ಹೊಸಪೇಟೆ:
ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗೆಂದು ಗೂಡ್ಸ್ ವಾಹನ ಸಂಚಾರಕ್ಕೆ ಸರ್ಕಾರ ಮುಕ್ತ ಅವಕಾಶ ನೀಡಿದೆ. ಆದರೆ ಈ ಅವಕಾಶವನ್ನು ಕೆಲ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಿದರ್ಶನಗಳು ಪ್ರತಿದಿನ ಒಂದಿಲ್ಲೊಂದು ಜಿಲ್ಲೆಯಲ್ಲಿ ಕಾಣಿಸುತ್ತಲೆ ಇದೆ.
ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ಇದನ್ನು ಕೆಲ ಚಾಲಕರು ದುರುಪಯೋಗ ಪಡಿಸಿಕೊಂಡು ಜನಗಳ ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಇಂತಹುದೊಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಹೊಸಪೇಟೆ ಮಾರ್ಗವಾಗಿ ದೇವದುರ್ಗಾಕ್ಕೆ ತೆರಳುತಿದ್ದ ಲಾರಿಯನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಸಾಕಷ್ಟು ಜನರು ಇದ್ದದು ಕಂಡುಬಂದಿದೆ.
ಬೆಂಗಳೂರಿನ ನೆಲಂಮಗಲದಿಂದ ರಾಯಚೂರು ದೇವದುರ್ಗಕ್ಕೆ ಕೂಲಿ ಕಾರ್ಮಿಕರನ್ನು ಚಾಲಕ ಕರೆದೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹೊಸಪೇಟೆ ಡಿ.ವೈಎಸ್ಪಿ ರಘುಕುಮಾರ್ ಅವರು, ಲಾಕ್ ಡೌನ್ ನಿಮಿತ್ತ ಲಾರಿಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಬೆಂಗಳೂರು ಮೂಲದ 407ಗಾಡಿಯಲ್ಲಿ ಜನಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಜನಗಳು ಕಾಣದಂತೆ ಲಾರಿಯ ಮೇಲ್ಬಾಗಕ್ಕೆ ಟಾರ್ಪಲೀನ್ ಮುಚ್ಚಲಾಗಿತ್ತು. ಅಂತೆಯೇ ಲಾರಿಯಲ್ಲಿದ್ದ ಕೆಲವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಲಾರಿಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ