ದತ್ತ ಪೀಠ ಹಿಂದುಗಳಿಗೆ ಒಪ್ಪಿಸಲು ಆಗ್ರಹ

ದಾವಣಗೆರೆ:

      ಚಿಕ್ಕಮಗಳೂರಿನ ದತ್ತಾತ್ರೇಯ ಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಘೋರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

       ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾಬುಡನ್ ದರ್ಗಾ ಹಾಗೂ ದತ್ತಾತ್ರೇಯ ಪೀಠ ಬೇರೆ, ಬೇರೆವು ಎಂಬುದಕ್ಕೆ ದಾಖಲೆಗಳಿವೆ. ಈ ಪೀಠದಿಂದ ಸುಮಾರು 14 ಕಿ.ಮೀ. ದೂರವಿರುವ ನಾಗೇನಹಳ್ಳಿಯಲ್ಲಿ ಬಾಬಾಬುಡನ್ ದರ್ಗಾ ಇದೆ. ಆದರೂ ದತ್ತಾತ್ರೇಯ ಪೀಠವನ್ನು ಬಾಬಾಬುಡನ್ ದರ್ಗಾ ಎಂಬುದಾಗಿ ಬಿಂಬಿಸಿಕೊಂಡು ಬಂದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

        ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 14 ವರ್ಷಗಳಿಂದ ನಿರಂತ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ವಿವಾದ ನ್ಯಾಯಾಲಯದ ಮೇಟ್ಟಿಲು ಏರಿದ ನಂತರದಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವೇ ವಿವಾದನ್ನು ಸೌಹಾರ್ದಯುತವಾಗಿ ಬಗೆ ಹರಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿಂದೂ ವಿರೋಧಿ ಡೋಂಗಿ ಕಾಂಗ್ರೆಸ್ ಸರ್ಕಾರ ಸೌಹಾರ್ದಯುತವಾಗಿ ಬಗೆಹರಿಸದೇ, ಹಿಂದಿನಂತಯೇ ಮೌಲಿಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ವಾಸ್ತವದಲ್ಲಿ ಮುಸಲ್ಮಾನರು ಮೂರ್ತಿ ಪೂಜೆಯನ್ನೇ ವಿರೋಧಿಸುತ್ತಾರೆ. ಅಂಥದಲ್ಲಿ ಮುಸ್ಲಿಂ ಮೌಲ್ವಿ ಹೇಗೆ ಇಲ್ಲಿ ಮೂರ್ತಿ ಪೂಜೆ ಮಾಡುತ್ತಾರೆ? ಎಂದು ಪ್ರಶ್ನಿಸಿದ ಅವರು, ಕೊನೆ ಪಕ್ಷ ಇಲ್ಲಿ ಉರುಸು ಆಚರಣೆಯ ವೇಳೆಯಲ್ಲಿ ಮೌಲಿಗಳಿಗೆ ಹಾಗೂ ದತ್ತಾತ್ರೇಯ ಜಯಂತಿಯ ಸಂದರ್ಭದಲ್ಲಿ ಹಿಂದೂ ಅರ್ಚಕರಿಗೆ ಪೂಜೆ ಸಲ್ಲಿಸುವ ಅವಕಾಶ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು. ಆದರೆ, ರಾಜ್ಯ ಸರ್ಕಾರ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಒಂದೇ ಸಮುದಾಯಕ್ಕೆ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

        ದತ್ತಾತ್ರೇಯ ಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಘೋರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಸೇನಾ ವತಿಯಿಂದ ಅ.25ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಹಾಗೂ ದತ್ತ ಮಾಲಾ ಅಭಿಯಾನ ಕೊನೆಗೊಳ್ಳಲಿರುವ ಅ.28ರಂದು ಧರ್ಮಸಭೆ, ದತ್ತ ಹೋಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಐದು ಜನ ಸ್ವಾಮೀಜಿಗಳು ಹಾಗೂ ಬಿಜೆಪಿಗೆ ರಾಜೀನಾಮೆ ಕೊಟ್ಟಿರುವ ಆಂಧ್ರಪ್ರದೇಶದ ಭಾಗ್ಯ ನಗರ ಶಾಸಕ ರಾಜಸಿಂಗ್ ಠಾಕೂರ್ ಮತ್ತಿತರರು ಭಾಗವಹಿಸಲಿದ್ದು, ಅಂದು ಸುಮಾರು 5 ಸಾವಿರ ಜನ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸುಪ್ರೀಂ ತೀರ್ಪು ಒಪ್ಪಲಾಗದು:      ಶಬರಿಮಲೈಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‍ನ ತೀರ್ಪನ್ನು ಒಪ್ಪಲು ಸಾಧ್ಯವೇ ಇಲ್ಲ. ಸುಮಾರು 1400 ವರ್ಷಗಳಿಂದ ಶಬರಿಮಲೈಯಲ್ಲಿ ಸಂಪ್ರದಾಯ, ಧಾರ್ಮಿಕ ವಿಧಿವಿಧಾನಗಳು ಆಚರಣೆಗೊಳ್ಳುತ್ತಾ ಬಂದಿವೆ. ಈ ಎಲ್ಲಾ ಆಚರಣೆಗಳು ಮೂಢತೆಯಿಂದಲೇ ಕೂಡಿಲ್ಲ. ಕೆಲ ವೈಚಾರಿಕೆ ಆಚರಣೆಗಳು ಸಹ ಇವೆ.

      ಶಬರಿಮಲೈಯಲ್ಲಿ 10 ವರ್ಷದ ಒಳಗಿನ ಬಾಲಕಿಯರಿಗೆ ಹಾಗೂ 50 ವರ್ಷದ ನಂತರದ ಮಹಿಳೆಯರಿಗೆ ಪ್ರವೇಶ ಮೊದಲಿನಿಂದಲೂ ಇದೆ. ಆದರೆ, ಈ ಎರಡು ವಯೋಮಿತಿಗಳ ಒಳಗಿನ ಮಹಿಳೆಯರಿಗೆ ಮಾತ್ರ ಶಬರಿಮಲೈ ಪ್ರವೇಶಕ್ಕೆ ಅವಕಾಶವಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಸಹ ಇವೆ ಎಂದು ಹೇಳಿದರು.

       ಮಹಿಳೆಯರಿಗೆ ಭಾರತೀಯರು ಕೊಟ್ಟಿರುವಷ್ಟು ಸ್ವಾತಂತ್ರ್ಯ, ಸಮಾನತೆಯನ್ನು ಜಗತ್ತಿನ ಯಾವ ರಾಷ್ಟ್ರಗಳು ಸಹ ಕಲ್ಪಿಸಿಲ್ಲ. ನಮ್ಮಲ್ಲಿ ಮಹಿಳಾ ಸಾಧ್ವಿಯರು, ಪೀಠಾಧಿಪತಿಗಳಿದ್ದಾರೆ. ಆದರೆ, ಬೇರೆ ಧರ್ಮಗಳಲ್ಲಿ ಮಹಿಳೆಗೆ ಪಾದ್ರಿಯಾಗುವ ಹಾಗೂ ಮೌಲ್ವಿಯಾಗುವ ಅವಕಾಶಗಳೇ ಇಲ್ಲ.

       ಶಬರಿಮಲೈಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‍ನ ತೀರ್ಪಿನಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಹೀಗಾಗಿ ಈ ತೀರ್ಪನ್ನು ಪುನರ್ ಪರಿಶೀಲಿಸಬೇಕು. ಹಾಗೂ ಇಂಥಹ ವಿಚಾರಣೆಗಳು ಕೋರ್ಟ್‍ಗಳ ಮುಂದೆ ಬಂದಂಥಹ ಸಂದರ್ಭದಲ್ಲಿ ಆಯಾ ಧಾರ್ಮಿಕ ಮುಖಂಡರಿಗೆ ಹಾಗೂ ಪಂಡಿತರಿಗೆ ಬಗೆಹರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

        ಸುಪ್ರೀಂ ಕೋರ್ಟ್‍ಗೆ ಸಮಾನತೆ ಕಲ್ಪಿಸುವ ಮನಸ್ಸಿದ್ದರೆ, ಸಮಾನ ನಾಗರೀಕ ಸಂಹಿತೆಯನ್ನು ಜಾರಿಗೆ ತರಲಿ. ಅದನ್ನು ಬಿಟ್ಟು ನಮ್ಮ ಆಚರಣೆಗಳ ಮೇಲೆ ಗದಾಪ್ರಹಾರ ನಡೆಸುವುದು ಒಳ್ಳೆಯದಲ್ಲ ಎಂದ ಅವರು, ಮುಸ್ಲಿಂ ಮಹಿಳೆಯರ ತಲ್ಲಾಕ್ ವಿಷಯದಲ್ಲಿ ಸುಗ್ರಿವಾಜ್ಞೆ ಜಾರಿ ಮಾಡಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲೂ ಸುಗ್ರಿವಾಜ್ಞೆಯನ್ನು ಹೊರಡಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇನೆಯ ಶ್ರೀಸಿದ್ಧಲಿಂಗ ಸ್ವಾಮೀಜಿ, ಗಂಗಾಧರ್ ಕುಲ್ಕರ್ಣಿ, ಮಹೇಶ್ ಕೊಪ್ಪ, ಮಹಾಲಿಂಗಪ್ಪ ಗುಂಜಗಾವಿ, ಪರಶುರಾಮ ನಡಮನಿ, ಪ್ರಶಾಂತ್ ಮತ್ತೂರ್, ಆನಂದಶೆಟ್ಟಿ ಅಡಿಯಾರ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap