ದಾವಣಗೆರೆ :
ಪ್ರಸ್ತುತ ನಡೆಯುತ್ತಿರುವುದು ಆರ್ಥಿಕ ಗಣತಿಯೇ ಹೊರತು, ರಾಷ್ಟ್ರೀಯ ನಾಗರೀಕತ್ವ ನೊಂದಣಿ(ಎನ್‍ಆರ್‍ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಸಂಬಂಧಸಿದ ಗಣತಿಯಲ್ಲ. ಹೀಗಾಗಿ ಜನರು ಆತಂಕಕ್ಕೆ ಹಾಗೂ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ನಿಮ್ಮ ಮನೆ ಬಾಗಿಲಿಗೆ ಬರುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಥಿಕ ಗಣತಿಯು ದೇಶದಾದ್ಯಂತ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗಣತಿ ಕಾರ್ಯ ಆರಂಭಿಸಲಾಗಿದೆ. ಆದರೆ, ಜನರು ಎನ್.ಆರ್.ಸಿ ಅಥವಾ ಸಿಎಎಗೆ ಸಂಬಂಧಿಸಿದ ಗಣತಿ ಎಂಬುದಾಗಿ ಭಾವಿಸಿಕೊಂಡು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಅಂಶ ತಿಳಿದು ಬಂದಿದ್ದು, ಜನರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಗಣತಿದಾರರಿಗೆ ಸತ್ಯ ಮತ್ತು ಸ್ಪಷ್ಟವಾದ ಮಾಹಿತಿ ನೀಡಬೇಕು ಎಂದರು.
ದೇಶದಲ್ಲಿ ಆರ್ಥಿಕ ಸ್ಥಿತಿಗಳು ಮತ್ತು ಆದಾಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಜಿಲ್ಲೆಯಾದ್ಯಂತ 2019-20ನೇ ಸಾಲಿನಲ್ಲಿ 7ನೇ ಆರ್ಥಿಕ ಗಣತಿ (ಸರ್ವೇ)ಯನ್ನು ಪ್ರಾರಂಭಿಸಲಾಗಿದೆ. ಜನರು ಯಾವುದೇ ರೀತಿಯ ಭಯ ಮತ್ತು ಆತಂಕಗಳಿಗೆ ಒಳಗಾಗದೇ ಗಣಕೀದಾರರಿಗೆ ಸತ್ಯವಾದ ಮತ್ತು ನಿಖರವಾದ ಅಂಶಗಳನ್ನು ನೀಡಿವುದರ ಮೂಲಕ ದೇಶದ ಆರ್ಥಿಕ ಸುಭದ್ರತೆಗೆ ಸಹಕರಿಸಿ, ಈ ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರತಿ ಮನೆಯಲ್ಲಿ ಮತ್ತು ಇತರೆ ಘಟಕಗಳಲ್ಲಿ ಉತ್ಪಾದನೆಯಾಗುವ ಸರಕುಗಳು, ಅವುಗಳ ವಿತರಣೆ ಮತ್ತು ಮಾರಾಟ ಅಥವಾ ಸೇವಾ ಚಟುವಟಿಕೆಯಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯವನ್ನು ತಂದು ಕೊಡುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ದೇಶದ ಭೌಗೋಳಿಕ ಗಡಿಯೊಳಗೆ ನೆಲಗೊಂಡ ಸ್ವಂತ ಉಪಯೋಗವಿಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟುಕೆಗಳಲ್ಲಿ ತೊಡಗಿರುವ ಉದ್ಯಮಗಳ ಅಥವಾ ಘಟಕಗಳ ಪೂರ್ಣ ಎಣಿಕೆಯಾಗಿರುತ್ತದೆ.
ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ. ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ, ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ 7ನೇ ಆರ್ಥಿಕ ಗಣತಿಯು ಸಿಎಸ್‍ಸಿ (ಕಾಮನ್ ಸರ್ವೀಸ್ ಸೆಂಟರ್), ಇ-ಗವರ್ನೆನ್ಸ್ ಸರ್ವೀಸ್ ಇಂಡಿಯಾ ಲಿಮಿಟೆಡ್ ಮತ್ತು ಎನ್‍ಎಸ್‍ಎಸ್‍ಓ (ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಜೇಷನ್) ರವರು ಗಣತಿ ನಡೆಸುತ್ತಿದ್ದು, ಗಣತಿಗೆ ಸಂಬಂಧಿ ಸಿದಂತೆ ಬ್ಲಾಕುಗಳ ರಚನೆ, ಗಣತಿದಾರರ ಹಾಗೂ ಮೇಲ್ವಿಚಾರಕರ ನೇಮಕಾತಿ, ಕ್ಷೇತ್ರ ಕಾರ್ಯಾಚರಣೆ, ಪ್ರಗತಿ ವರದಿ ಇತ್ಯಾದಿ ಕಾರ್ಯಗಳ ಸಂಪೂರ್ಣ ಜವಾಬ್ದಾರಿ ಹಾಗೂ ಉಸ್ತುವಾರಿ ಸಿಎಸ್‍ಸಿ ಮತ್ತು ಎನ್‍ಎಸ್‍ಎಸ್‍ಓ ಇವರದ್ದಾಗಿರುತ್ತದೆ ಎಂದರು.
ಕಳೆದ 2012-13ರ ಗಣತಿಯಂತೆ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ 22,256 ಮತ್ತು ನಗರದಲ್ಲಿ 30,549 ಆರ್ಥಿಕ ಘಟಕಗಳು ಇರುವುದಾಗಿ ತಿಳಿದುಬಂದಿದ್ದು, ಅದರ ಅನುಸಾರ ಈ ಬಾರಿ ಗಣತಿದಾರರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಒಟ್ಟು 1059 ಗಣತಿದಾರರು, 259 ಮೇಲ್ವಿಚಾರಕರು ಗಣತಿ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಗಣತಿಯು ಸಂಪೂರ್ಣ ಮೊಬೈಲ್ ಆ್ಯಪ್ ಬಳಕೆಯೊಂದಿಗೆ ನಡೆಯುತ್ತದೆ. ಗಣತಿ ಕಾರ್ಯ ಮುಗಿದ ನಂತರ ಕಡ್ಡಾಯವಾಗಿ ಮೊಬೈಲ್‍ನಿಂದ ಸೃಜಿಸಲ್ಪಟ್ಟ ನಂಬರ್ ಅನ್ನು ಮನೆಯ ಬಾಗಿಲಿಗೆ ಅಥವಾ ಗೋಡೆಗೆ ಬರೆಯಲಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿಗಳು ತಮ್ಮ ತಮ್ಮ ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ ಮತ್ತು ಗ್ರಾಮ ಲೆಕ್ಕಿಗ ಅಧಿಕಾರಿಗಳು ಗಣತಿಯ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಗಣತಿ ಸಮಯದಲ್ಲಿ ಗಣತಿದಾರರು, ಮೇಲ್ವಿಚಾರಕರಿಗೆ ಆಕಸ್ಮಿಕ ತೊಂದರೆ ಉಂಟಾದರೆ ತಾಲ್ಲೂಕು ಆರಕ್ಷಕ ಇಲಾಖೆಯವರು ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಜಿ.ಬಿ.ಹರಮಗಟ್ಟಿ ಹಾಜರಿದ್ದರು.