ದಾವಣಗೆರೆ
ನಾನು ವೀರಶೈವ-ಲಿಂಗಾಯತ ಪದ ಬಳಸಿಯೇ ಇಲ್ಲ. ಯಾವ ಸಮುದಾಯದ ಅವಹೇಳನ ಮಾಡಿಲ್ಲ. ಹೀಗಾಗಿ ಯಾರ ಗೊಡ್ಡು ಬೆದರಿಕೆಗೆ ಸೊಪ್ಪು ಹಾಕುವುದು ಇಲ್ಲ. ಸ್ವಾಭಿಮಾನ ಬಿಟ್ಟು ಕ್ಷಮೆಯೂ ಕೇಳುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಅಕ್ಷಮ್ಯ ಅಪರಾಧ ಮಾಡಿಲ್ಲ. ಆದರೂ ಕೆಲವರು ಕ್ಷಮೆ ಕೇಳುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ಕೆಲವರು ದೂರವಾಣಿ ಕರೆ ಮಾಡುವ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿಯೂ ಬೆದರಿಕೆ ಹಾಕುತ್ತಿದ್ದಾರೆ. ನಿನ್ನೆ ಕೆಲವರು ನನ್ನ ಶಿಕ್ಷಣ ಸಂಸ್ಥೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೆಳವನೂರಿನಲ್ಲಿರುವ ನನ್ನ ಶಾಲೆಯ ಬಳಿ 50 ಜನರ ಗುಂಪು ಹುಡುಕಿಕೊಂಡು ಹೋಗಿದೆ. ನಾನು ತಪ್ಪು ಮಾಡದ ಕಾರಣಕ್ಕೆ ಈ ಯಾವ ಗೊಡ್ಡ ಬೆದರಿಕೆ ಹೆದರಲ್ಲ ಹಾಗೂ ಸ್ವಾಭಿಮಾನ ಬಿಟ್ಟು ಕ್ಷಮೆಯೂ ಕೇಳುವುದಿಲ್ಲ ಎಂದು ಪುನರ್ ಉಚ್ಚರಿಸಿದರು.
ನಾನು ಮಿಸ್ಟರ್ ಫರಫೆಕ್ಟ್, ಯಾವ ತಪ್ಪು ಮಾಡಿಲ್ಲ ಎಂದ ಅವರು, ಈಶ್ವರ ಯಾವುದೇ ಜಾತಿಗೆ ಸೇರಿದವನಲ್ಲ. ನನ್ನ ಮನೆಯಲ್ಲಿ ಈಗಲೂ ನಾನು ಈಶ್ವರ ಪೂಜೆ ನಡೆಸುತ್ತೇನೆ. ಅವರು 50 ಬಾರಿ ಬಂದು ಗೋಷ್ಠಿ ನಡೆಸಿ ಕ್ಷಮೆ ಕೇಳುವಂತೆ ಆಗ್ರಹಿಸಿದರೂ ನಾನು ಕ್ಷಮೆ ಕೇಳುವವನಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ದನಿ ಅಡಗಿಸುವ ಹುನ್ನಾರ ನಡೆಸಿವೆ. ನನ್ನ ಧ್ವನಿ ಸ್ಥಗಿತವಾದರೂ ಪರವಾಗಿಲ್ಲ. ಇನ್ನೂ ಸಾವಿರಾರು ಧ್ವನಿಗಳು ಮೊಳಗಲಿವೆ ಎಂದರು.
ಪ್ರೊ. ಕೃಷ್ಣಪ್ಪ ಅವರ ಹೇಳಿದಂತೆ ಯಾವುದೇ ವ್ಯಕ್ತಿಯನ್ನು ಅನೇಕರು ತೆಗಳುತ್ತಿದ್ದಾರೆ ಎಂದರೆ ಆ ವ್ಯಕ್ತಿ ಸರಿ ಇದ್ದಾನೆಂದು ಅರ್ಥ. ಅದರಂತೆ ನಾನು ನಡೆದುಕೊಂಡಿದ್ದೇನೆ. ತಪ್ಪು ಮಾಡಿಲ್ಲವೆಂದ ಮೇಲೆ ಕ್ಷಮೆ ಕೇಳುವ ಅಗತ್ಯವಿಲ್ಲ. ಅಲ್ಲದೆ, ಮೊನ್ನೆಯ ಪ್ರತಿಭಟನೆಯಲ್ಲಿ ಕೆಲವರು ನನ್ನ ಬಗ್ಗೆ ಕೆಟ್ಟ ಭಾಷೆ, ಅವಮಾನ, ಪ್ರತಿಕೃತಿ ದಹನ ಮಾಡಿದ್ದರ ವಿರುದ್ಧ ಬಡಾವಣೆ ಠಾಣೆಯಲ್ಲಿ 12 ಜನರ ಬಗ್ಗೆ ದೂರು ದಾಖಲಿಸಿದ್ದೇನೆ. ಈ ಕೂಡಲೇ ಎಸ್ಪಿಯವರು ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ನಗರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ ಎಂದರು.
ಬಸವಂತಪ್ಪ ಯಾರು?:
ಒಂದು ಕೋಮಿನ ಜನತೆ ವಿನಾಕಾರಣ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಜಿ.ಪಂ. ಸದಸ್ಯ ಬಸವಂತಪ್ಪನ ಕೈವಾಡವೂ ಇದೆ ಎಂದು ಗಂಭೀರ ಆರೋಪ ಮಾಡಿದ ವೈ.ರಾಮಪ್ಪ, ನನ್ನನ್ನು ರಾಜಕೀಯವಾಗಿ ಮುಗಿಸಿದರೆ, ಮುಂದೆ ತನಗೆ ರಾಜಕೀಯ ಹಾದಿ ಸುಗಮವಾಗಲಿದೆ ಎಂಬ ದುರುದ್ದೇಶದಿಂದ ಬಸವಂತಪ್ಪ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾನೆ. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕು, ಕ್ಷಮೆ ಕೇಳಬೇಕು ಎಂದು ಹೇಳಲು ಇವನ್ಯಾರೂ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸಂಸ್ಕತಿ, ಸಿದ್ಧಾಂತದ ಬಗ್ಗೆ ಬಸವಂತಪ್ಪನಿಂದ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ. ಈಗ ನಡೆದಿರುವ ಪ್ರಕರಣದಲ್ಲಿ ನಾನು ಅಹಿಂದ ದುರುಪಯೋಗ ಪಡಿಸಿಕೊಂಡಿಲ್ಲ. ಎಲ್ಲಾ ಸಮುದಾಯದವರು ಸ್ವಯಂಪ್ರೇರಿತರಾಗಿ ನಮ್ಮೊಂದಿಗಿದ್ದಾರೆ ಎಂದ ಅವರು, ಬಸವಂತಪ್ಪ ತನ್ನ ಅಸಂವಿಧಾನಿಕ ಪದಬಳಕೆ, ದುರಹಂಕಾರದಿಂದ ವೀಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ ವಿನಾ ನಮ್ಮಿಂದಲ್ಲ. ಹಾಗಾಗಿ, ಯಾವುದೋ ಕೋಮಿನ ಜನರನ್ನು ಓಲೈಸಲು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಾಹೀೀರ್ ಪಟೇಲ್, ಹೂವಿನಮಡು ಚನ್ನಬಸಪ್ಪ, ಪ್ರಭುದೇವ್, ಬಸವರಾಜಪ್ಪ, ಕರಿಬಸಪ್ಪ, ಚಿರಡೋಣಿ ಮಂಜುನಾಥ್, ನಾಗರಾಜ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








