ಪಾವಗಡ
ಸರ್ಕಾರಿ ನೌಕರರು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಯಾವುದೇ ಲಂಚ ಪಡೆಯದೇ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಸರ್ಕಲ್ ಇನಸ್ಪೆಕ್ಟರ್ ಹಾಲಪ್ಪ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ತಾ.ಪಂ. ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು- ಕೊರತೆಗಳ ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಪಿ.ಡಿ.ಓ.ಗಳನ್ನು ಕುರಿತು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರಕಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಮೇಲೆ ನಿಗಾ ವಹಿಸಿ, ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ತಾಲ್ಲೂಕಿನಲ್ಲಿ ಸರ್ವೇ ಇಲಾಖೆ, ಕೃಷಿ ಇಲಾಖೆ ಹಾಗೂ ಅಬಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳನ್ನು ಸಾರ್ವಜನಿಕರು ತುಮಕೂರು ಜಿಲ್ಲಾ ಕಚೇರಿಗೆ ಸಲ್ಲಿಸಿದ್ದಾರೆ. ಗ್ರಾ.ಪ.ಗಳ ಪಿಡಿಓ ಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಪ್ರತಿಯೊಂದಕ್ಕೂ ಲಂಚದ ಬೇಡಿಕೆ ಇಡುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಬೆಸ್ಕಾಂ ಇಲಾಖೆಯಿಂದ ಟಿ.ಸಿ.ಗಳ ಬದಲಾವಣೆಗೆ ಲಂಚ ಪಡೆಯುತ್ತಾರೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಜಿಲ್ಲಾ ಎಸಿಪಿ ಅಧಿಕಾರಿಗಳು ಮತ್ತೊಮ್ಮೆ ಪಾವಗಡ ತಾಲ್ಲೂಕಿಗೆ ಆಗಮಿಸಿ ದೂರುಗಳನ್ನು ಅಲಿಸುತ್ತಾರೆ ಎಂದರು.
ನಂತರ ಅಧಿಕಾರಿಗಳನ್ನು ಸಭೆಯಿಂದ ತೆರಳುವಂತೆ ಸೂಚಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸದರು.ಕೇವಲ ಮೂರು ದೂರುಗಳು ಮಾತ್ರ ಸಲ್ಲಿಕೆಯಾದವು.
ತಾಲ್ಲೂಕಿನ ಸಿ.ಕೆ.ಪುರ ಗ್ರಾ.ಪಂ. ನಲ್ಲಿ ಖಾತೆ ಬದಲಾವಣೆ ವಿಚಾರವಾಗಿ ನರಸಣ್ಣ, ಅಕ್ರಮ ಮದ್ಯಮಾರಾಟ ನಿಲ್ಲಿಸುವಂತೆ ಅಬಕಾರಿ ಇಲಾಖೆಗೆ ಸಂಬಂಧಿಸಿ, ಪಾಳ್ಳೆಗಾರ ಲೋಕೇಶ್ ಮತ್ತು ಮೋಹನ್ ಎಂಬುವರು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಇಲಾಖೆಯಲ್ಲಿ ಕೊಟ್ಯಂತರ ರೂ.ಗಳ ಅವ್ಯವಹಾರ ಎಸಗಲಾಗಿದೆ ಎಂದು ದೂರನ್ನು ಸಲ್ಲಿಸಿದರು.ಪ್ರಚಾರದ ಕೊರತೆಯಿಂದ ದೂರುಗಳನ್ನು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ. ಮುಂದಿನ ಸಲ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ಪತ್ರಕರ್ತರು ಹಾಲಪ್ಪರ ಗಮನಕ್ಕೆ ತಂದರು.
ತಹಸೀಲ್ದಾರ್ ವರದರಾಜು, ಇ.ಒ. ನರಸಿಂಹಮೂರ್ತಿ, ಜಿಪಂ ಎ.ಇ.ಇ. ಈಶ್ವರಪ್ಪ, ಲೋಕೋಪಯೋಗಿ ಇಲಾಖೆಯ ಎ.ಇ.ಇ. ವಿಜಯಕುಮಾರ್, ಸಿ.ಡಿ.ಪಿ.ಒ. ಶಿವಕುಮಾರಯ್ಯ, ಕೃಷಿ ಇಲಾಖೆಯ ಪ್ರವೀಣ್, ಸಮಾಜಕಲ್ಯಾಣ ಇಲಾಖಾಧಿಕಾರಿ ಶಿವಣ್ಣ, ಬಿ.ಸಿ.ಎಂ. ನ ಸುಬ್ಬರಾಯ, ಎಸ್.ಟಿ. ಇಲಾಖೆಯ ದಿವಾಕರ್, ತಾ.ಪಂ. ಎ.ಡಿ.ರಂಗನಾಥ್, ಎ.ಇ.ಇ. ಅನಿಲ್‍ಕುಮಾರ್, ಪಿ.ಡಿ.ಓ.ಗಳಾದ ದಾದಲೂರಪ್ಪ, ಶ್ರೀರಾಂನಾಯ್ಕ, ಕಿಶೋರ್ ಲಾಲ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ