ಬೆಂಗಳೂರು
ಆಸ್ಪತ್ರೆಗೆ ಬರುವ ರೋಗಿಗಳಿಗೆ ವಿಳಂಬ ಮಾಡದೇ ಕಿರುಕುಳ ನೀಡದೇ ಗುಣಮಟ್ಟದ ಚಿಕಿತ್ಸೆ ನೀಡಿ ನೆಮ್ಮದಿಯಿಂದ ಮನೆಗೆ ಹೋಗುವ ವಾತಾವರಣವನ್ನು ನಿರ್ಮಿಸಬೇಕು ಎಂದು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಸಿಬ್ಬಂದಿಗಳಿಗೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಒಳರೋಗಿ ಕಟ್ಟಡದ ಶಂಕು ಸ್ಥಾಪನೆ ಹಾಗೂ ವಿವಿಧ ನೂತನ ಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯಿಂದಲೇ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ನೆಮ್ಮದಿಯಿಂದ ಮನೆಗೆ ಹೋಗುವ ವಾತಾವರಣವನ್ನು ನಿರ್ಮಿಸುವ ಕೆಲಸ ಆರಂಭವಾಗಬೇಕು ಎಂದರು.
ವಿಕ್ಟೋರಿಯಾ ಆಸ್ಪತ್ರೆಗೆ ಬರುವ ನೂರಕ್ಕೆ ಐವತ್ತು ಮಂದಿ ರೋಗಿಗಳು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಂದ ಕಿರುಕುಳ ಅನುಭವಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಹಣ ಇಲ್ಲದೆ, ಯಾವುದೇ ಚಿಕಿತ್ಸೆ ಸಿಗುವುದಿಲ್ಲ ಎಂಬ ಮಾತುಗಳು ಇವೆ. ಇವೆಲ್ಲವೂ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಶೋಭೆ ತರುವುದಿಲ್ಲ ಎಂದು ಕಿವಿಮಾತು ಹೇಳಿದರು.
ವೈದ್ಯರು ಮತ್ತು ಸಿಬ್ಬಂದಿಗಳು, ಜನ ಮೆಚ್ಚುವಂತೆ ಉತ್ತಮ ವೈದ್ಯಸೇವೆ ನೀಡಬೇಕು.ಕೋಟ್ಯಾಂತರ ರೂ. ವೆಚ್ಚದಲ್ಲಿ ಕೇವಲ ಕಟ್ಟಡಗಳನ್ನು ನಿರ್ಮಿಸಿ, ರೋಗಿಗಳಿಗೆ ಗುಣಮಟ್ಟದ ಸೇವೆ ಸಿಗದಿದ್ದರೆ, ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು. ಇನ್ನು ಮುಂದೆ ಯಾವುದೇ ಆರೋಪಗಳಿಗೆ ಅವಕಾಶ ಮಾಡಿಕೊಡದಂತೆ, ಇಲ್ಲಿಗೆ ಬರುವ ಒಳರೋಗಿಗಳಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಮುಖ್ಯಮಂತ್ರಿಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುರೂಪಿಕಾ ಶಸ್ತ್ರಚಿಕಿತ್ಸಾ ಶಸ್ತ್ರ ವಿಭಾಗದಲ್ಲಿ ಸ್ಕಿನ್ ಬ್ಯಾಂಕ್, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ಫೋರ್ಟ್ಸ್ ಮೆಡಿಸನ್ ಶೀಘ್ರ ಆರಂಭಿಸಲಾಗುವುದು. ಗರ್ಭಿಣಿಯರಿಗೆ ಸಂಗೀತಾ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿನ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಲಾಸಿಕ್ ಉಪಕರಣ, ಲೋವಿಷನ್ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಹೆಚ್ಚಳ ಸಿಗುವಂತಾಗಬೇಕು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ವರ್ಷದೊಳಗೆ ಎನ್‌ಎಪಿಎಚ್ ಮತ್ತು ಎನ್‌ಎಬಿಎಂ ಮಾನ್ಯತೆ ಸಿಗುವಂತಾಗಲು ವೈದ್ಯರು ಶ್ರಮವಹಿಸಬೇಕು ಎಂದರು.
ಸಾಲ ಮನ್ನಾ, ಅತಿವೃಷ್ಟಿ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ವೈದ್ಯಕೀಯ ಕ್ಷೇತ್ರಕ್ಕೆ 2.5 ಸಾವಿರ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.ಸಮಾರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹೆಚ್.ಎಸ್. ಸತೀಶ್ ಅವರು ಸ್ವಾಗತಿಸಿದರು.ನಿರ್ದೇಶಕಿ ಡಾ. ಸಿ.ಆರ್. ಜಯಂತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಶಾಸಕರಾದ ಜಮೀರ್ ಅಹಮದ್ ಖಾನ್, ಉದಯ್ ಗರುಡಾಚಾರ್, ಮೇಯರ್ ಗೌತಮ್ ಕುಮಾರ್, ಉಪಮೇಯರ್ ರಾಮ್ ಮೋಹನ್ ರಾಜು, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಪಾಲಿಕೆ ಸದಸ್ಯೆ ಕೋಕಿಲಾ ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ