ಬಳ್ಳಾರಿ
ಈಗಾಗಲೇ ತುಂಗಾ ಜಲಾಶಯದ ಇಂದಿನ ಹೊರ ಹರಿವು 70 ಸಾವಿರ ಕ್ಯೂಸೆಕ್ ಇದ್ದು, ತುಂಗಾ ಮೇಲ್ಬಾಗದಲ್ಲಿ ತುಂಬಾ ಮಳೆಯಾಗುತ್ತಿರುವುದರಿಂದ ಹೆಚ್ಚು ನೀರು ಜಲಾಶಯದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರು, ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗುರುತಿಸಲಾಗಿರುವ ತೀವ್ರ,ಮಧ್ಯಮ ಹಾಗೂ ಕಡಿಮೆ ಅಪಾಯದಲ್ಲಿರುವ ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ತಂಡಗಳು ತಕ್ಷಣ ಭೇಟಿ ನೀಡಿ ವಿಸ್ತøತ ವರದಿ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ತಹಸೀಲ್ದಾರರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ನೀರಿನಿಂದ ಹಾನಿಯಾಗಲಿದೆ.
ಈ ಸಂಬಂಧಪಟ್ಟ ತಾಲೂಕಿನಲ್ಲಿ ಜನರು, ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲು ತೀವ್ರ ಮತ್ತು ಮದ್ಯಮ ಹಾಗೂ ಕಡಿಮೆ ಅಪಾಯದಲ್ಲಿರುವ ಗ್ರಾಮಗಳನ್ನು ಗುರುತಿಸಿದ್ದು, ತೀವ್ರ ಮತ್ತು ಮದ್ಯಮ ಅಪಾಯದಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರರು, ಪಿ.ಎಸ್.ಐ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದ ಡಿಸಿ ನಕುಲ್ ಅವರು ಹರಪನಹಳ್ಳಿ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗುವ ಸಂಭವವಿರುವುದರಿಂದ ಅಗ್ನಿ ಶಾಮಕ ದಳವು ತುರ್ತಾಗಿ ರಬ್ಬರ್ ಬೋಟ್ ಹಾಗೂ ಇತರೆ ಸಾಮಾಗ್ರಿಗಳೊಂದಿಗೆ ಹರಪನಹಳ್ಳಿಗೆ ತೆರಳಲು ಸೂಚಿದರು.
32 ಕಾಳಜಿ ಕೇಂದ್ರಗಳ ಗುರುತು;
ಕೊರೊನಾ ಸೊಂಕಿತರಿಗೆ ಪ್ರತ್ಯೇಕ ಕೇಂದ್ರದಲ್ಲಿ ವ್ಯವಸ್ಥೆ: ಜಿಲ್ಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಎರಡು ಭಾಗಗಳಾಗಿ ಮಾಡಲಾಗಿದ್ದು, ಜಿಲ್ಲೆಯಲ್ಲಿ 32 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಎಸ್.ಡಿ.ಆರ್.ಎಫ್ ನಡಿ ಒದಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದರಿಂದ ಕಾಳಜಿ ಕೇಂದ್ರದಲ್ಲಿ ಕೊರೊನಾ ಲಕ್ಷಣಗಳಿರುವವರನ್ನು ಪ್ರತ್ಯೇಕವಾಗಿ ಈಗಾಗಲೇ ಗುರುತಿಸಿದ ಕಾಳಜಿ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಡಿಸಿ ನಕುಲ್ ಸೂಚನೆ ನೀಡಿದರು.
ಈಗಾಗಲೇ ಗುರುತಿಸಲಾಗಿರುವ ಕಾಳಜಿ ಕೇಂದ್ರಗಳಿಗೆ ಅಗತ್ಯ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ನದಿ ಪಾತ್ರದ ಗ್ರಾಮಗಳ ಜನರಿಗೆ ಶೀಘ್ರ
ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ: ನದಿ ಪಾತ್ರದ ಗ್ರಾಮಗಳಿಗೆ ನೀರಿನಿಂದ ಹಾನಿಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿಯಿಂದ ಡಂಗೂರ ಸಾರಿಸುವುದು, ಟಂಟಂ ಮಾಡಿಸುವಂತೆ ಡಿಸಿ ನಕುಲ್ ಸೂಚನೆ ನೀಡಿದರು.
ನದಿ ಪಾತ್ರದ ಗ್ರಾಮಗಳಲ್ಲಿ ಅತೀ ಸೂಕ್ಷ್ಮ ವಲಯಗಳಲ್ಲಿರುವ ಜನರು, ಜಾನುವಾರುಗಳನ್ನು ಅದಷ್ಟು ಬೇಗ ಮುಂಚಿತವಾಗಿಯೇ ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ತುಂಗಾಭದ್ರಾ ನದಿ ಪಾತ್ರದಲ್ಲಿರುವ ಅಪಾಯಕ್ಕೆ ಒಳಪಡುವ 32 ಗ್ರಾಮಗಳು:
ತುಂಗಾದಿಂದ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಅದೇ ರೀತಿ ಭದ್ರಾದಿಂದಲೂ ನೀರು ಬಿಡುವ ಸಾಧ್ಯತೆ ಇದೆ. ಈ ಎರಡು ನದಿಗಳ ಪಾತ್ರದಲ್ಲಿರುವ 32 ಗ್ರಾಮಗಳ ಜನರಿಗೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿದೆ.
ಹಡಗಲಿ ತಾಲೂಕಿನ 16 ಗ್ರಾಮಗಳಾದ ನವಲಿ ಗ್ರಾಪಂ ವ್ಯಾಪ್ತಿಯ ಅಲ್ಲಿಪುರ, ರಾಜವಾಳ,ನವಲಿ, ಹೊನ್ನೂರು.ಕೊಂಬಳಿ ಗ್ರಾಪಂನ ಪುರ ಮತ್ತು ಮಾದಲಗಟ್ಟಿ, ಮಾಗಳ ಗ್ರಾಪಂನ ಮಾಗಳ,ಬಿರಬ್ಬಿ ಗ್ರಾಪಂ ವ್ಯಾಪ್ತಿಯ ಅಂಗೂರು, ಮಕರಬ್ಬಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ, ಬ್ಯಾಲಹುಣಸಿ,ಹಿರೆಬನ್ನಿಮಟ್ಟಿ,ಮಕರಬ್ಬಿ,ಕುರವತ್ತಿ ಗ್ರಾಪಂನ ಕುರವತ್ತಿ,ಲಿಂಗನಾಯನಕನಹಳ್ಳಿ,ಹರವಿ,ಹರವಿಬಸಾಪುರ. ಹರಪನಳ್ಳಿ ತಾಲೂಕಿನ ಹಲವಾಗಲು ಗ್ರಾಪಂ ವ್ಯಾಪ್ತಿಯ ಹಲವಾಗಲು,ಗರ್ಭಗುಡಿ, ಕಡತಿ ಗ್ರಾಪಂನ ಕಡತಿ. ಸಿರಗುಪ್ಪ ತಾಲೂಕಿನ ಭಾಗೇವಾಡಿ ಗ್ರಾಪಂ ವ್ಯಾಪ್ತಿಯ ಭಾಗೇವಾಡಿ,ಬೃಂದಾವನ ಕ್ಯಾಂಪ್,ಕುಡದರಹಾಳು ಗ್ರಾಪಂನ ಕುಡದರಹಾಳು,ಶ್ರೀಧರದೊಡ್ಡಿ, ಹಚ್ಚೊಳ್ಳಿ ಗ್ರಾಪಂ ವ್ಯಾಪ್ತಿಯ ಹಚ್ಚೊಳ್ಳಿ,ಹೊನ್ನರಹಳ್ಳಿ,ಚಿಕ್ಕಬಳ್ಳಾರಿ,ಚಲ್ಲಕುದಲೂರು,ಹೊಟ್ಟುಮುರಣಿ,ಬಿರಳ್ಳಿ ಗ್ರಾಪಂನ ಕೊಟ್ಟಲಚಿಂತೆ, ಕಂಪ್ಲಿ ತಾಲೂಕಿನ ಕಂಪ್ಲಿ ಪಟ್ಟಣ, ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿ,ಹೊಸುರ.
ಶಿಬಿರಗಳಲ್ಲಿ ಜಾನುವಾರಗಳ ವ್ಯವಸ್ಥೆ:
ಪ್ರವಾಹ ಸಂದರ್ಭದಲ್ಲಿ ಹಡಗಲಿ ತಾಲೂಕಿನಲ್ಲಿ ನವಲಿ,ಕೊಂಬಳಿ, ಮಾಗಳ,ಬಿರಬ್ಬಿ,ಮಕರಬ್ಬಿ,ಕುರವತ್ತಿ ಹರಪನಳ್ಳಿ ತಾಲೂಕಿನಲ್ಲಿ ಹಲವಾಗಲು ಮೊರಾರ್ಜಿದೇಸಾಯಿ ವಸತಿ ಶಾಲೆ ಆವರಣ, ವಟ್ಟಳ್ಳಿ ಪ್ರಾಥಮಿಕ ಶಾಲೆ ಆವರಣ,ಸಿರಗುಪ್ಪ ತಾಲೂಕಿನಲ್ಲಿ ಭಾಗೇವಾಡಿ,ಕುಡದರಹಾಳು,ಹಚ್ಚೊಳ್ಳಿ, ಬಿರಳ್ಳಿ,ಕಂಪ್ಲಿಯ ಎಪಿಎಂಸಿ, ಹೊಸಪೇಟೆ ತಾಲೂಕಿನಲ್ಲಿ ಬಸವಣ್ಣ ಮಂದಿರ,ಹೊಸುರಿನ ಹೊಸೂರಮ್ಮ ಮಂದಿರದ ಹಿಂಭಾಗದಲ್ಲಿ ತಾತ್ಕಾಲಿಕವಾಗಿ ಜಾನುವಾರುಗಳ ಶಿಬಿರಕ್ಕೆ ವ್ಯವಸ್ಥೆ ಮಾಡಲಾಗಿದೆ
ಈ ಜಾನುವಾರುಗಳ ಶಿಬಿರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಾನುವಾರುಗಳಿಗೆ ಬೇಕಾಗುವ ಮೇವು ಕೂಡ ಆಯಾ ಸ್ಥಳಗಳಲ್ಲಿ ಸ್ಟಾಕ್ ಮಾಡಲಾಗಿದೆ ಎಂದು ಡಿಸಿ ನಕುಲ್ ತಿಳಿಸಿದರು. ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅನೇಕ ಮುಂಜಾಗ್ರತಾ ಕ್ರಮಗಳನ್ನು ಡಿಸಿ ನಕುಲ್ ಅವರು ತಹಸೀಲ್ದಾರರು,ತಾಪಂ ಇಒಗಳು,ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.ಜಿಪಂ ಸಿಇಒ ಕೆ.ನಿತೀಶ್ ಅವರು ಕೂಡ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ