ಹಾವೇರಿ

ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿಯ ವಿವರವನ್ನು ಮೂರುದಿನದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯರ್ಶಿಗಳು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀಮತಿ ವಿ.ಮಂಜುಳಾ ಅವರು ಸೂಚಿಸಿದರು.
ಅತಿವೃಷ್ಠಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಗಳ ಸಭೆ ಹಾಗೂ ತಾಲೂಕಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.ಯಾವುದೇ ಕ್ಷಣದಲ್ಲಿ ಕೇಂದ್ರ ಸರ್ಕಾರ ವರದಿ ಕೇಳಬಹುದು. ಕೇಂದ್ರ ತಂಡವು ತಪಾಸಣೆಗೆ ಬರಬಹುದು. ಹಾನಿಯ ವರದಿ ರಾಜ್ಯ ಸರ್ಕಾರದ ಬಳಿ ಸಿದ್ಧವಾಗಿರಬೇಕು. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಹಾನಿಯ ಪ್ರಮಾಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು.
ಟೀಮ್‍ಗಳನ್ನು ರಚಿಸಿಕೊಂಡು ಹಗಲುರಾತ್ರಿ ಎನ್ನದೆ ಕಾರ್ಯನಿರ್ವಹಿಸಿ, ತಪ್ಪು ಮಾಹಿತಿ ನೀಡಬೇಡಿ. ಉತ್ಪೇಕ್ಷಿತ ಅಂದಾಜುಮಾಡಬೇಡಿ, ಹಳೆಯ ಕಾಮಗಾರಿಗಳನ್ನು ಅತಿವೃಷ್ಠಿಯ ಕಾಮಗಾರಿಗಳಿಗೆ ಸೇರಿಸಬೇಡಿ. ಸ್ಥಳ ಪರಿಶೀಲನೆಮಾಡಿ ವಸ್ತುಸ್ಥಿತಿ ಹಾಗೂ ನಿಖರವಾದ ವರದಿ ಸಲ್ಲಿಸುವಂತೆ ಸೂಚಿಸಿದರು.
ವಿದ್ಯುತ್, ರಸ್ತೆ, ಸೇತುವೆ, ಕಟ್ಟಡ, ಕುಡಿಯುವ ನೀರು, ಕೆರೆ ಇತರ ಮೂಲಭೂತ ಸೌಕರ್ಯಗಳ ಹಾನಿಯ ಕುರಿತಂತೆ ವರದಿ ತಯಾರಿಸುವಾಗ ತಾತ್ಕಾಲಿಕ ಹಾಗೂ ಖಾಯಂ ದುರಸ್ಥಿ ಎಂದು ಪರಿಗಣಿಸಬೇಕು. ತಾತ್ಕಾಲಿಕವಾಗಿ ಸಂಪರ್ಕವನ್ನು ತ್ವರಿತಗತಿಯಲ್ಲಿ ಕಲ್ಪಿಸಬೇಕು. ಶಾಶ್ವತ ದುರಸ್ಥಿಯ ಕಾಮಗಾರಿಗಳ ವೆಚ್ಚದ ಕ್ರಿಯಾಯೋಜನೆಯನ್ನು ಆಯಾ ಇಲಾಖೆ ಮೂಲಕ ಅನುದಾನ ಪಡೆಯಬೇಕು. ಎನ್..ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪರಿಹಾರ ಪಡೆಯಬೇಕಾದ ವಿವರವನ್ನು ಪ್ರತ್ಯೇಕವಾಗಿ ತಯಾರಿಸಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಂಜನೀಯರಗಳಿಗೆ ಸೂಚಿಸಿದರು.
ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿ ಕುರಿತಂತೆ ವರದಿಯನ್ನು ಸಿದ್ಧಪಡಿಸಬೇಕು. ಒಂದೊಮ್ಮೆ ಮಳೆಯ ನೀರು ಹೊಲದಲ್ಲಿ ನಿಂತಿದ್ದರೆ ಬೆಳೆ ರಕ್ಷಣೆಗೆ ಕಾಲುವೆ ತೋಡುವುದು, ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದರೆ ತತ್ಷಣ ಪರ್ಯಾಯ ಬೆಳೆಗಳನ್ನು ಹಾಕುವ ಕುರಿತಂತೆ ರೈತರಿಗೆ ಮಾರ್ಗದರ್ಶನ ನೀಡಬೇಕು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೂರು ಹಂತದಲ್ಲಿ ಮನೆಹಾನಿ ಸರ್ವೇ ನಡೆಸಬೇಕಾಗಿದೆ. ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜನೀಯರಗಳ ತಂಡ ರಚಿಸಿ ಜಂಟಿ ಸಮೀಕ್ಷೆ ನಡೆಸಬೇಕು. ಎಲ್ಲ ಇಲಾಖೆಯ ಇಂಜನೀಯರಗಳನ್ನು ಮನೆ ಹಾನಿ ಸರ್ವೇ ಕೆಲಸಕ್ಕೆ ಬಳಸಿಕೊಂಡು ಕಾಲ ಮಿತಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು. ನೀರು ನಿಂತು ಮನೆ ಬೀಳದಿದ್ದರು ತಳಪಾಯ ಸಡಿಲಗೊಂಡಿದೆ ಎನ್ನುವುದಾರೆ ಇಂಜನೀಯರಗಳಿಂದ ಪರಿಶೀಲನೆ ಮಾಡಿ ಸುರಕ್ಷತೆ ಬಗ್ಗೆ ಖಾತ್ರಿಪಡಿಸಿಕೊಂಡು ಜನರಿಗೆ ಮನವರಿಕೆ ಮಾಡಿಕೊಡಬೇಕು.
ವಾಸಕ್ಕೆ ಯೋಗ್ಯವಾಗಿಲ್ಲದಿದ್ದರೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಮೂರು ದಿನಗಳಲ್ಲಿ ಹಾನಿಯ ನಿಖರ ಮಾಹಿತಿ ಸಂಗ್ರಹಿಸಿ ನಷ್ಟಕ್ಕೊಳಗಾದವರಿಗೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿತರಣೆ ಆರಂಭವಾಗಬೇಕು. ಮನೆ ಇಲ್ಲದೆ ಗುಡಿಸಲು ಹಾಕಿಕೊಂಡು ಮಳೆಯಿಂದ ಸಂತ್ರಸ್ಥರಾದ ಅಲೆಮಾರಿ ಹಾಗೂ ಡೊಂಬರ ಜನಾಂಗದವರಿಗೆ ನಿವೇಶನವಿದ್ದರೆ ರಾಜೀವಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಗುರುತಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
ನೆರೆ ಅತಿವೃಷ್ಠಿಯಿಂದ ಮರಣಹೊಂದಿರುವ ಜಾನುವಾರುಗಳು ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಿ ಎರಡು ದಿನದೊಳಗಾಗಿ ಪರಿಹಾರ ಹಣವನ್ನು ನೀಡಲು ಸೂಚನೆ ನೀಡಿದರು.ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಭಾಗಶಃ ಹಾನಿ ಹಾಗೂ ಪೂರ್ಣ ಹಾನಿಯ ವಿವರವನ್ನು ಪಡೆದ ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಪುನರ್ ಪರಿಶೀಲನೆಮಾಡಿ ವಸ್ತುಸ್ಥಿತಿಯ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
53 ಸಣ್ಣ ನೀರಾವರಿ ಹಾಗೂ 110 ಜಿಲ್ಲಾ ಪಂಚಾಯತ್ ಕೆರೆಗಳ ದಡ ಹಾನಿಯಾಗಿರುವ ವಿವರ ಪಡೆದ ಅಪರ ಮುಖ್ಯ ಕಾರ್ಯದರ್ಶಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮಳೆಗಾಲಕ್ಕೆ ಮುನ್ನ ಕೆರೆ ದಡಗಳನ್ನು ಪರಿಶೀಲನೆಮಾಡಿ ಭದ್ರಪಡಿಬೇಕಾಗಿತ್ತು. ಅವೈಜ್ಞಾನಿಕವಾದ ಕಾಮಗಾರಿಯಿಂದ ಕೆರೆಯಲ್ಲಿ ನೀರು ಇಲ್ಲದಿದ್ದರೂ ಕೆರೆ ದಂಡೆ ಒಡೆದಿವೆ. ಇನ್ನು ಮುಂದಾದರು ಮುಂಜಾಗ್ರತಾ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಮೊಬೈಲ್ ಟೀಮ್‍ಗಳನ್ನು ರಚಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆಗಳು ನಡೆಯಬೇಕು. ಗ್ರಾಮಗಳಿಗೆ ಶುದ್ಧ ನೀರನ್ನು ಪೂರೈಸಬೇಕು. ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಕ್ಲೋರಿನೇಷನ್ ಮಾಡಬೇಕು. ಪರಿಹಾರ ಕೇಂದ್ರಗಳಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸ್ಥಳವಕಾಶ, ಶೌಚಾಲಯ, ಶುದ್ಧ ಕುಡಿಯುವ ನೀರು, ನಿರಂತರ ಆರೋಗ್ಯ ತಪಾಸಣೆ, ಊಟ ಒದಗಿಸಬೇಕು. ಉಸ್ತುವಾರಿಗೆ ಗೆಜೆಟೆಡ್ ಅಧಿಕಾರಿಯೋರ್ವವನ್ನು ನೇಮಕಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಹಾನಿ ಕುರಿತಂತೆ ವಿವರವನ್ನು ನೀಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 22 ಗ್ರಾಮಗಳು ಜಲಾವೃತಗೊಂಡಿವೆ, 135 ಜಾನುವಾರುಗಳು ಜೀವಹಾನಿಯಾಗಿದೆ. 8823 ಮನೆಗಳು ಹಾನಿಯಾಗಿವೆ, 1,13,402 ಹೆಕ್ಟೇರ್ ಕೃಷಿ ಬೆಳೆ ಹಾಗೂ 11499.24 ತೋಟಗಾರಿಕೆ ಬೆಳೆ ಹಾನಿಯಾಗಿದೆ. 157 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಪೈಕಿ 32 ಪರಿಹಾರ ಕೇಂದ್ರಗಳು ಮುಂದುವರೆದಿವೆ.
5822 ಸಂಖ್ಯೆಯ ರಸ್ತೆ, ಸೇತುವೆ, ಬ್ರಿಜ್ಡ್, ಕೆರೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಕಂಬಗಳು ಸೇರಿದಂತೆ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 19 ಲಕ್ಷ ರೂ. ಸಿ.ಆರ್.ಎಫ್. ಅನುದಾನ ಲಭ್ಯವಿದೆ ಎಂದು ವಿವರಿಸಿದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
.
