾರಿ ಪಿ.ವೈ. ಗಾಜಿಯವರ ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ ಅದನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ಪುರಾಣ ಪುಣ್ಯಕಥೆಗಳು ಕೂಡಾ ಶಿಶುಹತ್ಯೆ, ಮಹಿಳಾ ಹತ್ಯೆ, ಗೋ ಹತ್ಯೆ ಮಹಾಪಾಪಗಳೆಂದು ಸಾರುತ್ತ ಬಂದರೂ ನಮ್ಮಲ್ಲಿ ಭ್ರೂಣ ಹತ್ಯೆ ನಿಂತಿಲ್ಲ ಸರ್ಕಾರ ಭ್ರೂಣ ಲಿಂಗ ಪತ್ತೆ ತಡೆಯಲು ಕಠಿಣ ಕಾನೂನು ರೂಪಿಸಿದ ನಂತರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಅಭಿವೃದ್ದಿ ದೃಷ್ಟಿಯಿಂದ ಹಲವಾರು ಯೋಜನೆ ರೂಪಿಸಿವೆ ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

       ಹಿರಿಯ ನ್ಯಾಯವಾದಿ ಎಪ್.ಎಸ್.ಕೋಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ|| ಮಹೇಶ ಜಗದವರ ಮಾನಸಿಕ ರೋಗದ ಲಕ್ಷಣಗಳು, ಕಾರಣಗಳು, ವೈದ್ಯಕೀಯ ಸೇವೆಗಳ ಕುರಿತು ಉಪನ್ಯಾಸ ನೀಡಿದರು, ಸಹಾಯಕ ಸಕಾರಿ ಅಭಿಯೋಜಕರಾದ ಜಿ.ಕೆ.ಕುಡಿಕೇರಿ, ಕಾನುನು ಸಲಹೆಗಾರರಾದ ಜಿ.ಎ.ಹಿರೇಮಠ ಮಾತನಾಡಿದರು.
ನ್ಯಾಯವಾದಿಗಳಾದ ಜಿ.ಎನ್.ಯಲಿಗಾರ, ಕೆ.ಎನ್.ಭಾರತಿ, ಲಕ್ಷ್ಮಿ ಕಡಕೋಳ, ಎಮ್.ಜಿ.ವಿಜಾಪೂರ, ಎಪ್.ಎಮ್.ಹಾದಿಮನಿ, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ನ್ಯಾಯಾಲಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link