ಶಿಕ್ಷಣಕ್ಕೆ ಎಲ್ಲರೂ ಹೆಚ್ಚು ಒತ್ತು ನೀಡಿ

ಹೊನ್ನಾಳಿ:

          ಶಿಕ್ಷಣಕ್ಕೆ ಎಲ್ಲರೂ ಹೆಚ್ಚು ಒತ್ತು ನೀಡುವ ಮೂಲಕ ಸಾಕ್ಷರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

         ತಾಲೂಕಿನ ಯರಲಬನ್ನಿಕೋಡು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಮರಿ ಬನ್ನಿ, ದೈವದ ಎಡೆ ಕಾರ್ಯಕ್ರಮದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

        ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಬೇಕು. ಸುಶಿಕ್ಷಿತ ಸಮಾಜ ನಾಡಿನ ಪ್ರಗತಿಯ ಪ್ರತೀಕ. ಆದ್ದರಿಂದ, ಎಲ್ಲರೂ ಶಿಕ್ಷಣ ಪಡೆದು ಬದುಕು ಸಾಗಿಸಬೇಕು ಎಂದು ತಿಳಿಸಿದರು.

          ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವವರು. ಆದ್ದರಿಂದ ಅವರಿಗೇಕೆ ಹೆಚ್ಚು ಹಣ ಖರ್ಚು ಮಾಡಿ ಶಿಕ್ಷಣ ಕೊಡಿಸಬೇಕು ಎಂದು ಹೇಳುವ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸುವವರೂ ನಮ್ಮಲ್ಲಿದ್ದಾರೆ. ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಲಿಂಗ ಭೇದ ಎಣಿಸದೇ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಬೇಕು ಎಂದು ಹೇಳಿದರು.

          ಮಾರಿಹಬ್ಬಗಳ ಆಚರಣೆಗೆಂದು ನಮ್ಮ ಸಮಾಜದ ಜನರು ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಹೆಚ್ಚು ಹಣ ಖರ್ಚು ತಗಲುವ ಮಾಂಸಾಹಾರದಂಥ ಆಹಾರ ತಯಾರಿಸುವ ಹಬ್ಬಗಳನ್ನು ಆಚರಣೆಗೆ ತಂದು ಹಿಂದುಳಿದ ಸಮಾಜದವರನ್ನು ಬಡವರನ್ನಾಗಿಯೇ ಇರಿಸುವ ಮೇಲ್ವರ್ಗದವರ ಹುನ್ನಾರದ ಪ್ರತೀಕ ಈ ಮಾರಿ ಹಬ್ಬ ಆಗಿದೆ. ಇನ್ನಾದರೂ ನಮ್ಮ ಜನರು ಇಂಥ ಮೌಢ್ಯತೆಯ ಆಚರಣೆಗಳನ್ನು ಕೈಬಿಟ್ಟು ಶೋಷಣೆಯಿಂದ ಮುಕ್ತರಾಗಬೇಕು. ಹಾಲು ಮತ ಸಮಾಜದವರು ಹುಟ್ಟು ಲಿಂಗವಂತರು. ಅವರು ಮಾಂಸಾಹಾರಿಗಳಲ್ಲ. ಶುದ್ಧ ಸಸ್ಯಾಹಾರಿಗಳಾಗಿದ್ದರು. ಆದರೆ, ಅಂದಿನ ನಮ್ಮ ಸಹವರ್ತಿಗಳು ಇವರನ್ನು ಮಾಂಸಾಹಾರಿಗಳನ್ನಾಗಿ ಪರಿವರ್ತಿಸಿದರು. ಈಗಲಾದರೂ ನಮ್ಮ ಸಮಾಜದವರು ಎಚ್ಚೆತ್ತುಕೊಂಡು ಇಂಥ ಅಂಧಶ್ರದ್ಧೆಗಳನ್ನು ಬಿಟ್ಟು ಸುಶಿಕ್ಷಿತರಾಗಬೇಕು. ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು ಎಂದು ವಿವರಿಸಿದರು.

         ಇತ್ತೀಚಿನ ದಿನಗಳಲ್ಲಿನ ಮಕ್ಕಳಲ್ಲಿ ಗ್ರಹಣ ಶಕ್ತಿ ಹೆಚ್ಚಾಗಿದೆ. ಹಿರಿಯರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವ, ಏನನ್ನಾದರೂ ಹೇಳಿದರೆ ಹಿರಿಯರನ್ನೇ ಪ್ರಶ್ನಿಸುವ ಮನೋಭಾವ ಅವರಲ್ಲಿ ಇರುತ್ತದೆ. ಹಾಗಾಗಿ, ಮಕ್ಕಳೊಂದಿಗಿನ ಒಡನಾಟದ ವೇಳೆ ದೊಡ್ಡವರು ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

         ಯರಲಬನ್ನಿಕೋಡು ಗ್ರಾಮದಲ್ಲಿ ಹುಟ್ಟಿ ಇಂದು ಡಿವೈಎಸ್‍ಪಿ ಆಗಿರುವ ಎಂ.ಎಚ್. ಉಮಾಶಂಕರ್ ಅವರಂತೆ ಗ್ರಾಮದ ಎಲ್ಲ ಮಕ್ಕಳೂ ಉತ್ತಮ ಅಧ್ಯಯನ ಮಾಡಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap