‘ಸಚಿವ ಈಶ್ವರಪ್ಪರಿಗೆ ಗ್ರಾಮೀಣ ಸಮಸ್ಯೆಗಳ ಅರಿವಿಲ್ಲ’-ಶಾಸಕ ಶ್ರೀನಿವಾಸ್

 ಗುಬ್ಬಿ : 

      ಪಂಚಾಯತ್ ರಾಜ್ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿರುವ ಗ್ರಾಮೀಣಾಭಿವೃಧ್ದಿ ಸಚಿವ ಈಶ್ವರಪ್ಪ ಅವರಿಗೆ ಗ್ರಾಮೀಣ ಭಾಗದ ಸಮಸ್ಯೆಗಳ ಅರಿವಿಲ್ಲ. ಶಿವಮೊಗ್ಗ ನಗರದಲ್ಲಿ ಶಾಸಕರಾಗಿ ನಗರ ಪ್ರದೇಶದ ವ್ಯವಸ್ಥೆಯನ್ನೇ ಹಳ್ಳಿಗಾಡಿಗೆ ತರುವ ಮಾತುಗಳಾಡುತ್ತಾರೆ. ಗ್ರಾಮಗಳ ಮೂಲ ಸಮಸ್ಯೆಗಳನ್ನು ಮೊದಲು ಅವರು ತಿಳಿಯಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಗೆ 15 ಲಕ್ಷ ರೂಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಹಳ್ಳಿಗೆ ಕಸ ವಿಲೇವಾರಿ ಘಟಕ ಸ್ಥಾಪನೆ ಬಗ್ಗೆ ಅಸಂಬದ್ದ ಭರವಸೆ ನೀಡುತ್ತಾರೆ. ಈ ಕಾರ್ಯಕ್ಕೆ ಮೊದಲು ಗ್ರಾಮ ಪಂಚಾಯಿತಿಯನ್ನು ಸಬಲೀಕರಣ ಮಾಡಬೇಕಿದೆ. ಈ ಜತೆಗೆ ನಜೀರ್‍ಸಾಬ್ ಅವರ ಪಂಚಾಯತ್‍ರಾಜ್ ಕನಸನ್ನು ಭಗ್ನ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

      ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಎಂದು ದೊಡ್ಡ ಮಾತುಗಳಾಡುತ್ತಿರುವ ಸಚಿವ ಈಶ್ವರಪ್ಪ ಅವರಿಗೆ ನೀರಿನ ಮೂಲದ ಹೇಗೆ ಎಂಬ ಕಲ್ಪನೆ ಇಲ್ಲ. ನದಿ ಮೂಲದ ಗ್ರಾಮಗಳಿಗೆ ಸರಿಯಾಗಿ ನೀರು ನೀಡಲಾಗಿಲ್ಲ. ಬೋರ್‍ವೆಲ್ ನೆಚ್ಚಿಕೊಂಡ ಗ್ರಾಮಗಳ ವಾಸ್ತವ ಸ್ಥಿತಿ ತಿಳಿದಿರಲು ಸಾಧ್ಯವಿಲ್ಲ. ಪ್ರತಿ ಮನೆಗೆ ನೀರು ಒದಗಿಸಲು ಯಾವ ಯೋಜನೆ ಅನುಷ್ಠಾನಕ್ಕಿದೆ. ಬೇಸಿಗೆಯಲ್ಲಿ ಕೈಕೊಟ್ಟ ಬೋರ್‍ವೆಲ್‍ಗಳ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗಿಲ್ಲ. ತಾಲ್ಲೂಕಿನಲ್ಲೇ ಸುಮಾರು 2 ಸಾವಿರಕ್ಕೂ ಅಧಿಕ ಬೋರ್ ಕರೆಸಲಾಗಿದೆ. ಈ ಪೈಕಿ ವಿಫಲವಾಗಿರುವ ಬೋರ್‍ಗಳೇ ಹೆಚ್ಚಿದೆ. ಇಂತಹ ದೊಡ್ಡ ಸಮಸ್ಯೆ ಮುಂದಿರುವಾಗ ಮನೆ ಮನೆಗೆ ನೀರು ಎಂಬ ಸಲ್ಲದ ಘೋಷಣೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಪಪಂ ವ್ಯಾಪ್ತಿಯ ಅಭಿವೃದ್ದಿಗೆ ಬಂದಿದ್ದ 12 ಕೋಟಿ ರೂ ಮರಳಿ ಸರ್ಕಾರ ಪಡೆದಿತ್ತು. ಸದ್ಯದಲ್ಲಿ ಹಣ ವಾಪಸ್ ನೀಡಲಿದ್ದಾರೆ. ಈ ಜತೆಗೆ ಸ್ಲಂ ಬೋರ್ಡ್‍ನಿಂದ 300 ಮನೆಗಳು ಜನವರಿ ಮಾಹೆಯಲ್ಲಿ ಮಂಜೂರು ಮಾಡಲಾಗುವುದು ಎಂದರು.

      ಪರಿಪೂರ್ಣವಾಗದ ಯೋಜನೆ ರೂಪಿಸುವ ಬಿಜೆಪಿ ಸರ್ಕಾರ ಪಂಚಾಯಿತಿ ಚುನಾವಣೆಯಲ್ಲೂ ತಮ್ಮ ವರಸೆ ತೋರುತ್ತಿದೆ. ಪಕ್ಷಾತೀತ ಚುನಾವಣೆಯು ಸ್ಥಳೀಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಯೋಗ್ಯವಾಗಿದೆ. ಇಲ್ಲಿಯೂ ಬಿಜೆಪಿ ತಮ್ಮ ಪಕ್ಷ ಹೇಗೆ ಚುನಾವಣೆ ನಡೆಸಲಿದೆ ಎಂದು ಸಾಲು ಸಾಲು ಸಭೆ ನಡೆಸಿ ಪಂಚಾಯತ್‍ರಾಜ್ ಮೂಲ ಉದ್ದೇಶವನ್ನೇ ಹಾಳು ಮಾಡುತ್ತಿದೆ. ಹೇಮಾವತಿ ನೀರು ಜನವರಿ ಮಾಹೆಯವರೆಗೆ ಹರಿಯಲಿದ್ದು ಗುಬ್ಬಿ ಕೆರೆ ಶೇ.80 ರಷ್ಟು ತುಂಬಿದೆ. ಈಗ ಕಡಬ ಕೆರೆಗೂ ನೀರು ಹರಿಯುತ್ತಿದ್ದು, ಭಾಗಶಃ ತುಂಬಿಸುವ ಕೆಲಸ ನಿರಂತರ ಮಾಡಲಾಗುವುದು ಎಂದರು.

      ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಗ್ರಾಮಸ್ಥರು ಕೈಗೊಂಡ ಚುನಾವಣೆ ಬಹಿಷ್ಕಾರ ಕ್ರಮ ಸಮಂಜಸವಾಗಿದೆ. ಕಳೆದ 10 ವರ್ಷಗಳ ನಿರಂತರ ಹೋರಾಟಕ್ಕೆ ಬೆಂಬಲ ನೀಡಿ ಖುದ್ದು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಪಟ್ಟಿದ್ದೇನೆ. 2019 ರಲ್ಲಿ ಆಡಳಿತಾತ್ಮಕ ಮಂಜೂರಾತಿಗೆ ಅಸ್ತು ದೊರೆಕಿತ್ತು. ಒಂದು ಬಾರಿ ಟೆಂಡರ್ ರದ್ದು ಆಗಿ ಮತ್ತೊಮ್ಮೆ ಟೆಂಡರ್ ನಡೆದು 25 ಕೋಟಿ ರೂಗಳ ಮಂಜೂರಿಗೆ ಹಣಕಾಸು ಇಲಾಖೆವರೆಗೆ ತೆರಳಿ ಇನ್ನೂ ಕಾರ್ಯಾರಂಭಕ್ಕೆ ಸರ್ಕಾರ ಮೀನಾಮೇಷ ಎಣಿಸಿದೆ. ನಾನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಲಿದ್ದೇನೆ. ಸರ್ಕಾರದ ಗಮನಕ್ಕೂ ತಂದರೂ ವಿಳಂಬ ಅನುಸರಿಸುತ್ತಿರುವ ಹಿನ್ನಲೆ ಜನರಲ್ಲಿ ನಂಬಿಕೆ ಕಳೆದು ಹೋಗಿದೆ. ಈ ನಿಟ್ಟಿನಲ್ಲಿ ಚುನಾವಣೆ ಬಹಿಷ್ಕರಿಸುವತ್ತ ತೆರಳಿದ್ದಾರೆ. ಆದರೆ ಸಂಬಂಧಪಟ್ಟ ಸಚಿವರು ಇತ್ತ ಕಡೆ ಗಮನ ಹರಿಸಬೇಕಿದೆ ಎಂದರು.

      ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್‍ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ರೇಣುಕಾಪ್ರಸಾದ್, ಶೌಕತ್ ಆಲಿ, ಮಂಗಳಮ್ಮ, ರಂಗಸ್ವಾಮಿ, ಮುಖಂಡರಾದ ಶಿವಪ್ಪ, ಪ್ರಭಾಕರ್, ರಾಜಣ್ಣ, ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಇಂಜಿನಿಯರ್ ಸತ್ಯನಾರಾಯಣ್ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link