ಬೆಂಗಳೂರು:
ಸಾಲಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ 12 ಷರತ್ತುಗಳನ್ನು ವಿಧಿಸಿ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳ ಸಂಗ್ರಹಕ್ಕಾಗಿ ರೈತರು ಅಲೆದಾಡುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ. ಇದುವರೆಗೂ ಸಾಲಮನ್ನಾ ಪ್ರಯೋಜನ ರೈತರಿಗೆ ಆಗಿಲ್ಲ. ಸರ್ಕಾರ ತಕ್ಷಣ ಋಣಮುಕ್ತ ಪತ್ರ ವಿತರಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕಳೆದ ಮೂರು ತಿಂಗಳ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಚಿವರು ಕೇವಲ ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆ ಮತ್ತು ವಿಧಾನಸೌಧದಲ್ಲಿ ಆಡಳಿತ ಚುರುಕುಗೊಳಿಸುವ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂದು ಅವರು ದೂರಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿಲ್ಲ. ಅಪ್ಪಮಕ್ಕಳ ಸರ್ಕಾರ ಆಡಳಿತ ಮಾಡುತ್ತಿದೆ. ಜೆಡಿಎಸ್ ಸಾಲಮನ್ನಾ ಘೋಷಣೆ ಮಾಡಿದ್ದು ಚುನಾವಣೆಗೊಸ್ಕರ. ಇದು ಕಣ್ಣೊರೆಸುವ ತಂತ್ರವಾಗಿದೆ. ಸರ್ಕಾರದಿಂದ ಒಬ್ಬರಿಗೂ ಇದುವರೆಗೂ ಸಾಲಮನ್ನಾದ ಪ್ರಯೋಜನ ಕೊಟ್ಟಿಲ್ಲ. ಕೂಡಲೇ ಸಾಲಮನ್ನಾ ಕುರಿತು ಅಧಿಕೃತ ಆದೇಶ ಹೊರಡಿಸಿ ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡಿ ಎಂದರು.
ಕಳೆದ ತಿಂಗಳ 27ರಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ದಾಂಧಲೆ ಅತ್ಯಂತ ಖಂಡನೀಯವಾದದ್ದು. ¨ ವಿವಿಗೆ ನುಗ್ಗಿ ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.
ರಾಣಿ ಚನ್ನಮ್ಮ ವಿವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರೊಬ್ಬರ ಬೆಂಬಲಿಗರು ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಕುಲಪತಿ ಶಿವಾನಂದ ಹೊಸಮನಿ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ನಡೆದು ಐದಾರು ದಿನವಾದರೂ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ನವದೆಹಲಿಯ ಜವಹಾರ್‍ಲಾಲ್ ವಿಶ್ವವಿದ್ಯಾಲಯ ರೀತಿ ರಾಣಿ ಚನ್ನಮ್ಮ ವಿವಿಯಲ್ಲೂ ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ. ಸಿದ್ದು ಸುಣಗಾರ್ ಎಂಬುವರಿಂದ ದಾಂಧಲೆ ನಡೆದಿರುವುದು ಸಾಬೀತಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ,ಬೆಂಗಳೂರು ನಗರದಲ್ಲಿರುವ 1 ಗುಂಡಿಗಳನ್ನು ಮುಚ್ಚಲು 3ಲಕ್ಷ ರೂ.ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ. ಜನರ ತೆರಿಗೆ ಹಣವನ್ನು ಹೇಗೆ ಕೊಳ್ಳೆ ಹೊಡೆ ಯಬಹುದು ಎಂಬುದಕ್ಕೆ ಇದೇ ನಿದರ್ಶನ. ಹೈಕೋರ್ಟ್ ಛೀಮಾರಿ ಹಾಕಿದ್ದರೂ ಬಿಬಿಎಂಪಿ ಇನ್ನು ನಿದ್ದೆಯಿಂದ ಎದ್ದಿಲ್ಲ ಎಂದು ವ್ಯಂಗ್ಯವಾಡಿದರು.
ಸರ್ಕಾರಕ್ಕಾಗಲಿ ಅಥವಾ ಬಿಬಿಎಂಪಿಯಲ್ಲಿ ಅಧಿಕಾರ ನಡೆಸುತ್ತಿರುವವರಿಗೆ ಸೂಕ್ಷ್ಮತೆ ಇಲ್ಲ. ಇದು ದಪ್ಪ ಚರ್ಮದ ಸರ್ಕಾರ. ಒಂದು ಗುಂಡಿ ಮುಚ್ಚಲು ಮೂರು ಲಕ್ಷ ಬೇಕು ಎಂದರೆ ಬಿಬಿಎಂಪಿಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಊಹಿಸಿಕೊಳ್ಳಬಹುದು. ಅಧಿಕಾರಿಗಳು ಚಿನ್ನ ಬೆಳ್ಳಿ ಹಾಕಿ ಗುಂಡಿ ಮುಚ್ಚುತ್ತಿದ್‍ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.








