ಗುಬ್ಬಿ
ಕೇಂದ್ರದ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಪ್ರಸಕ್ತ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು, ಈ ಹಿಂದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾಡಿರುವ ಸಾಧನೆಗಳನ್ನು ಕ್ಷೇತ್ರದ ಮತದಾರರು ಪರಿಗಣಿಸಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ತಿಳಿಸಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಮಹತ್ತರವಾದುದಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಎಲ್ಲಾ ಹಿಂದುಳಿದ ವರ್ಗದ ಸಮುದಾಯಗಳಿಗೆ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಇನ್ನೂ 5 ವರ್ಷಗಳು ಬಿಜೆಪಿಗೆ ಅಧಿಕಾರ ನೀಡಿದಲ್ಲಿ ಖಂಡಿತವಾಗಿ ವಿಶ್ವದ ಪ್ರಮುಖ ದೇಶದಲ್ಲಿ ಒಂದಾಗಿ ಭಾರತ ಬೆಳೆಯುತ್ತದೆ. ಹಾಗಾಗಿ ಹಿಂದುಳಿದ ಸಮುದಾಯದ ಬಾಂಧವರು ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದ ಅವರು, ಜಿ.ಎಸ್.ಬಸವರಾಜು ಸ್ಥಳೀಯವಾಗಿ ಸಿಗುತ್ತಾರೆ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಆದ್ದರಿಂದ ಮತದಾರರು ಬಿಜೆಪಿಗೆ ಮತನೀಡುವ ಮೂಲಕ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಿಕೆ ಬಂದರೆ ಜಿಲ್ಲೆಯನ್ನು ಮತ್ತಷ್ಟು ಅಭಿವೃಧ್ದಿ ಪಥದತ್ತ ಕೊಂಡೊಯ್ಯುವುದಾಗಿ ತಿಳಿಸಿದ ಅವರು ಕ್ಷೇತ್ರದ ಮತದಾರರು ದೇಶದ ಅಭಿವೃದ್ಧಿಯ ಜೊತೆಗೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಜಿಲ್ಲೆಯ ಎಲ್ಲಾ ವರ್ಗದ ಹಿಂದುಳಿದ ಸಮುದಾಯಗಳು ಬಿಜೆಪಿ ಪರವಾಗಿದ್ದು ನೂರಕ್ಕೆ ನೂರು ಬಿಜೆಪಿಗೆ ಮತ ನೀಡುವ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಅ.ನಾ.ಲಿಂಗಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಹೆಚ್.ಜಗನ್ನಾಥ್, ಜಿ.ರಾಮಾಂಜಿನಯ್ಯ, ಡಾ:ನವ್ಯಬಾಬು, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ.ಆರ್.ಶಿವಕುಮಾರ್. ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ರಾಜೇಶ್ವರಿ, ಜಯಲಕ್ಷ್ಮೀ ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಪಿ.ಬಿ.ಚಂದ್ರಶೇಖರ್ ಬಾಬು, ಎಸ್.ವಿಜಯಕುಮಾರ್, ಎಸ್.ನಂಜೇಗೌಡ, ಜಿ.ಚಂದ್ರಶೇಖರ್, ಕೆ.ಬಿ.ಕೃಷ್ಣಪ್ಪ, ಬಿ.ಎಸ್.ಚಂದ್ರಮೌಳಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.