ಬಳ್ಳಾರಿ
ಮುಂದಿನ ವಾರ ಮುಖ್ಯಮಂತ್ರಿಗಳು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆ ತೆಗೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಡಿಸಿ ನಕುಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕೇಂದ್ರ ಕಚೇರಿಗೆ ಮಾಹಿತಿ ಕಳುಹಿಸುವುದಕ್ಕಿಂತ ಮುಂಚೆ ನಮಗೆ ತೋರಿಸಿ ಕಳುಹಿಸಿ ಮತ್ತು ನಮಗೂ ಅದೇ ರೀತಿಯ ಮಾಹಿತಿ ನೀಡಿ ಎಂದು ವ್ಯತ್ಯಾಸದ ಮಾಹಿತಿ ನೀಡಬೇಡಿ ಎಂದರು.
ಇಲಾಖೆಯ ವಿಶೇಷ ಕಾರ್ಯಕ್ರಮಗಳಿದ್ದರೇ ಅವುಗಳ ಮಾಹಿತಿಯೂ ನೀಡುವಂತೆ ಸೂಚಿಸಿದ ಡಿಸಿ ನಕುಲ್ ಅವರು ಬರುವ ಸೋಮವಾರ ಮತ್ತೊಂದು ಬಾರಿ ಸಭೆ ನಡೆಸಲಾಗುವುದು. ತಾವು ವಿವರವಾದ ಮಾಹಿತಿ ಒದಗಿಸಬೇಕು ಎಂದರು.ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‍ರಾಜ್ ಸಂಸ್ಥೆಗಳ ಸಮಿತಿಯು ಬಳ್ಳಾರಿಗೆ ಗುರುವಾರ ಭೇಟಿ ನೀಡಿ ವಿವಿಧ ಸ್ಥಳಗಳ ಪರಿಶೀಲನೆ ನಡೆಸಲಿದೆ ಎಂದು ವಿವರಿಸಿದ ಅವರು ಪುನರ್ವಸತಿ ಗೊಂಡ ಗ್ರಾಮಗಳಲ್ಲಿ ತುರ್ತು ಉದ್ದೇಶಕ್ಕೆ ನಿಧಿ ಬಳಸಿಕೊಳ್ಳದೇ ಇದ್ದುದಕ್ಕೆ ಸಂಬಂಧಿಸಿದಂತೆ ಹಾಗೂ ಸ್ಥಳ ಪರಿವೀಕ್ಷಣೆ ನಡೆಸಿ ಅಗತ್ಯ ಮಾಹಿತಿ ಪಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು ಖುದ್ದು ಉಪಸ್ಥಿತರಿದ್ದು ಅಗತ್ಯ ಮಾಹಿತಿ ನೀಡಬೇಕು ಎಂದರು.
ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯು ಗರುವಾರ ಬಳ್ಳಾರಿಯಲ್ಲಿ ಸಭೆ ನಡೆಸಲಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳು, ಜಿಲ್ಲಾಮುಖ್ಯರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಕಾಮಗಾರಿಗಳ ಕುರಿತು ಅಂದಾಜುಗಳ ಸಮಿತಿ ಚರ್ಚಿಸಲಿದೆ. ಅಧಿಕಾರಿಗಳು ಸಮರ್ಪಕ ಮತ್ತು ಅಗತ್ಯ ಮಾಹಿತಿ ಒದಗಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಡಿ.19 ಮತ್ತು 20ರಂದು ಎರಡು ದಿನಗಳ ಕಾಲ ಮಕ್ಕಳ ಹಕ್ಕುಗಳ ಪ್ರಕರಣಗಳ ವಿಚಾರಣೆ, ಪ್ರಗತಿ ಪರಿಶೀಲನಾ ಸಭೆ ಬಳ್ಳಾರಿಯಲ್ಲಿ ನಡೆಸಲಿದ್ದಾರೆ ಎಂದು ವಿವರಿಸಿದ ಡಿಸಿ ನಕುಲ್ ಅವರು
ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತು ಆಯೋಗದಲ್ಲಿ ದಾಖಲಾದ ಪ್ರಕರಣ/ದೂರುಗಳ ವಿಚಾರಣೆ, ಆರ್‍ಟಿಇ ಕಾಯ್ದೆ ಮತ್ತು ಶಾಲೆಯಿಂದ ಹೊರಗಿರುವ ಮಕ್ಕಳ ದಾಖಲಾತಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕು ಎಂದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತರಾದ ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.








