ಸಾರಿಗೆ ಮುಷ್ಕರ : ಕರ್ತವ್ಯಕ್ಕೆ ಹಾಜರಾಗುತ್ತಿರುವ ಸಿಬ್ಬಂದಿ

ತುಮಕೂರು : 

      ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮುಷ್ಕರ ಆರಂಭವಾಗಿ ಇಂದಿಗೆ 12 ದಿನ. ಆರಂಭದಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಆದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಸ್‍ಗಳ ಕೊರತೆ ಉಂಟಾಗಿ ನಗರಗಳಲ್ಲಿರುವ ಜನ ತಮ್ಮ ಊರುಗಳಿಗೆ ಮರಳಲು ಬಹಳ ತೊಂದರೆ ಎದುರಾಯಿತು. ಖಾಸಗಿ ಬಸ್ ಅಥವಾ ದ್ವಿಚಕ್ರ ವಾಹನಗಳನ್ನು ಆಶ್ರಯಿಸಿ ಊರಿಗೆ ಮರಳಿದರು. ಆ ಸಂದರ್ಭದಲ್ಲಿ ಸಾರಿಗೆ ಮುಷ್ಕರದ ವಿರುದ್ಧ ಜನಸಾಮಾನ್ಯರಲ್ಲಿ ಅಸಮಾಧಾನ ಹೊರಹೊಮ್ಮಿತು.

      ಇದಾದ ನಂತರ ರಾಜ್ಯ ವ್ಯಾಪಿ ಚರ್ಚೆಗಳು ಆರಂಭವಾಗಿವೆ. ಹೀಗೆ ಅನಿಯಮಿತವಾಗಿ ಬಸ್‍ಗಳನ್ನು ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶವೇ ಪ್ರಮುಖವಾಗಿದ್ದು, ನೌಕರರ ಬೇಡಿಕೆಗಳನ್ನು ನ್ಯಾಯೋಚಿತವಾಗಿ ಈಡೇರಿಸಿಕೊಳ್ಳಲಾಗುತ್ತಿಲ್ಲವೇಕೆ? ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೀಗೆ ಪಟ್ಟು ಹಿಡಿದು ಕುಳಿತುಕೊಳ್ಳುವುದು ಸರಿಯೇ ಎಂಬ ಅಸಮಾಧಾನದ ನುಡಿಗಳು ಅಲ್ಲಲ್ಲಿ ಕೇಳಿಬರುತ್ತಿವೆ.

      ಮುಷ್ಕರನಿರತ ಸಿಬ್ಬಂದಿ ಹಾಗೂ ಕುಟುಂಬಸ್ಥರು ಹೇಳುವ ವಿಷಯವೆಂದರೆ ಸಮಯದ ನಿಗದಿ ಇಲ್ಲದೆ ವಿಪರೀತ ದುಡಿಸಿಕೊಳ್ಳುವ ನಮ್ಮನ್ನು ಕನಿಷ್ಠ ಮನುಷ್ಯರಂತೆ ಕಾಣಬೇಕಲ್ಲವೆ? ಇತರೆ ನೌಕರರಿಗೆ ಸಿಗುವ ಸವಲತ್ತುಗಳು ಅದಕ್ಕಿಂತ ಮುಖ್ಯವಾಗಿ ಬೇಡಿಕೆಗಳನ್ನು ಈಡೇರಿಸಬೇಕಾದ್ದು ಸರ್ಕಾರದ ಕರ್ತವ್ಯವಲ್ಲವೆ ಎಂದು ಪ್ರಶ್ನಿಸುತ್ತಾರೆ.

      ಸಿಬ್ಬಂದಿ ನೌಕರರ ಈ ಬೇಡಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಕರಾರಿಲ್ಲ. ಸಾರಿಗೆ ಸಂಸ್ಥೆಯ ಇತರೆ ಸಂಘಟನೆಗಳಲ್ಲಿಯೂ ಅಪಸ್ವರವಿಲ್ಲ. ಆದರೆ ಮುಷ್ಕರ ನಡೆಸುತ್ತಿರುವ ರೀತಿಯ ಬಗ್ಗೆ ಒಳಂದೊಳಗೆ ಅಸಮಾಧನವಿದೆ. ಇದನ್ನರಿತಿರುವ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಆರಂಭಿಸಿದ್ದು, ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಬದಲಾಗಿ ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಾಜ್ಯಾದ್ಯಂತ ಸಾವಿರಾರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಬಹಳಷ್ಟು ಕಡೆ ವಜಾ ಮಾಡಲಾಗಿದೆ.

ಸರ್ಕಾರದ ಈ ಕಾನೂನು ಕ್ರಮಗಳಿಗೆ ಹೆದರಿ ನೌಕರರು ಹಾಜರಾಗತೊಡಗಿದ್ದಾರೆ. ನೌಕರ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲದಿರುವುದು, ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ಬೇಡಿಕೆಗಳಿಗೆ ಸೊಪ್ಪು ಹಾಕದಿರುವುದು ಇದನ್ನೇ ಮಾನದಂಡವಾಗಿಟ್ಟುಕೊಂಡು ಖಾಸಗಿ ಬಸ್‍ಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಪರಿಣಮಿಸುತ್ತಿದ್ದು, ಮುಷ್ಕರನಿರತ ನೌಕರ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿ ಇರುವುದು ಕಂಡುಬರುತ್ತಿದೆ. ಸರ್ಕಾರ ಮುಷ್ಕರನಿರತರ ಜೊತೆ ಮಾತನಾಡಿ ಇದಕ್ಕೊಂದು ಅಂತ್ಯ ಹಾಡುವ, ಮುಷ್ಕರನಿರತ ಮುಖಂಡರೂ ಸಹ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ಒಂದಷ್ಟು ಎಚ್ಚರಿಕೆ ಹಾಗೂ ಗಡುವು ನೀಡುವ ಯಾವುದಾದರೊಂದು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅಗತ್ಯತೆ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap