ರೈತರಿಗೆ ನಿಖರ ಮಾಹಿತಿ ಕೊಡಬೇಕು;ವಿನೋತ್ ಪ್ರಿಯಾ

ಚಿತ್ರದುರ್ಗ

    ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಕೃಷಿ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದು, ಕೃಷಿ ಇಲಾಖೆ, ವಿಮಾ ಕಂಪನಿ ಹಾಗೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನಿಖರ ಹಾಗೂ ಸಮರ್ಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.

     ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷ ಫಸಲ್ ಬಿಮಾ ಯೋಜನೆಯನ್ನು ಕೆಲ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಿದೆ. ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು, ಆದರೆ, ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆಯಡಿ ಭಾಗವಹಿಸಲು ಇಚ್ಛೆ ಇಲ್ಲದಿದ್ದಲ್ಲಿ, ಅಂತಹವರು ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೊಂದಣಿಯ ಅಂತಿಮ ದಿನಾಂಕಕ್ಕೆ 07 ದಿನ ಮುಂಚಿತವಾಗಿ, ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರ ನೀಡಿದಲ್ಲಿ, ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುವುದು ಎಂದರು

     ನಿಗದಿತ ಅವಧಿಯೊಳಗೆ ಪುನಃ ವಿಮಾ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ವಿಮಾ ಕಂತು ಪಾವತಿಸಿ ಯೋಜನೆಯಡಿ ಸೇರಿಕೊಳ್ಳಬಹುದು. ಬೆಳೆ ಸಾಲ ಪಡೆಯದ ರೈತರಿಗೆ ಬೆಳೆವಿಮೆ ಐಚ್ಛಿಕವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾಘಟಕವಾಗಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ರೈತರಿಗೆ ವಿಮಾ ಕಂಪನಿ ಸ್ಪಂದಿಸಬೇಕು

       ಬೆಳೆವಿಮೆ ಕಂತು ಪಾವತಿಸುವ ರೈತರಿಗೆ, ನಂತರದ ದಿನಗಳಲ್ಲಿ ವಿಮಾ ಮೊತ್ತ ಬರುವ ಅಥವಾ ಬಾರದಿರುವ ಬಗ್ಗೆ ವಿಮಾ ಕಂಪನಿಯವರು ಸರಿಯಾಗಿ ಮಾಹಿತಿ ನೀಡಬೇಕು. ಆದರೆ ವಿಮಾ ಕಂತು ಪಾವತಿ ಬಳಿಕ ನಿಷ್ಕ್ರಿಯರಾಗುವ ಕಂಪನಿಗಳು, ಕೃಷಿ ಇಲಾಖೆಗಾಗಲಿ, ಜಿಲ್ಲಾಡಳಿತಕ್ಕಾಗಲಿ, ರೈತರಿಗಾಗಲಿ ಮಾಹಿತಿ ನೀಡುವ ಅಥವಾ ಗೊಂದಲಗಳಿಗೆ ಉತ್ತರ ನೀಡುವ ಕೆಲಸ ಮಾಡುವುದಿಲ್ಲ. ಹೀಗಾದಲ್ಲಿ ರೈತರಿಗೆ ಬೆಳೆ ವಿಮೆ ಯೋಜನೆ ಬಗ್ಗೆ ವಿಶ್ವಾಸ ಮೂಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ವಿಮಾ ಯೋಜನೆಯ ನಿಯಮಗಳ ಬಗ್ಗೆ ರೈತರನ್ನು ಕತ್ತಲಲ್ಲಿ ಇಡುವುದು ಸರಿಯಲ್ಲ.

      ವಿಮಾ ಕಂತು ಕಟ್ಟಿ ಎಂದು ಪ್ರಚಾರ ನೀಡುತ್ತೀರಿ, ಆದರೆ ಬಳಿಕ ಅಧಿಕಾರಿಗಳ, ರೈತರ ಪ್ರಶ್ನೆಗಳಿಗೆ ಉತ್ತರಿಸದೆ ಜವಾಬ್ದಾರಿಯಿಂದ ಜಾರಿಕೊಳ್ಳುತ್ತೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಮಾ ಕಂಪನಿಯ ಪ್ರತಿನಿಧಿಗಳು ಬೆಳೆ ಕಟಾವು ಸಮೀಕ್ಷೆ ಸಂದರ್ಭದಲ್ಲಿ ಕ್ಷೇತ್ರಗಳಿಗೆ ಭೇಟಿ ನೀಡಿ ಪಾಲ್ಗೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಯ ಪ್ರತಿನಿಧಿಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡು, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

      ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸದಾಶಿವ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಮಾರೇಶ್ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರುಗಳು, ವಿಮಾ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap