ಆಸ್ಪತ್ರೆಗಳ ಸಮಸ್ಯೆ ಭೇಟಿ ನೀಡಿ ಸಮಗ್ರ ವರದಿ ನೀಡಿ : ಸಿಇಓ

ಬಳ್ಳಾರಿ

   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರೋಗ್ರಾಂ ಆಫೀಸರ್‍ಗಳು ಈಗಾಗಲೇ ನಿಯೋಜಿಸಲಾದ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳಿಗೆ, ಸಮುದಾಯ ಆಸ್ಪತ್ರೆಗಳಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಗ್ರ ವರದಿಯನ್ನು 15 ದಿನದೊಳಗೆ ಸಲ್ಲಿಸುವಂತೆ ಜಿಪಂ ಸಿಇಒ ಕೆ.ನಿತೀಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

     ಈಗಾಗಲೇ ಕಾರ್ಯಕ್ರಮ ಅಧಿಕಾರಿಗಳಿಗೆ ಒಂದೊಂದು ತಾಲೂಕುಗಳ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅವರು ಕಚೇರಿಯಲ್ಲಿ ಕುಳಿತುಕೊಳ್ಳದೇ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ತಾಲೂಕು ಆಸ್ಪತ್ರೆಗಳಿಗೆ, ಸಮುದಾಯ ಅಸ್ಪತ್ರೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ..?, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆಯೇ, ಔಷಧ ಲಭ್ಯವಿದೆಯೇ, ಆಸ್ಪತ್ರೆಗಳ ಸಮಸ್ಯೆಗಳೇನು ಮತ್ತು ಅಲ್ಲಿನ ಜನರ ಭಾವನೆಗಳೇನು ಎಂಬುದರ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಸಮಗ್ರ ವರದಿಯನ್ನು ನೀಡಬೇಕು.

     ಅದನ್ನು ಒಂದು ವಿಶೇಷ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳಿಗೆ ಹೊರರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಸೂಕ್ತ ಪ್ರಮಾಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಮತ್ತು ಹೊರಗಡೆ ಚೀಟಿ ಬರೆದುಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿಎಚ್‍ಒ ಡಾ.ಶಿವರಾಜ ಹೆಡೆ ಅವರು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ರೋಟಾ ವೈರಸ್ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಸೂಚಿಸಿದರು.

91 ಅಂಗನವಾಡಿ ಕೇಂದ್ರಗಳ ಸ್ಥಾಪನೆ:

    ಬಳ್ಳಾರಿ ಜಿಲ್ಲೆಯಲ್ಲಿ 91 ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಸರಕಾರ ಅನುಮತಿ ನೀಡಿದ್ದು, ಈಗಾಗಲೇ ಯಾವ್ಯಾವ ತಾಲೂಕುಗಳಿಗೆ ಎಷ್ಟು ಅಂಗನವಾಡಿ ಕೇಂದ್ರಗಳು ಹಂಚಿಕೆಯಾಗಿವೆ ಎಂದು ಮಾಹಿತಿ ನೀಡಲಾಗಿದೆ. ಕೂಡಲೇ ಮಂಜೂರಾಗಿರುವ ಕೇಂದ್ರಗಳಿಗೆ ಸ್ಥಳ ಒದಗಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಮತ್ತು ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಜಿಪಂ ಸಿಇಒ ಕೆ.ನಿತೀಶ್ ಅವರು ಸೂಚನೆ ನೀಡಿದರು.
ಮಾತೃಶ್ರೀ ಯೋಜನೆ ಮತ್ತು ಮಾತೃವಂದನಾ ಯೋಜನೆಯ ಪ್ರಗತಿಯಲ್ಲಿ ಅತ್ಯಂತ ಹಿಂದುಳಿದಿರುವ ತಾಲೂಕುಗಳು ಸುಧಾರಣೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿ ಎಂದರು.

ನರೇಗಾ ಅಡಿ ತೋಟಗಾರಿಕೆ ಸೌಲಭ್ಯ; ಜಾಗೃತಿ ಮೂಡಿಸಿ:

  ನರೇಗಾ ಯೋಜನೆ ಅಡಿ ತೋಟಗಾರಿಕೆ ಸೌಲಭ್ಯ ಪಡೆದುಕೊಳ್ಳಲು ಸಾಕಷ್ಟು ಪ್ರಮಾಣದ ಅನುದಾನ ಲಭ್ಯವಿದ್ದು, ಈ ಕುರಿತು ತಾಲೂಕು ಹಾಗೂ ಗ್ರಾಮಗಳ ಮಟ್ಟದಲ್ಲಿ ಜಾಗೃತಿ ಮೂಡಿಸಿ ರೈತರು ಸದುಪಯೋಗಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಪಂ ಸಿಇಒ ಕೆ.ನಿತೀಶ್ ಸೂಚನೆ ನೀಡಿದರು.

   ತೋಟಗಾರಿಕೆಯ ಸೌಲಭ್ಯಗಳನ್ನು ನರೇಗಾ ಅಡಿ ಕೈಗೆತ್ತಿಕೊಳ್ಳಬಹುದಾಗಿದೆ. ಯಾವ್ಯಾವ ಬೆಳೆಗಳಿಗೆ ಎಷ್ಟೆಷ್ಟು ಸೌಲಭ್ಯವಿದೆ ಎಂಬುದರ ಸಮಗ್ರ ವಿವರಗಳನ್ನು ಕರಪತ್ರಗಳ ಮೂಲಕ ಹಾಗೂ ಜಾಗೃತಿ ಫಲಕಗಳ ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕುಮಟ್ಟದಲ್ಲಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ಮಾಡಿ ಎಂದು ಸಲಹೆ ನೀಡಿದ ಅವರು ಈ ನಿಟ್ಟಿನಲ್ಲಿ ತಾಪಂ ಇಒಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪಿಡಿಒಗಳು ಮುತುವರ್ಜಿ ವಹಿಸಿ ಕೆಲಸ ಮಾಡಿ ಎಂದರು.

   ಗ್ರಾಮವಿಕಾಸ ಮತ್ತು ಮುಖ್ಯಮಂತ್ರಿಗಳ ಗ್ರಾಮವಿಕಾಸ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದ ಜಿಪಂ ಸಿಇಒ ಕೆ.ನಿತೀಶ್ ಅವರು ಇದಕ್ಕೆಂದೆ ವಿಶೇಷ ಸಭೆ ಕರೆದು ಪ್ರಗತಿ ಪರಿಶೀಲಿಸಲಾಗುವುದು ಎಂದರು.

   ಸ್ವಚ್ಛ ಭಾರತ ಮಿಶನ್ ಯೋಜನೆ ಅಡಿ ಶೌಚಾಲಯಗಳ ನಿರ್ಮಾಣದಲ್ಲಿ ಕೂಡ್ಲಿಗಿ, ಸಂಡೂರು ಮತ್ತು ಹೊಸಪೇಟೆ ತಾಲೂಕುಗಳು ಪ್ರಗತಿ ಸಾಧಾರಣವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ ಅವರು ಇದಕ್ಕಾಗಿಯೇ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಲಾಗುವುದು ಮತ್ತು ಗ್ರಾಪಂ ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದರು.ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಸೇರಿದಂತೆ ಜಿಪಂನ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು

 

Recent Articles

spot_img

Related Stories

Share via
Copy link