ಕುಣಿಗಲ್
ಕೊರೋನಾ ವೈರಾಣು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ ಭಾನುವಾರದ ಲಾಕ್‍ಡೌನ್‍ಗೆ ಕುಣಿಗಲ್ ತಾಲ್ಲೂಕಿನಾದ್ಯಂತ ನಾಗರಿಕರು ಸಹಕರಿಸುವ ಮೂಲಕ ಬಂದ್ ಯಶಸ್ವಿಯಾಗಿದೆ.
ಪಟ್ಟಣದ ಗ್ರಾಮದೇವತೆ ವೃತ್ತದಲ್ಲಿ ಈ ಹಿಂದೆಯೇ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿದ್ದ ಸ್ಥಳದಲ್ಲಿ ನಾಲ್ಕೈದು ಸಿಬ್ಬಂದಿ ವಾಹನಗಳನ್ನು ಪರಿಶೀಲಿಸುವುದರ ಜೊತೆಗೆ ಓಡಾಡುತ್ತಿದ್ದ ಹಲವು ನಾಗರಿಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ಕಳೆದೆರಡು ತಿಂಗಳಿಂದಲೂ ಲಾಕ್‍ಡೌನ್ ಅಭ್ಯಾಸವಾಗಿರುವುದರ ಪರಿಣಾಮ ತಾಲ್ಲೂಕಿನ ಜನರು ಭಾನುವಾರದ ಲಾಕ್ಡೌನ್ ಗೊತ್ತಾಗುತ್ತಿದ್ದಂತೆ ಎಚ್ಚರಿಕೆ ವಹಿಸಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಮೊದಲೇ ಶೇಖರಿಸಿಕೊಂಡ ಹಿನ್ನೆಲೆಯಲ್ಲಿ, ಇಲ್ಲಿ ಬಹುತೇಕ ಮೆಡಿಕಲ್ ಸ್ಟೋರ್ಸ್ ನವರು ಸೇರಿದಂತೆ ದಿನಸಿ ಅಂಗಡಿಗಳು ಸ್ವಯಂ ಪ್ರೇರಿತರಾಗಿ ಮುಚ್ಚಿದ್ದರು. ಪಟ್ಟಣದಲ್ಲಿ ಬೆಳಗ್ಗೆ ಎಂದಿನಂತೆ ಹಾಲು, ಕೆಲವು ದಿನಸಿ, ಮೆಡಿಕಲ್ಸ್ ಮತ್ತು ಮಾಂಸದಂಗಡಿಗಳು ತೆರೆದಿದ್ದವು.
ಇನ್ನುಳಿದ ಮದ್ಯದಂಗಡಿಗಳು ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಂದ್ ಆಗಿದ್ದವು. ಇದೇ ರೀತಿ ಹುಲಿಯೂರುದುರ್ಗ, ಅಮೃತೂರು ಮತ್ತು ಎಡೆಯೂರಿನಲ್ಲಿಯೂ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿತ್ತು. ಇನ್ನೂ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು, ವಾಹನಗಳ ದಟ್ಟಣೆ ಇಲ್ಲದೆ ಸ್ತಬ್ದವಾಗಿತ್ತು. ಕೆಲವೊಂದು ಕಡೆ ಮಾತ್ರ ದ್ವಿಚಕ್ರವಾಹಸನದಲ್ಲಿ ಅತ್ಯಗತ್ಯ ವಸ್ತುಗಳಿಗೆ ಮಾತ್ರ ಸಂಚಾರದಲ್ಲಿ ಜನರು ತೊಡಗಿದ್ದರು. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳ ನಿತ್ಯ ಕೆಲಸದಲ್ಲಿ ತೊಡಗಿದ್ದರು. ತಾಲ್ಲೂಕಿನ ವಿವಿಧೆಡೆ ಸಂಜೆ ಗುಡುಗು ಮಿಂಚಿನ ಮಳೆ ಆಗುವ ಮೂಲಕ ತಂಪೆರೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
