ದಾಖಲಾದ ದೂರುಗಳಿಗೆ ಕೂಡಲೇ ಅನುಸರಣಾ ವರದಿ ನೀಡಿ : ದತ್ತಾ

ತುಮಕೂರು
    ಜಿಲ್ಲೆಯಿಂದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸೆಪ್ಟೆಂಬರ್ ಅಂತ್ಯದವರೆಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ  182 ದೂರು ಪ್ರಕರಣಗಳು ದಾಖಲಾಗಿವೆ.  ದೂರು ಪ್ರಕರಣಗಳಿಗೆ ಸಂಬಂಧಿಸಿದಂತೆ   ಆಯೋಗವು ವಿವಿಧ ಇಲಾಖೆಗಳಿಗೆ ಅನುಸರಣಾ ವರದಿ ಸಲ್ಲಿಸಲು ನೀಡಿದ  ನಿರ್ದೇಶನದನ್ವಯ 131 ಪ್ರಕರಣಗಳಿಗೆ ಮಾತ್ರ ಅನುಸರಣಾ ವರದಿಯನ್ನು ಸ್ವೀಕರಿಸಲಾಗಿದೆ.
 
    ಬಾಕಿ ಉಳಿದಿರುವ 51 ಪ್ರಕರಣಗಳಿಗೆ ಸಂಬಂಧಿಸಿದ ಇಲಾಖೆಗಳು ಕೂಡಲೇ ಆಯೋಗಕ್ಕೆ ಅನುಸರಣಾ ವರದಿ ಸಲ್ಲಿಸಬೇಕೆಂದು ಆಯೋಗದ ಸದಸ್ಯ ರೂಪ್‍ಕುಮಾರ್ ದತ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಅಧಿಕಾರಿಗಳೊಂದಿಗೆ ಬಾಕಿ ಪ್ರಕರಣಗಳ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರು ಅರ್ಜಿಗಳನ್ನು ವಿಲೇವಾರಿ ಮಾಡದೇ ಸುಮಾರು 2011-12ರಿಂದ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳಿಗೆ ನೊಟೀಸ್ ನೀಡಿದ್ದರೂ ಅಧಿಕಾರಿಗಳು ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ?  ತಮ್ಮ ವೈಯಕ್ತಿಕ ಕೆಲಸಗಳಿಗೆ ನೀಡುವ ಆದ್ಯತೆಯನ್ನು ದೂರು ಅರ್ಜಿಗಳ ವಿಲೇವಾರಿಗೂ   ನೀಡಬೇಕು ಎಂದು ನಿರ್ದೇಶಿಸಿದರು.
 
    ಮುಂಬರುವ 15 ದಿನಗಳೊಳಗೆ   ಆಯೋಗಕ್ಕೆ ಅನುಸರಣಾ ವರದಿ ಸಲ್ಲಿಸದ ಅಧಿಕಾರಿಗಳ ವಿರುದ್ಧ ಸಮನ್ಸ್ ಜಾರಿ ಮಾಡಲಾಗುವುದು.  ಸಮನ್ಸ್‍ಗೂ ಜಗ್ಗದ ಅಧಿಕಾರಿಗಳಿಗೆ ಅಂತಿಮವಾಗಿ ವಾರೆಂಟ್ ಜಾರಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ದೂರು ಅರ್ಜಿಗಳನ್ನು ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ಗಮನಕ್ಕೆ ತಂದ ನಂತರವೇ ಅಧೀನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
     ಅಧೀನ ಅಧಿಕಾರಿಗಳೇ ನೇರವಾಗಿ ವರದಿಗಳನ್ನು ಆಯೋಗಕ್ಕೆ ಸಲ್ಲಿಸುವಂತಿಲ್ಲ.  ಮಾವನ ಹಕ್ಕುಗಳ ಉಲ್ಲಂಘನೆ ಕುರಿತು ಯಾವುದೇ ದೂರು ಅರ್ಜಿಗಳು 3 ತಿಂಗಳೊಳಗೆ ವಿಲೇವಾರಿಯಾಗದಿದ್ದಲ್ಲಿ ಶಿಸ್ತುಕ್ರಮ ಜರುಗಿಸಲಾಗು ವುದೆಂದರು.ನಂತರ ಇಲಾಖಾವಾರು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ಕಾರಾಗೃಹಗಳಲ್ಲಿ ಖೈದಿಗಳು ಅಸ್ವಾಭಾವಿಕವಾಗಿ ಮರಣ ಹೊಂದಿದಲ್ಲಿ ಗರಿಷ್ಠ 1 ತಿಂಗಳೊಳಗೆ ಆಯೋಗಕ್ಕೆ ವರದಿ ಸಲ್ಲಿಕೆಯಾಗಬೇಕು. ಆದರೆ ವರ್ಷ ಕಳೆದರೂ ವರದಿ ಸಲ್ಲಿಸುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. 
 
    ನಿವೃತ್ತ ಶಿರಸ್ತೆದಾರ ಡಿ. ತಿಮ್ಮಯ್ಯನವರ ನಿವೃತ್ತಿ ವೇತನ ಹಾಗೂ ಉಪಧನ ಮಂಜೂರಾತಿ ಕುರಿತು 2015ರಲ್ಲಿ ದೂರು ದಾಖಲಾಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ವಯೋವೃದ್ಧರ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿಕೊಡಿ. ನಾಳೆ ನೀವೆಲ್ಲ ನಿವೃತ್ತಿಯಾದಾಗ ಇಂತಹದೇ ಸಂದರ್ಭ ಎದುರಾಗಬಹುದೆಂದು ಗಮನದಲ್ಲಿಟ್ಟುಕೊಂಡು ಮಾನವೀಯತೆಯಿಂದ ಕೆಲಸ ಮಾಡಿ ಎಂದರು.
    ತುಮಕೂರು ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಲಕ್ಷ್ಮೀದೇವಿಯ ಉತ್ಸವದಲ್ಲಿ ದಲಿತರನ್ನು ಸೇರಿಸಿಕೊಳ್ಳದೆ ಅಸ್ಪೃಶ್ಯತೆ ನಿರ್ಮಾಣವಾಗಿರುವ ಬಗ್ಗೆ ದಾಖಲಾಗಿರುವ ದೂರಿನ ಬಗ್ಗೆ ಪರಿಶೀಲಿಸಿದ ಅವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ಶೋಚನೀಯ ಸಂಗತಿ ಸ್ಥಳೀಯರಿಗೆ ಅಸ್ಪೃಶ್ಯತೆ ಬಗ್ಗೆ ಇರುವ  ಮೂಢನಂಬಿಕೆಗಳನ್ನು ದೂರು ಮಾಡುವಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕೆಂದರು. 
    ಕುಣಿಗಲ್ ತಾಲ್ಲೂಕ್ ಹುಲಿಯೂರು ದುರ್ಗ ಹೋಬಳಿ ಉಜ್ಜಿನಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ಉತ್ಸವದ ವೇಳೆ ಕಟ್ಟಡ ಕುಸಿದು ಸುಮಾರು 35ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವ ಬಗ್ಗೆ  ದಾಖಲಾಗಿರುವ ದೂರಿಗೆ ಕೈಗೊಂಡ ಕ್ರಮದ ಬಗ್ಗೆ  ಜಿಲ್ಲಾಧಿಕಾರಿಗಳನ್ನು ಸದಸ್ಯರು ಮಾಹಿತಿ ಕೇಳಿದಾಗ ಉತ್ತರ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್  ವರದಿ ನೀಡಲು ಕುಣಿಗಲ್ ತಹಶೀಲ್ದಾರ್ ಅವರಿಗೆ 4 ಬಾರಿ ನೆನಪೋಲೆ ಮೂಲಕ ಸೂಚನೆ ನೀಡಿದ್ದರೂ ಈವರೆವಿಗೂ ವರದಿ ಬಂದಿಲ್ಲದಿರುವುದರಿಂದ ಕೂಡಲೇ ಅವರಿಗೆ ನೋಟಿಸ್ ನೀಡಲಾಗುವುದೆಂದು ಆಯೋಗದ ಸದಸ್ಯರ ಗಮನಕ್ಕೆ ತಂದರು.
   
    ತುರುವೇಕೆರೆ ತಾಲ್ಲೂಕು ತೊರೆಮಾವಿನಹಳ್ಳಿ ದನದಕೊಟ್ಟಿಗೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ ಎಂಬ ದೂರು ಪ್ರಕರಣಕ್ಕೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಅವರು ಆ ಕಟ್ಟಡ ದನದ ಕೊಟ್ಟಿಗೆ ಅಲ್ಲ. ಹಳೆಯ ಕಟ್ಟದಲ್ಲಿ ನಡೆಸಲಾಗುತ್ತಿತ್ತು. ಸದ್ಯ ಕೇಂದ್ರವನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
   
       ಕುಣಿಗಲ್ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೋಳಿ ಮಾಂಸದ ವ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ತ್ಯಾಜ್ಯಮಾಂಸ ತಿನ್ನಲು ಬರುವ ಬೀದಿನಾಯಿ ಕಡಿತದಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂಬ ದೂರು ದಾಖಲಾಗಿರುವುದರಿಂದ ಅಕ್ರಮ ತ್ಯಾಜ್ಯ ವಿಲೇವಾರಿಯನ್ನು ತಡೆಯಬೇಕೆಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
   
     ಉಳಿದಂತೆ ಸಭೆಯಲ್ಲಿ ನಿವೇಶನದ ಸುಳ್ಳು ನಕ್ಷೆ, ಬೀಡಾಡಿ ದನಗಳ ಹಾವಳಿ, ಮಂಜೂರಿ ಜಮಿನಿಗೆ ಸಾಗುವಳಿ ಚೀಟಿ ನೀಡದಿರುವ, ಕಳ್ಳಭಟ್ಟಿ ಮಾರಾಟ, ಜಮೀನು ಒತ್ತುವರಿ, ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಇಲ್ಲದಿರುವುದು, ಬೋಗಸ್ ಸಾಗುವಳಿ ನೀಡಿರುವ, ವಿದ್ಯುತ್ ಸಮಸ್ಯೆ,  ಅಕ್ರಮ ಖಾತೆ, ಕಲುಷಿತ ನೀರು ಸರಬರಾಜು, ಮಧುಗಿರಿ ತಾಲ್ಲೂಕು ದೊಡ್ಡ ಮಾಲೂರು ಕೆರೆಗೆ ಬಸ್ ಉರುಳಿ 4 ಮಂದಿ ಸಾವನ್ನಪ್ಪಿರುವ, ಅಕ್ರಮ ಮರಳು ದಂಧೆ, ವಸತಿ ಹೀನರಿಗೆ ನಿವೇಶನ ಮಂಜೂರು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ನಿರ್ಮಾಣ, ಹದಗೆಟ್ಟಿರುವ ರಸ್ತೆ, ಅಕ್ರಮ ಕಲ್ಲು ಗಣಿಗಾರಿಕೆ ಸೇರಿದಂತೆ   ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು.
   
   ನಂತರ ಮಾತನಾಡಿದ ಸದಸ್ಯರು ಆಯೋಗವು ಯಾರ ಪರ ಹಾಗೂ ವಿರೋಧವಾಗಿ ಕೆಲಸ ಮಾಡುವುದಿಲ್ಲ. ಸಾರ್ವಜನಿಕರು ನ್ಯಾಯ ಸಮ್ಮತವಾಗಿ ನೆಮ್ಮದಿಯಿಂದ ಮೂಲಭೂತ ಹಕ್ಕುಗಳೊಂದಿಗೆ ಬದುಕಲು ಅವಕಾಶ ಒದಗಿಸುವುದೇ ಆಯೋಗದ ಉದ್ದೇಶವಾಗಿದೆ ಎಂದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಿರೀಶ್ ಕುಮಾರ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap