ದಾವಣಗೆರೆ :
ಸ್ಥಳೀಯ ಕಟ್ಟಡ ಕಾರ್ಮಿಕರನ್ನೇ ಬಳಸಿಕೊಂಡು, 2023ರ ವೇಳೆಗೆ 2ಜಿ ಎಥೆನಾಲ್ ಘಟಕದ ಕಟ್ಟಡ ನಿರ್ಮಾಣ ಮಾಡಿ ಸ್ಥಳೀಯರಿಗೆ ಆದ್ಯತೆಯ ಮೇರೆಗೆ ಉದ್ಯೋಗ ನೀಡಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮೆ|| ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಮೆ|| ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‍ನವರು ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಸಮೀಪ 60 ಕೆಎಲ್‍ಪಿಡಿ 2ಜಿ ಎಥೆನಾಲ್ ಉತ್ಪಾದನೆಯ ಘಟಕವನ್ನು ಸ್ಥಾಪಿಸುವ ಸಂಬಂಧ ಚರ್ಚಿಸಲು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದ ಅತೀ ದೊಡ್ಡ 2ಜಿ ಎಥೆನಾಲ್ ಘಟಕವನ್ನು ಸ್ಥಾಪಿಸಲು ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿ ಜಾಗ ನೀಡಲಾಗಿದ್ದು, ಆದಷ್ಟು ಬೇಗ ಸ್ಥಳೀಯ ಕಟ್ಟಡ ಕಾರ್ಮಿಕರನ್ನೇ ಬಳಸಿಕೊಂಡು ಈ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿ 2023ರ ವೇಳೆಗೆ ಪೂರ್ಣಗೊಳಿಸಿ, ಆದ್ಯತೆಯ ಮೇರೆಗೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕೆಂದು ತಾಕೀತು ಮಾಡಿದರು.
ಸರ್ಕಾರ 2 ವರ್ಷಗಳ ಹಿಂದೆಯೇ ನಿಮಗೆ ಭೂಮಿ ಹಸ್ತಾಂತರ ಮಾಡಿದೆ. ಆದರೂ ಇನ್ನೂ ಕಟ್ಟಡ ಕಾಮಗಾರಿ ಏಕೆ ಆರಂಭಿಸಿಲ್ಲ ಎಂದು ಸಂಸದರು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಗಿರೀಶ್, ಪರಿಸರ ಮಾಲಿನ್ಯ ನಿವಾರಣೆ ಪ್ರಮಾಣಪತ್ರ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಆಗ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, 2020ರ ಫೆಬ್ರವರಿ ಒಳಗೆ ಸಂಬಂಧಿಸಿದ ಎಲ್ಲಾ ಪ್ರಮಾಣಪತ್ರಗಳನ್ನು ಪಡೆದುಕೊಂಡು ಕಾಮಗಾರಿ ಆರಂಭಿಸಬೇಕು. 2023 ಏಪ್ರಿಲ್ ಅಂತ್ಯದ ವೇಳೆಗೆ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಬೇಕು. ಸಂಸ್ಥೆ ಕೆಲಸ ಆರಂಭಿಸಿದ ನಂತರ ಉದ್ಯೋಗದಲ್ಲಿ ದಾವಣಗೆರೆಯ ಸ್ಥಳೀಯ ಜನರಿಗೆ ಅರ್ಹತೆ ಅನುಗುಣವಾಗಿ ವಾಚಮ್ಯಾನ್ ಕೆಲಸದಿಂದ ತಂತ್ರಜ್ಞಾನದ ಕೆಲಸ ಮಾಡುವ ಅರ್ಹತೆ ಇದ್ದವರು ಕಂಡು ಬಂದರೆ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕೆಂದು ಸೂಚನೆ ನೀಡಿದರು.
ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಗಿರೀಶ್ ಮಾತನಾಡಿ, 60 ಕೆಡಿಎಲ್‍ಪಿ ತಂತ್ರಜ್ಞಾನವನ್ನು ಈಗ 2ಜಿ ಎಥೆನಾಲ್ ತಂತ್ರಜ್ಞಾನಕ್ಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಭಾರತವು ಪೆಟ್ರೋಲ್‍ಗೆ ಬೇರೆ ದೇಶಗಳ ಮೇಲೆ ಅವಲಂಬನೆಯಾಗುವುದನ್ನು ಕಡಿಮೆ ಮಾಡಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ನಮ್ಮ ಸಂಸ್ಥೆಯಿಂದ ಎಲ್.ಪಿ.ಜಿ, ಡಿಸೇಲ್, ಪೆಟ್ರೋಲ್, ನೆಪ್ತಾ, ಬಿಲಿಯಮ್ ಆಯಿಲ್‍ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ, ಕರ್ನಾಟ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂ ಹಾಗೂ ಭಾರತ ಸರ್ಕಾರಕ್ಕೆ 11,000 ಕೋಟಿ ರೂ. ತೆರಿಗೆ ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
2ಜಿ ತಂತ್ರಜ್ಞಾನದಲ್ಲಿ ಆಯಿಲ್‍ಗಳ ತಯಾರಿಕೆಗಾಗಿ ರೈತರು ಬೆಳೆದ ಬೆಳೆಗಳ ತ್ಯಾಜ್ಯಗಳಾದ ಮೆಕ್ಕೆಜೋಳದ ದಂಟು, ಬೆಂಡು, ಭತ್ತದ ಹುಲ್ಲು, ಹತ್ತಿಯ ಕಡ್ಡಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ್, ಬೆಳೆಯ ತ್ಯಾಜ್ಯಗಳನ್ನು ನೇರವಾಗಿ ರೈತರಿಂದ ಖರೀದಿಸುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ಗಿರೀಶ್, ತ್ಯಾಜ್ಯವನ್ನು ಖರೀದಿಸಲು ಕೆಲವು ಏಜೆನ್ಸಿಗಳನ್ನು ಗುರುತಿಸಿದ್ದು, ಅವುಗಳೇ ರೈತರಿಂದ ಖರೀದಿಸಿ, ತಾಜ್ಯವನ್ನು ಘಟಕಕ್ಕೆ ಪೂರೈಕೆ ಮಾಡಲಿದ್ದಾರೆ.
ಒಂದು ದಿನಕ್ಕೆ 60,000 ಲೀಟರ್ ಆಯಿಲ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದ್ದು, ಇದರ ತಯಾರಿಕೆಗೆ 200 ರಿಂದ 300 ಟನ್ ತ್ಯಾಜ್ಯ ಬೇಕಾಗುತ್ತದೆ. ಈ ಪ್ರಮಾಣದ ಕಚ್ಚಾ ಪದಾರ್ಥಗಳನ್ನು ರೈತರಿಂದ ಸಂಗ್ರಹಿಸಲಾಗುವುದು ಎಂದರು.2ಜಿ ಎಥೆನಾಲ್ ಘಟಕದ ಕಟ್ಟಡ ಕಾಮಗಾರಿಗೆ ಕೇಂದ್ರ ಸರ್ಕಾರದ ‘ಪ್ರಧಾನ್ ಮಂತ್ರಿ ಜೀವನ್’ ಯೋಜನೆಯಡಿ ಶೇ.20 ರಷ್ಟು ಅನುದಾನ ನೀಡಲಿದೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ನಿಗದಿಯಾಗಿಲ್ಲ. ರಾಜ್ಯ ಸರ್ಕಾರದ ಅನುದಾನಕ್ಕೆ ಅರ್ಜಿ ಸಲ್ಲಿಸುತ್ತೇವೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿ ಸಂಸದರು, ರಾಜ್ಯದಿಂದ ಭೂಮಿ, ನೀರು, ವಿದ್ಯುತ್ ನೀಡುತ್ತಿದ್ದೇವೆ ಅನುದಾನ ನೀಡಲು ಕಷ್ಟ ಆಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಎಂ.ಆರ್.ಪಿ.ಎಲ್ ಸಂಸ್ಥೆಯ ಇಂಡಿಪೆಂಡೆಂಟ್ ಡೈರೆಕ್ಟರ್ ಮಂಜುಳಾ, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕೊಟ್ರೇಶ್, ಎಂಆರ್‍ಪಿಎಲ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.