ಹಾವೇರಿ
ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿ, ನಿಗಧಿತ ಕಾಲಾವಧಿಯಲ್ಲಿ ಅನುದಾನ ಬಳಕೆ, ಕಾರ್ಯಕ್ರಮಗಳ ಅನುಷ್ಠಾನವಾಗಲೇಬೇಕು. ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗಬಾರದು. ಅನುದಾನ ಹಿಂತಿರುಗಿಸಿದರೆ ಆಯಾ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರ ರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸವನಗೌಡ ದೇಸಾಯಿ ಅವರು ಖಡಕ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಲಾಖೆಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ತೊಡಕುಗಳಿದ್ದರೆ, ಇಲಾಖೆಯಲ್ಲಿ ಸಮಸ್ಯೆಗಳಿದ್ದರೆ ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಳು ಅಥವಾ ನನ್ನ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಮಾಹೆಯಲ್ಲಿದ್ದೇವೆ. ಈ ವರ್ಷ ಇಲಾಖಾವಾರು ನಿಗಧಿಯಾದ ಕಾರ್ಯಕ್ರಮಗಳು ಹಾಗೂ ಅನುದಾನ ಈ ಆರ್ಥಿಕ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲೇಬೇಕು. ಬಿಡುಗಡೆಯಾದ ಅನುದಾನವನ್ನು ನಿಗಧಿತ ಅವಧಿಯಲ್ಲಿ ಬಳಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾದರೆ ಆಯಾ ಇಲಾಖಾ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ. ಈ ವರ್ಷ ನಿಗಧಿಯಾದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆಯಾದರೂ ಬಳಸಿಕೊಳ್ಳದೆ ನಿರ್ಲಕ್ಷ್ಯವಹಿಸಿ ಅನುದಾನ ಲ್ಯಾಪ್ಸ್ ಆಗಿ ಯೋಜನೆಗಳು ಅರ್ಧಕ್ಕೆ ನಿಂತರೆ ಈ ಯೋಜನೆಗಳಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ಬೇಡಿಕೆಯ ಪ್ರಸ್ತಾವನೆಗಳು ಬಂದರೂ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಇಲಾಖೆಯಡಿ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳಿಗೆ ವೇಗ ನೀಡಿ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ. ಯಾವುದೇ ಕಾಮಗಾರಿಗಳು ಕೈಗೊಂಡಾಗ ಈ ಕಾಮಗಾರಿಗಳು ಜಿಲ್ಲಾ ಪಂಚಾಯತ್ ವತಿಯಿಂದ ಅನುಷ್ಠಾನಗೊಂಡಿವೆ ಎಂದು ಗುರುತಿಸುವಂತಾಗಬೇಕು. ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ತಂದುಕೊಂಡು ಚುರುಕಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ರಮೇಶ ದೇಸಾಯಿ ಅವರು ಸಲಹೆ ನೀಡಿದರು.
ಗಡುವು:
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರ 40 ಕೋಟಿ ರೂ.ಗಳನ್ನು ಜಿಲ್ಲೆಗೆ ಬಿಡುಗಡೆಮಾಡಿದೆ. ಈ ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಹೆಚ್ಚುವರಿ ಅನುದಾನ ಕೇಳಲು ಸಾಧ್ಯ. ನಿಗಧಿತ ಅವಧಿಯಲ್ಲಿ ವೆಚ್ಚದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಿ ವರದಿ ನೀಡುವಂತೆ ರಮೇಶ ದೇಸಾಯಿ ಅವರು ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ದುರಸ್ತಿ:
ಲೋಕೋಪಯೋಗಿ ಇಲಾಖೆಯ ವಾರ್ಷಿಕ ಕಾಮಗಾರಿಗಳ ಅನುಷ್ಠಾನ ಹಾಗೂ ವೆಚ್ಚದ ವಿವರವನ್ನು ಪರಿಶೀಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸವನಗೌಡ ದೇಸಾಯಿ ಅವರು, ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ನೌಕರರ ವಸತಿ ಗೃಹಗಳನ್ನು ನಿರ್ವಹಣೆಮಾಡದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಿಡುಗಡೆಯಾದ ಅನುದಾನವನ್ನು ಕೇವಲ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ವಸತಿ ಗೃಹಗಳ ರಿಪೇರಿಗೆ ಬಳಸದೆ ಎಲ್ಲ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಅನುದಾನಕ್ಕೆ ಕೋರಿಕೆ ಸಲ್ಲಿಸುವಂತೆ ಸೂಚನೆ ನೀಡಿದರು.
ಅಧಿಕಾರಿಗಳು ಮನೆ ಬಾಡಿಗೆ ಭತ್ಯೆ ಪಾವತಿ ಮಾಡಿದರೂ ನಿರ್ವಹಣೆ ಇಲ್ಲದೆ ಸೋರುವ ಮನೆಯಲ್ಲಿ ವಾಸಮಾಡುವಂತಾಗಿದೆ. 62 ಲಕ್ಷ ರೂ. ನಿರ್ವಹಣೆಗೆ ಅನುದಾನ ಬಂದರೂ ಸಮರ್ಪಕವಾಗಿ ನಿರ್ವಹಣೆಮಾಡಿರುವುದಿಲ್ಲ. ಮೂಲಭೂತವಾಗಿ ವಾಸವಾಗಿರುವ ಮನೆಯೇ ಸೋರುತ್ತಿದ್ದರೆ ಕೆಲಸಮಾಡುವುದು ಹೇಗೆ. ದುರಸ್ತಿಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆಯ ಚಟುವಟಿಕೆ ಕುರಿತಂತೆ ಸಭೆಯಲ್ಲಿ ಮಂಡಿಸಿದ ಮಾಹಿತಿಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ.ಅಧ್ಯಕ್ಷರು, ಕೃಷಿ ಇಲಾಖೆಯಿಂದ ಅನುಷ್ಠಾನಗೊಂಡಿರುವ ತಾಲೂಕುವಾರು, ಯೋಜನೆವಾರು, ಫಲಾನುಭವಿವಾರು ಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಮೀನುಸಾಗಾಣಿಕೆಗಾಗಿ ವೈಜ್ಞಾನಿಕವಾಗಿ ಕೆರೆಗಳನ್ನು ವರ್ಗೀಕರಿಸಿ ಹಂಚಿಕೆಮಾಡಲು ಮೀನುಗಾರಿಕೆ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ತಕ್ಷಣವೇ ಸರ್ವೇ ನಡೆಸಿ ವಿಸ್ತಾರ ಮತ್ತು ಹಾಗೂ ಉತ್ಪಾದನೆ ಆದರಿಸಿ ಕೆರೆಗಳ ವರ್ಗೀಕರಣದ ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆ್ಯಪ್ ಬಳಸಿ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಅಂಗನವಾಡಿಗಳಿಗೆ ಭೇಟಿ ನೀಡಿ ಶಿಕ್ಷಕಿಯರ ಹಾಗೂ ಮಕ್ಕಳ ಹಾಜರಾತಿಯನ್ನು ಸುಧಾರಿಸಬೇಕು. ಕೆಲ ಅಂಗನವಾಡಿ ಕಾರ್ಯಕರ್ತೆಯರು ನಿತ್ಯವು ತಡವಾಗಿ ಬರುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ. ಇದರಿಂದ ಅಂಗನವಾಡಿಗೆ ಬರುವ ಬಡವರ ಮಕ್ಕಳು ಸಫರ್ ಆಗುತ್ತಿದ್ದಾರೆ. ಅಂಗನವಾಡಿಗಳನ್ನು ಬಲವರ್ಧನೆಮಾಡದಿದ್ದರೆ ಬಡವರ ಮಕ್ಕಳಿಗೆ ಅನ್ಯಾಯಮಾಡಿ ದಂತಾಗುತ್ತದೆ.
ಅಂಗನವಾಡಿಯ ಹಾಜರಾತಿ, ಸಮರ್ಪಕ ಆಹಾರ ಪೂರೈಕೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ತಪಾಸಣೆ, ಅಪೌಷ್ಠಿಕತೆ ನಿವಾರಣೆಗೆ ಆಧ್ಯತೆ ನೀಡಲೇಬೇಕು. ಈ ಉದ್ದೇಶಕ್ಕಾಗಿ ತಯಾರಿಸಲಾದ ಆ್ಯಪ್ ಡೌನ್‍ಲೋಡ್‍ಮಾಡಿಕೊಂಡು ಪ್ರತಿದಿನ ಅಂಗನವಾಡಿಯಲ್ಲಿ ಹಾಜರಾದ ಸೆಲ್ಫಿ ಪೋಟೋ ಅಪ್‍ಲೋಡ್ ಮಾಡಬೇಕು. ಮುಂದಿನ ಒಂದುವಾರದೊಳಗಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಈ ಕುರಿತಂತೆ ಕ್ರಮವಹಿಸುವಂತೆ ಸೂಕ್ತ ನಿರ್ದೇಶನ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ.ಶೆಟ್ಟೆಪ್ಪನವರಿಗೆ ಸೂಚನೆ ನೀಡಿದರು.
ತರಾಟೆ:
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯವೈಖರಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಇಲಾಖೆಯ ಚಟುವಟಿಕೆಗಳ ಕುರಿತಂತೆ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಸೂಚನೆ ನೀಡಿದರು.
ಬೇಸಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಸಾಂಕ್ರಾಮಿಕ ರೋಗಗಳ ತಡೆ ಸೇರಿದಂತೆ, ತೋಟಗಾರಿಕೆ ಕಾರ್ಯಕ್ರಮಗಳ ಅನುಷ್ಠಾನ, ಜಲಾಮೃತ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ, ಶಿಕ್ಷಣ ಇಲಾಖೆ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಬ್ಯಾಲದಹಳ್ಳಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಶ್ರೀಮತಿ ನೀಲವ್ವ ಚವ್ಹಾಣ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ