ಕಟ್ಟುಪಾಡು ಬಿಟ್ಟು ಬಿತ್ತನೆ ಬೀಜ ವಿತರಣೆಗೆ ಆಗ್ರಹ

 ದಾವಣಗೆರೆ:

      ಸರ್ಕಾರ ವಿಧಿಸಿರುವ ಕೆಲ ಕಟ್ಟುಪಾಡುಗಳನ್ನು ರದ್ದುಗೊಳಿಸಿ, ರೈತರಿಗೆ ತತಕ್ಷಣವೇ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೈಕ್ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

     ಇಲ್ಲಿನ ಜಯದೇವ ವೃತ್ತದಿಂದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ಹೊರಟ ಪ್ರತಿಭಟನಾಕಾರರು, ಹಲವೆಡೆ ಸಂಚರಿಸಿ, ತಹಶೀಲ್ದಾರ್ ಕಚೆರಿಗೆ ತೆರಳಿ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಈಗಾಗಲೇ ರೈತರು ಬಿತ್ತನೆಗಾಗಿ ಜಮೀನು ಹದ ಮಾಡಿಕೊಂಡಿದ್ದಾರೆ. ಬಿತ್ತನೆಗಾಗಿ ಮಳೆ ಬರುವುದನ್ನೇ ಕಾದು ಕುಳಿತಿದ್ದಾರೆ. ಇನ್ನೊಂದು ವಾರದೊಳಗೆ ಬಿತ್ತನೆ ಮಾಡುವ ಸಾಧ್ಯತೆ ಇದೆ. ಆದರೆ, ಸಬ್ಸಿಡಿ ಬಿತ್ತನೆ ಬೀಜ ನೀಡಲು ಪಹಣಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲಿಸುವಂತೆ ಕಟ್ಟುಪಾಡು ವಿಧಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಸಣ್ಣ, ಅತಿ ಸಣ್ಣ ರೈತರಿಗೆ, ಬಡ, ಅನಕ್ಷರಸ್ಥ ರೈತರು ಆ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಆನ್‍ಲೈನ್ ಮೂಲಕ ದಾಖಲೆ ಸಲ್ಲಿಸಲು ಸಾಕಷ್ಟು ತೊಂದರೆಯಾಗಲಿದೆ. ಅಲ್ಲದೇ, ಈವರೆಗೂ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಉಳುಮೆ ಮಾಡುವ ರೈತರಿಗೆ ಪಹಣಿಯೇ ಬಂದಿಲ್ಲ. ವಾಸ್ತವ ಹೀಗಿರುವ ಇಂತಹ ಕಟ್ಟುಪಾಡುಗಳು ಎಷ್ಟು ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

     ಹೊಲದಲ್ಲಿ ಬಿತ್ತನೆಗೆ ಸಜ್ಜು ಮಾಡಿಕೊಳ್ಳಬೇಕಾದ ರೈತರು ಹಳ್ಳಿ ಬಿಟ್ಟು ಬಿಟ್ಟು ಬಂದು ಆನ್ ಲೈನ್‍ನಲ್ಲಿ ದಾಖಲೆ ಸಲ್ಲಿಸಲು ನಗರ, ಪಟ್ಟಣ ಪ್ರದೇಶದಲ್ಲಿ ಅಲೆದಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಹೀಗೆ ಕಟ್ಟುಪಾಡು ವಿಧಿಸುವ ಮೂಲಕ ಬಡ, ಸಣ್ಣ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬಾರದು. ಬಿತ್ತನೆ ಬೀಜ, ರಸಗೊಬ್ಬರ ಪಡೆಯಲು ವಿಧಿಸಿರುವ ಕಟ್ಟುಪಾಡುಗಳನ್ನು ತಕ್ಷಣವೇ ರದ್ದು ಪಡಿಸಿ, ರೈತರಿಗೆ ತತಕ್ಷಣವೇ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ, ಕಾರ್ಯದರ್ಶಿ ಕೋಲ್ಕುಂಟೆ ಬಿ.ಬಸಣ್ಣ, ಕೈದಾಳೆ ರವಿಕುಮಾರ, ಕೈದಾಳೆ ವಸಂತಕುಮಾರ, ಕುಕ್ಕವಾಡ ಜಿ.ಬಿ.ಪರಮೇಶ, ಕಾಡಜ್ಜಿ ಪ್ರಕಾಶ, ಆಲೂರು ಪರಶುರಾಂ, ಹುಚ್ಚವ್ವನಹಳ್ಳಿ ಪ್ರಕಾಶ, ಭಗತ್ ಸಿಂಹ, ಹೂವಿನಮಡು ಸಿ.ನಾಗರಾಜ, ಎಂ.ಸಿ.ಕೃಷ್ಣಮೂರ್ತಿ, ಕೋಲ್ಕುಂಟೆ ಹುಚ್ಚೆಂಗೆಪ್ಪ, ಎರವನಾಯ್ಕನಹಳ್ಳಿ ರುದ್ರಣ್ಣ, ಕೆಂಚಮ್ಮನಹಳ್ಳಿ ಹನುಮಂತ, ಕುರ್ಕಿ ಹನುಮಂತಪ್ಪ, ಗುಮ್ಮನೂರು ರುದ್ರೇಶ, ಬೇವಿನಹಳ್ಳಿ ರವಿ, ತುಂಬಿಗೆರೆ ವಿಜಯಕುಮಾರ, ತುಂಬಿಗೆರೆ ಕೆಂಚವೀರಪ್ಪ, ಕಾಡಜ್ಜಿ ಪ್ರಭು, ಗಂಗಾಧರ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap