ದಾವಣಗೆರೆ:
ಕೇಂದ್ರ ಸರ್ಕಾರ ಮೆಕ್ಕೆಜೋಳ ಹಾಗೂ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿರುವುದು ಕೇವಲ ರೈತರ ಕಣ್ಣೀರೊರೆಸುವ ತಂತ್ರವಾಗಿದೆ. ಇದರಿಂದ ರೈತರಿಗೆ ಯಾವುದೇ ಉಪಯೋಗವಾಗಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆರೋಪಿಸಿದ್ದಾರೆ.
ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಸೋಮವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ವಾಮಿ ನಾಥನ್ ವರದಿ ಹಾಗೂ ಬೆಲೆ ಆಯೋಗದ ವರದಿಯ ಪ್ರಕಾರ ರೈತರು ಬೆಳೆದಿರುವ ಬೆಳೆಗಳಿಗೆ ವೈe್ಞÁನಿಕ ಬೆಲೆ ನಿಗದಿ ಮಾಡದೇ, ತನ್ನ ಮನಸ್ಸಿಗೆ ಬಂದಂತೆ ಬೆಂಬಲ ಬೆಲೆ ನಿಗದಿ ಮಾಡಿದೆ. ಹೀಗಾಗಿ ಇದೊಂದು ರೈತರ ಕಣೀರೊರೆಸುವ ತಂತ್ರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ವರ್ತಕರು ಮೆಕ್ಕಜೋಳ ಹಾಗೂ ಭತ್ತ ಖರೀದಿ ಮಾಡಿಕೊಂಡು ತಮ್ಮ ಗೋದಾಮುಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ರೈತರ ಬಳಿ ಮಾಲು ಖಾಲಿಯಾಗಲು ಬಂದರೂ ಸಹ ಇನ್ನೂ ಖರೀದಿ ಕೇಂದ್ರ ತೆರೆಯದಿರುವ ಸರ್ಕಾರದ ನೀತಿಯ ಹಿಂದೆ ವರ್ತಕರಿಗೆ ಲಾಭ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದರೂ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಯನ್ನು ಸಮರ್ಪಕವಾಗಿ ರಾಜ್ಯ ಸರ್ಕಾರ ಮಾಡಿಲ್ಲ. ಅತ್ತ ಕೇಂದ್ರ ಸರ್ಕಾರ ತನ್ನ ನಾಲ್ಕೂವರೆ ವರ್ಷದ ಅವಧಿಯಲ್ಲಿ ರೈತರಿಗೆ ಯಾವುದೇ ಯೋಜನೆ, ಸೌಲಭ್ಯ ಪ್ರಕಟಿಸಿಲ್ಲ ಎಂದು ದೂರಿದರು.
ಮೆಕ್ಕೆಜೋಳಕ್ಕೆ 1700 ರು.ಗಳನ್ನು, ಭತ್ತಕ್ಕೆ 1750 ರು.ಗಳನ್ನು ಬೆಂಬಲ ಬೆಲೆಯಡಿ ಸರ್ಕಾರ ಘೋಷಣೆ ಮಾಡಿದೆ. ಖರೀದಿ ಕೇಂದ್ರ ಸ್ಥಾಪಿಸುವಂತೆ ನಿರಂತರ ಮನವಿ ಮಾಡುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಸರ್ಕಾರದ ಇಂತಹ ನಿರ್ಲಕ್ಷ್ಯದ ಪರಿಣಾಮ ಮೆಕ್ಕೆಜೋಳವನ್ನು ಕೇವಲ 1200-1250 ರು.ಗೆ ಹಾಗೂ ಬತ್ತವನ್ನು 1400-1450 ರು.ಗೆ ಮಾತ್ರ ವರ್ತಕರು, ವ್ಯಾಪಾರಸ್ಥರು ಖದೀರಿಸುತ್ತಿದ್ದಾರೆ. ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಬೆಂಬಲ ಬೆಲೆಯಡಿ ತಾನೇ ಖರೀದಿಸಬೇಕಾದ ಸರ್ಕಾರವೂ ಹೊಣೆಗೇಡಿತನ ಪ್ರದರ್ಶಿಸಿದೆ. ಮೆಕ್ಕೆಜೋಳವನ್ನು 1750 ರು., ಬತ್ತವನ್ನು 1700 ರು. ಒಳಗೆ ಖರೀದಿಸದಂತೆ ಜಿಲ್ಲಾ„ಕಾರಿಗಳು ಆದೇಶಿಸಿದ್ದರು. ಆದರೆ, ಅದಕ್ಕೆ ಯಾರೊಬ್ಬರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬದಲಾಗಿ ಕೇವಲ 1200 ರು.ಗೆ ಮೆಕ್ಕೆಜೋಳ, 1400 ರು.ಗೆ ಬತ್ತ ಖರೀದಿಸುತ್ತಿರುವವರ ವಿರುದ್ಧವೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಘದ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಕಬ್ಬಳ ಪ್ರಸಾದ, ಹನುಮಂತಪ್ಪ, ಬುಳ್ಳಾಪುರ ಹನುಮಂತಪ್ಪ, ಭೀಮಾನಾಯ್ಕ, ತಾಲೂಕು ಕಾರ್ಯದರ್ಶಿ ಪಾಮೇನಹಳ್ಳಿ ಲಿಂಗರಾಜ, ಚನ್ನಗಿರಿ ಲಕ್ಷ್ಮೀಪತಿ, ನಿಂಗಪ್ಪ ಮಾಯಕೊಂಡ, ಆನಗೋಡು ಭೀಮಣ್ಣ, ಲಿಂಗಣ್ಣ, ರಾಮಣ್ಣ, ಹರಿಹರ ಬಸವರಾಜಪ್ಪ, ಸೋಮಶೇಖರಪ್ಪ, ಗೆದ್ದಲಹಟ್ಟ ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
