ಸಂಸ್ಕೃತ ಶಿಕ್ಷಣಕ್ಕೆ ಜೊತೆಗೆ ಉಚಿತ ಶಿಕ್ಷಣಕ್ಕೆ ಸರ್ಕಾರ ಚಿಂತನೆ ನಡೆಸಬೇಕು : ವಜುಭಾಯಿ ರೂಡಾಭಾಯಿ ವಾಲಾ

ಬೆಂಗಳೂರು

     ದೇವ ಭಾಷೆ ಎಂದೇ ಖ್ಯಾತಿ ಹೊಂದಿ ವಿಶ್ವದ ಸಾವಿರಾರು ಭಾಷೆಗಳಿಗೆ ಜೀವ ತುಂಬಿರುವ ಸಂಸ್ಕೃತಕ್ಕೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಆದ್ಯತೆ ನೀಡಬೇಕು ಎಂದು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಹೇಳಿದರು.

    ನಗರದ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸ್ಕೃತ ಶಿಕ್ಷಣಕ್ಕೆ ಆದ್ಯತೆ ಜೊತೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

    ಭಾರತದ ಸಂಸ್ಕೃತಿ, ಪರಂಪರೆಗೆ ಸಂಸ್ಕೃತ ಭಾಷೆ ಅನನ್ಯ ಕೊಡುಗೆಯನ್ನು ನೀಡಿದೆ. ಅದನ್ನು ಉಳಿಸುವ ಜೊತೆಯಲ್ಲಿ, ಶಿಕ್ಷಣ ದಲ್ಲೂ ಪ್ರಾಧಾನ್ಯ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ ಸಹಸ್ರ ವರ್ಷಗಳಿಂದ ನಾನಾ ಪ್ರಕಾರದಲ್ಲಿ ಸಹೃದಯರಿಗೆ ಸಂಸ್ಕೃತ ಆನಂದ ನೀಡುತ್ತಿತ್ತು. ಆದರೆ, 19ನೇ ಶತಮಾನದಿಂದ ಈಚೆಗೆ ಸಂಸ್ಕೃತಕ್ಕೆ ಧಕ್ಕೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

     ಸಂಸ್ಕೃತ ಭಾಷೆ ಅತ್ಯಂತ ಶ್ರೇಷ್ಠ ಭಾಷೆ, ಶ್ರೀಮಂತ ಭಾಷೆ. ಈ ಭಾರತದ ಶಕ್ತಿ ಸಂಪತ್ತು ಅಪಾರವಾದದ್ದು. ಭಾರತದ ಎಲ್ಲ ಭಾಷೆಗಳಿಗೂ ಕಾಣಿಕೆ ಕೊಟ್ಟ ಭಾಷೆ ಸಂಸ್ಕೃತ. ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರು ಕಲಿಯುವ ಪ್ರಯತ್ನ ಮಾಡಬೇಕು ಎಂದ ಅವರು,ಸಂಸ್ಕೃತ ಭಾಷೆಯ ಬಗ್ಗೆ ವಿದೇಶಗಳಲ್ಲಿಯೂ ಒಲವು ಬೆಳೆಯುತ್ತಿದೆ. ವಿದೇಶಿಗರಲ್ಲಿ ಅನೇಕರು ಸಂಸ್ಕೃತ ಭಾಷೆಯ ಮಹತ್ವವನ್ನು ಅರಿತುಕೊಂಡಿದ್ದಾರೆ. ಅವರು ಸಹ ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ನುಡಿದರು.

     ದೇಶದೊಳಗೆ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚು ಗಮನ ವಹಿಸಬೇಕು. ನಗರ ಪ್ರದೇಶದಲ್ಲಿ ಬಡವನಿಗೂ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇರುತ್ತದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಬಯಸಿದರೂ ಗುಣಮಟ್ಟದ ಶಿಕ್ಷಣ ದೊರಕುವ ಸಾಧ್ಯತೆ ಕಡಿಮೆ. ಶಿಕ್ಷಣ ಸಂಸ್ಥೆಗಳಿಂದ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಆಗಿದೆ ಎಂದರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ವಿಶ್ವವಿದ್ಯಾಲಯಗಳು ಹಳ್ಳಿಗಳತ್ತ ಹೋಗಬೇಕು.ಅಲ್ಲಿನ ಶಿಕ್ಷಣ ವ್ಯವಸ್ಥೆ ಮೇಲೆ ಪ್ರಭಾವ ಬೀರಬೇಕು ಎಂದು ತಿಳಿಸಿದರು.

     ಪ್ರತಿ ಪ್ರದೇಶದಲ್ಲೂ ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ಕೇಂದ್ರ ತೆರೆಯಲು ಚಿಂತನೆ ನಡೆಸಿದ್ದು, ಮುಂದಿನ ವರ್ಷಜಾರಿಗೆ ಬರಲಿದೆ. ಅದೇ ರೀತಿ, ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕು. ಇಂತಹ ಹೊಸ ಹೋಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

      ಈ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಡಾ.ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ  ಪ್ರೊ.ಪದ್ಮಾ ಶೇಖರ್ ಸೇರಿದಂತೆ ಪ್ರಮುಖರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap