ಬಳ್ಳಾರಿ
ಅಗ್ನಿ ಶಮನಕ್ಕಿಂತ ಅಗ್ನಿ ನಿವಾರಣೆ ಉತ್ತಮ. ಈ ನಿಟ್ಟಿನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರವಿಪ್ರಸಾದ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ವತಿಯಿಂದ ನಗರದ ಅಗ್ನಿಶಾಮಕದಳದ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವ ಅಮೂಲ್ಯವಾಗಿದ್ದು ಬೆಂಕಿಯಿಂದ ಇದನ್ನು ರಕ್ಷಿಸಿ ಮತ್ತು ಕಾಪಾಡಿಕೊಳ್ಳಿ, ಬೆಂಕಿ ಅಪಘಾತವಾದಾಗ ಯಾವುದೇ ರೀತಿಯ ವಿಳಂಬ ಮಾಡದೇ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿ ಮತ್ತು ತುರ್ತು ಸಂದರ್ಭದಲ್ಲಿ ತಾಲೂಕುಮಟ್ಟದ ವಿವಿಧ ಅಗ್ನಿಶಾಮಕ ಠಾಣೆಗಳ ತುರ್ತುಕರೆಗಳಿಗೆ ಕರೆ ಮಾಡಿ ಎಂದರು.
ಮನೆಗಳಿಗೆ,ಹುಲ್ಲಿನ ಬಣವೆಗಳಿಗೆ, ಮರದ ರಾಶಿಗೆ ಬೆಂಕಿ ಬಿದ್ದಾಗ ಸಾಕಷ್ಟು ಮರಳು ಮತ್ತು ನೀರನ್ನು ಸುರಿಯಿರಿ,ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರು ಸುರಿಯಬೇಡಿ ಎಂದು ತಿಳಿಸಿದರು.
ಎಲ್‍ಪಿಜಿ ಅನಿಲದ ಬಳಕೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಅನಿಲದ ಸೋರುವಿಕೆ ಕಂಡುಬಂದರೇ,ಅನಿಲದ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡರೆ, ಅನಿಲದ ಸಿಲೆಂಡರಿನ ನಿರ್ವಹಣೆ ಹಾಗೂ ಮುನ್ನಚ್ಚೆರಿಕೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಕಾರ್ಯಚಟುವಟಿಕೆಯಲ್ಲಿ ಹುತಾತ್ಮರಾದ ಸ್ಮಾರಕಗಳಿಗೆ ಇದೇ ಸಂದರ್ಭದಲ್ಲಿ ನಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ, ಅಗ್ನಿಶಾಮಕ ಠಾಣೆಯ ಅಧಿಕಾರಿ ಬಸವರಾಜ, ನಿವೃತ್ತ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹೋಬಣ್ಣ ಸೇರಿದಂತೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಇದ್ದರು.
ಅಗ್ನಿ ಅವಘಡಗಳ ಕುರಿತು ಜಾಗೃತಿ: ಅಗ್ನಿಶಾಮಕ ಸೇವಾ ಸಪ್ತಾಹದ ನಿಮಿತ್ತ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವತಿಯಿಂದ ನಗರದ ವಿಮ್ಸ್, ಬಂಡಿಹಟ್ಟಿ, ಆಲದಹಳ್ಳಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಅಗ್ನಿ ಅವಘಡಗಳಾದಗಾ ಹೇಗೆ ಮುನ್ನಚ್ಚೆರಿಕೆ ವಹಿಸಬೇಕು ಎಂಬುದರ ಕುರಿತು ಕರಪತ್ರಗಳನ್ನು ವಿತರಿಸುವುದರ ಮೂಲಕ ಜಾಗೃತಿ ಮೂಡಿಸಿದರು.
ಏ.20ರವರೆಗೆ ಜಿಲ್ಲೆಯಾದ್ಯಂತ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಅಗ್ನಿ ಅವಘಡಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಬಳ್ಳಾರಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಬಸವರಾಜ ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
